ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಮದ್ದೂರು ಎಪಿಎಂಸಿ ಎಳನೀರು ಮಾರುಕಟ್ಟೆಯಲ್ಲಿ ಕಳೆದ ಐದು ವರ್ಷಗಳಲ್ಲಿ ₹898.33 ಕೋಟಿ ವಹಿವಾಟು ಆಗಿದ್ದು, ಈ ಮೊತ್ತದ ಬಾಬ್ತಿನಡಿ ₹9.51 ಕೋಟಿ ಆದಾಯ ಬಂದಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಮಾರುಕಟ್ಟೆಗೆ ಆಗಮಿಸುವ ರೈತರು, ಗ್ರಾಹಕರು, ವ್ಯಾಪಾರಸ್ಥರಿಗೆ ಸೂಕ್ತ ಮೂಲಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಮಾರುಕಟ್ಟೆ ಪ್ರಾಂಗಣದಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.ಕಳೆದ ಐದು ವರ್ಷಗಳಲ್ಲಿ (2018-19 ರಿಂದ 2022-23) ಸ್ವಚ್ಛತೆಗೆ ₹74.49 ಲಕ್ಷ ಹಾಗೂ ಮೂಲಸೌಕರ್ಯ ಕಲ್ಪಿಸಲು ₹7.11 ಕೋಟಿ ವೆಚ್ಚ ಭರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮದ್ದೂರು ಎಪಿಎಂಸಿ ಎಳನೀರು ಮಾರುಕಟ್ಟೆಯಲ್ಲಿ ರೈತರು, ಗ್ರಾಹಕರು, ವ್ಯಾಪಾರಸ್ಥರಿಗೆ ಮೂಲಸೌಲಭ್ಯ ಒದಗಿಸುವುದು ಮತ್ತು ಆವರಣದಲ್ಲಿ ಶುಚಿತ್ವ ಇಲ್ಲದಿರುವ ಬಗ್ಗೆ ಶಾಸಕ ಮಧು ಅವರು ವಿಷಯ ಪ್ರಸ್ತಾಪಿಸಿದ್ದರು.ಕಲ್ಲು ಗಣಿ ಗುತ್ತಿಗೆದಾರರಿಂದ ₹2678 ಲಕ್ಷ ಬಾಕಿ
ಮಂಡ್ಯ ಜಿಲ್ಲಾ ವ್ಯಾಪ್ಯಿಯಲ್ಲಿನ ಕಲ್ಲುಗಣಿ ಗುತ್ತಿಗೆದಾರರಿಂದ 2022-23ನೇ ಸಾಲಿನ ಅಂತ್ಯಕ್ಕೆ ಸರ್ಕಾರಕ್ಕೆ ₹2678 ಲಕ್ಷ ಬಾಕಿ ಪಾವತಿ ಆಗಬೇಕಿರುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದ್ದಾರೆ.ಕಲ್ಲು ಗಣಿಗಾರಿಕೆ ಗುತ್ತಿಗೆ/ ಲೈಸೆನ್ಸ್ ಪಡೆಯದೆ ಕಳೆದ ಐದು ವರ್ಷಗಳಲ್ಲಿ ಅಕ್ರಮ ಗಣಿಗಾರಿಕೆ ಸಂಬಂಧ 256 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ಮತ್ತು ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮಗಳಂತೆ 256 ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಶಾಸಕ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ಧ ದಾಖಲಿಸಿರುವ 256 ಮೊಕದ್ದಮೆಗಳ ಸಂಬಂಧ ಒಟ್ಟು 42.92 ಲಕ್ಷ ಮೆಟ್ರಿಕ್ ಟನ್ ಉಪ ಖನಿಜವನ್ನು ಅಂದಾಜಿಸಿದ್ದು, ಸದರಿ ಖನಿಜದ ಮೌಲ್ಯವು ₹53.11 ಕೋಟಿ ಆಗಿದ್ದು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದು ಮತ್ತೊಂದು ಪ್ರಶ್ನೆಗೆ ಮಾಹಿತಿ ನೀಡಿದ್ದಾರೆ.