ಗದಗ: ನಗರದ ಐತಿಹಾಸಿಕ ಹಿನ್ನೆಲೆ ಹೊಂದಿರುವ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಅಳವಡಿಸಲಾಗಿರುವ ಬೃಹತ್ ಆಟಿಕೆಯೊಂದು ಮುರಿದುಬಿದ್ದು ಮಗು ಸೇರಿದಂತೆ 22 ಜನರು ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬ್ರೆಕ್ ಡ್ಯಾನ್ಸ್ ಹೆಸರಿನ ಬೃಹತ್ ಆಟಿಕೆಯಲ್ಲಿ ಎಂದಿನಂತೆ ಹಲವಾರು ಜನರು ಆಟವಾಡುತ್ತಿದ್ದರು. ಸಾವಿರಾರು ಜನರು ವೀಕ್ಷಣೆ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಕ್ಷಣಾರ್ಧದಲ್ಲಿ ಸ್ಥಳದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಯಿತು.ಈ ಬೃಹತ್ ಆಟಿಕೆ ಯಂತ್ರವೊಂದು ತಾಂತ್ರಿಕ ದೋಷದಿಂದ ಮುರಿದು ಬಿದ್ದ ಪರಿಣಾಮ ಅದರಲ್ಲಿ ಆಟವಾಡುತ್ತಿದ್ದವರಲ್ಲಿ 22ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ತೀರಾ ಗಂಭೀರವಾಗಿದೆ.
ಗಂಭೀರವಾಗಿ ಗಾಯಗೊಂಡ ಹುಬ್ಬಳ್ಳಿಯ ಮುಸ್ತಾಕ್ ಬಾಬು ಸಾಬ್ ಹಳೆಮನಿ ಎಂಬವರನ್ನು ಹುಬ್ಬಳ್ಳಿಯ ಕೆಎಂಸಿಆರ್‌ಗೆ ದಾಖಲಿಸಲಾಗಿದ್ದು, ಉಳಿದವರನ್ನು ಗದುಗಿನ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಜಾತ್ರೆಯ ನಿಮಿತ್ತ ಅಳವಡಿಸಲಾಗಿದ್ದ ಹಲವಾರು ಎತ್ತರದ ಆಟಿಕೆ ಯಂತ್ರಗಳಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ಉತ್ಸಾಹದಿಂದ ಆಟವಾಡುತ್ತಿದ್ದರು. ಬ್ರೆಕ್ ಡ್ಯಾನ್ಸ್ ಹೆಸರಿನ ಆಟಿಕೆಯು ವೇಗದಲ್ಲಿ ಸುತ್ತುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಅದರ ಒಂದು ಭಾಗ ತುಂಡಾಗಿ ಬಿದ್ದಿದೆ. ಪರಿಣಾಮವಾಗಿ ಅದರಲ್ಲಿದ್ದ ಹಲವಾರು ಜನರು ವೇಗವಾಗಿ ಎತ್ತರದಿಂದ ಬಿದ್ದ ಹಿನ್ನೆಲೆ ಹಲವರು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಆಟಿಕೆ ತುಂಬೆಲ್ಲಾ ರಕ್ತ ಸಿಡಿದಿದ್ದು, ಘಟನೆಯ ಭೀಕರತೆಯನ್ನು ಹೇಳುವಂತಿತ್ತು. ಇದರಿಂದಾಗಿ ಜಾತ್ರಾ ಮೈದಾನದಲ್ಲಿ ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆ ಸಂಭವಿಸುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರು ಹಾಗೂ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಗಾಯಗೊಂಡವರನ್ನು ಪೊಲೀಸರು ಸಾರ್ವಜನಿಕರ ನೆರವಿನೊಂದಿಗೆ ಆ್ಯಂಬುಲೆನ್ಸ್ ಹಾಗೂ ಖಾಸಗಿ ವಾಹನಗಳ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಪ್ರತಿಭಟನೆ
ಜಾತ್ರೆ ಹೆಸರಿನಲ್ಲಿ ತಿಂಗಳಾನುಗಟ್ಟಲೆ ಈ ರೀತಿಯ ಬೃಹತ್ ಆಟಿಕೆಗಳ ಅಳವಡಿಸಲು ಅವಕಾಶ ಕೊಡಬಾರದು ಎಂದು ಈ ಹಿಂದೆಯೇ ಹೋರಾಟ ಮಾಡುತ್ತಿದ್ದ ಹಿಂದು ಮುಖಂಡ ರಾಜು ಖಾನಪ್ಪನವರ ಭಾನುವಾರ ರಾತ್ರಿಯೇ ತೋಂಟದಾರ್ಯ ಮಠದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.