ರೈತರ ಸಮಸ್ಯೆ ಪರಿಹಾರಕ್ಕೆ ನಾಡಿದ್ದು ದೆಹಲಿಯಲ್ಲಿ ಬೃಹತ್‌ ಟ್ರ್ಯಾಕ್ಟರ್‌ ರ್ಯಾಲಿ: ರಾಕೇಶ್‌ ಟಿಕಾಯತ್‌

| Published : Feb 14 2024, 02:19 AM IST / Updated: Feb 14 2024, 01:14 PM IST

ರೈತರ ಸಮಸ್ಯೆ ಪರಿಹಾರಕ್ಕೆ ನಾಡಿದ್ದು ದೆಹಲಿಯಲ್ಲಿ ಬೃಹತ್‌ ಟ್ರ್ಯಾಕ್ಟರ್‌ ರ್ಯಾಲಿ: ರಾಕೇಶ್‌ ಟಿಕಾಯತ್‌
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನಸೆಳೆಯಲು ‘ಒಂದು ಗ್ರಾಮ, ಒಂದು ಟ್ರ್ಯಾಕ್ಟರ್‌’ ಪರಿಕಲ್ಪನೆಯಲ್ಲಿ ಫೆ.16ರಂದು ದೆಹಲಿಯಲ್ಲಿ ಬೃಹತ್‌ ಮೆರವಣಿಗೆ ನಡೆಸಲಾಗುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನಸೆಳೆಯಲು ‘ಒಂದು ಗ್ರಾಮ, ಒಂದು ಟ್ರ್ಯಾಕ್ಟರ್‌’ ಪರಿಕಲ್ಪನೆಯಲ್ಲಿ ಫೆ.16ರಂದು ದೆಹಲಿಯಲ್ಲಿ ಬೃಹತ್‌ ಮೆರವಣಿಗೆ ನಡೆಸಲಾಗುವುದು. 

ಅದಕ್ಕೆ ಎಲ್ಲ ರೈತರು ಸಿದ್ಧರಾಗಬೇಕು ಎಂದು ರೈತ ಮುಖಂಡ, ಭಾರತೀಯ ಕಿಸಾನ್‌ ಯೂನಿಯನ್‌ ಮತ್ತು ಸಂಯುಕ್ತ ಕಿಸಾನ್‌ ಮೋರ್ಚಾದ ನಾಯಕ ರಾಕೇಶ್‌ ಟಿಕಾಯತ್‌ ಕರೆ ನೀಡಿದರು.

ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ 88ನೇ ಜನ್ಮ ದಿನದ ಅಂಗವಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ‘ನಮ್ಮ ಎಂಡಿಎನ್‌’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದೆಲ್ಲೆಡೆ ರೈತರು ಸಂಕಷ್ಟದಲ್ಲಿದ್ದು, ಅದು ದೇಶದ ಅವನತಿಯ ಸಂಕೇತ ಎಂಬ ಅನುಮಾನ ಮೂಡುವಂತಾಗಿದೆ. ರೈತರಿಗೆ ನೆರವಾಗುವ ಸ್ವಾಮಿನಾಥನ್‌ ವರದಿಯಂತೆ ರೈತರಿಗೆ ಬೆಂಬಲ ಬೆಲೆ ನೀಡಲು ಕ್ರಮ ಕೈಗೊಳ್ಳಬೇಕು. 

ಅದರ ಜತೆಗೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿಯಲ್ಲಿ ಮತ್ತೊಂದು ಸುತ್ತಿನ ಆಂದೋಲ ನಡೆಸಲು ನಿರ್ಧರಿಸಲಾಗಿದೆ.

 ‘ಒಂದು ಗ್ರಾಮ ಒಂದು ಟ್ರ್ಯಾಕ್ಟರ್’ ಪರಿಕಲ್ಪನೆಯಲ್ಲಿ ಮೆರವಣಿಗೆ ನಡೆಸಲಾಗುವುದು. ಅದಕ್ಕೆ ಎಲ್ಲ ರಾಜ್ಯಗಳ ರೈತರು ಬೆಂಬಲ ನೀಡಬೇಕು ಎಂದರು.

ಪ್ರೊ. ನಂಜುಂಡಸ್ವಾಮಿ ಅವರು ರೈತ ವಿರೋಧಿ ಬಹುರಾಷ್ಟ್ರೀಯ ಸಂಸ್ಥೆಗಳ ನೀತಿಯ ವಿರುದ್ಧ ಹೋರಾಟ ಮಾಡಿದ್ದರು. 

ಹಿಂದಿ ಭಾಷೆ ಬರದಿದ್ದರೂ ದಕ್ಷಿಣ ಮತ್ತು ಉತ್ತರ ಭಾರತದ ರೈತ ಮುಖಂಡರನ್ನು ಹಾಗೂ ಸಂಘಟನೆಗಳನ್ನು ಒಗ್ಗೂಡಿಸಿ ರೈತ ಸಮುದಾಯಕ್ಕೆ ಬಲ ತಂದುಕೊಟ್ಟಿದ್ದರು. 

ಆ ಬಲದ ಪ್ರತಿಫಲವಾಗಿ ಈ ಹಿಂದೆ ದೆಹಲಿಯಲ್ಲಿ ರೈತ ಸಂಘಟನೆಗಳು 13 ತಿಂಗಳು ನಡೆಸಿದ ಹೋರಾಟ ಮಾಡಿದ್ದವು. ಅದರಿಂದಲೇ ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಿತು ಎಂದು ತಿಳಿಸಿದರು.

ಕರ್ನಾಟಕವು ರೈತ ಹೋರಾಟದ ಪ್ರಮುಖ ಲಾಂಛನವಾಗಿ ಬಳಕೆಯಾಗುತ್ತಿರುವ ಹಸಿರು ಶಾಲನ್ನು ದೇಶಕ್ಕೆ ನೀಡಿದೆ. ಕರ್ನಾಟಕವು ದೇಶದ ಎಲ್ಲ ಹೋರಾಟಗಳಿಗೆ ಪ್ರೇರಣೆ ನೀಡುವ ನೆಲವಾಗಿದೆ. 

ಮೊದಲಿಗೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಬಳಕೆಯಲ್ಲಿದ್ದ ರೈತರ ಹಸಿರು ಶಾಲುಗಳು ಸದ್ಯ ದೇಶಾದ್ಯಂತ ವಿಸ್ತರಿಸಿದೆ. 

ಕರ್ನಾಟಕದಲ್ಲಿ ಹಸಿರು ಪ್ರಜ್ಞೆಯನ್ನು ಜಾಗೃತಗೊಳಿಸಿದ ಶ್ರೇಯಸ್ಸು ರೈತಚೇತನ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್‌. ಪಾಟೀಲ್‌, ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್‌, ಭಾರತೀಯ ಕಿಸಾನ್‌ ಮೋರ್ಚಾದ ಪ್ರಮುಖ ಯುದ್ಧವೀರ ಸಿಂಗ್‌, ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಪಚ್ಚೆ ನಂಜುಂಡಸ್ವಾಮಿ, ಪ್ರೊ. ರಾಮಚಂದ್ರೇಗೌಡ, ನಲ್ಲಗೌಂಡರ್‌, ಹಿರಿಯ ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಇತರರಿದ್ದರು.

‘ನಮ್ಮ ಎಂಡಿಎನ್‌’ ಕಾರ್ಯಕ್ರಮದ ಅಂಗವಾಗಿ ದಿನವಿಡೀ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು, ರೈತ ಗೀತೆಗಳ ಗಾಯನ, ಸಂವಾದ, ನಾಟಕ ಪ್ರದರ್ಶನ, ದೇಸಿ ಬಿತ್ತನೆ ಬೀಜಗಳ ಪ್ರದರ್ಶನ ನಡೆಯಿತು. 

ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಚಿಂತನೆಯನ್ನಾಧರಿಸಿದ ‘ಬಾರುಕೋಲು’ ಕೃತಿ ಲೋಕಾರ್ಪಣೆ ಮಾಡಲಾಯಿತು.