ಪ್ರಧಾನಿ ಮೋದಿ ಜಾತಿ ಬಗ್ಗೆ ರಾಗಾ ಹೇಳಿಕೆಗೆ ಆಕ್ರೋಶ

| Published : Feb 14 2024, 02:18 AM IST

ಸಾರಾಂಶ

ಶಿವಮೊಗ್ಗದ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ಹಿಂದುಳಿದ ವರ್ಗಕ್ಕೆ ಅವಹೇಳನ ಮಾಡಿದ್ದಾರೆ ಎಂದು ಖಂಡಿಸಿ ನಗರದ ಶಿವಮೂರ್ತಿ ವೃತ್ತದಲ್ಲಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಭದ್ರಾವತಿ

ಅನಾವಶ್ಯಕವಾಗಿ ಪ್ರಧಾನಿ ನರೇಂದ್ರ ಮೋದಿಯವರ ಜಾತಿ ಕುರಿತು ಸುಳ್ಳು ಹೇಳಿಕೆ ನೀಡಿರುವ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ತಾಲೂಕು ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರು ಮೋದ್ ಕಾಂಚಿ, ತೇಲಿ, ತೈಲಿ ಸಮುದಾಯದ ಉಪಜಾತಿಗೆ ಸೇರಿದ್ದು, ಸಕ್ಷಮ ಪ್ರಾಧಿಕಾರ ಈ ಸಮುದಾಯವನ್ನು ಹಿಂದುಳಿದ ಸಮು ದಾಯವೆಂದು ಘೋಷಿಸಿದೆ. ಆದರೆ ರಾಹುಲ್ ಗಾಂಧಿ ಅವಶ್ಯಕತೆ ಇಲ್ಲದಿದ್ದರೂ ಜಾತಿ ಕುರಿತು ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಿಂದುಳಿದ ಆಯೋಗ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯಪಾಲರ ಮೂಲಕ ಮನವಿ ಸಲ್ಲಿಸಲಾಯಿತು.

ಮಂಡಲ ಓಬಿಸಿ ಅಧ್ಯಕ್ಷ ರಾಜಶೇಖರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕದಿರೇಶ್, ಮಂಡಲ ಬಿಜೆಪಿ ಅಧ್ಯಕ್ಷ ಜಿ. ಧರ್ಮ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಮಂಡಲ ಪದಾಧಿಕಾರಿಗಳಾದ ವಿ.ಕದಿರೇಶ್, ಮಂಗೋಟೆ ರುದ್ರೇಶ್, ಬಿ.ಕೆ ಶ್ರೀನಾಥ್, ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ಎಚ್. ತೀರ್ಥಯ್ಯ, ಕಾ.ರಾ ನಾಗರಾಜ್, ಸುಬ್ರಮಣ್ಯ, ಅವಿನಾಶ್, ಗೋಕುಲ್ ಕೃಷ್ಣ, ಮಹಿಳಾ ಪ್ರಮುಖರಾದ ಸರಸ್ವತಿ, ಮಂಜುಳ, ಶಕುಂತಲ, ಆಶಾ ಪುಟ್ಟಸ್ವಾಮಿ ಸೇರಿದಂತೆ ಎಲ್ಲಾ ಮೋರ್ಚಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕ್ಷಮೆ ಯಾಚನೆಗೆ ಆಗ್ರಹಿಸಿ ರಾಹುಲ್‌ ಪ್ರತಿಕೃತಿ ದಹನ

ಶಿವಮೊಗ್ಗ: ಹಿಂದುಳಿದ ವರ್ಗಕ್ಕೆ ಅವಹೇಳನ ಮಾಡಿದ ರಾಹುಲ್ ಗಾಂಧಿಯವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಶಿವಮೂರ್ತಿ ವೃತ್ತದಲ್ಲಿ ರಾಹುಲ್ ಗಾಂಧಿಯವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.

ರಾಹುಲ್‌ಗಾಂಧಿಯವರು ಅಸಂಬದ್ದ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಈಗ ಹಿಂದುಳಿದ ವರ್ಗ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಬರದಲ್ಲಿ ಕರ್ನಾಟಕದಲ್ಲಿ ಗಾಣಿಗ ಸಮಾಜ ಹಿಂದುಳಿದ ವರ್ಗಕ್ಕೆ ಸೇರಿದಿಲ್ಲ ಅರ್ಥಹೀನ ಹೇಳಿಕೆ ನೀಡಿದ್ದಾರೆ.

ತೇಲಿ ಸಮಾಜ ಎಂದರೇ ಕರ್ನಾಟಕದಲ್ಲಿ ಗಾಣಿಗ ಸಮಾಜ ಎಂದು ಅರ್ಥ. ಈ ಸಮಾಜ ಬಹಳ ಹಿಂದುಳಿದ ಸಮಾಜವಾಗಿದೆ. ಇಂತಹ ಸಮಾಜದಿಂದ ಬಂದಂತಹ ಪ್ರಧಾನ ಮಂತ್ರಿ ಮೋದಿ ಎಂಬುವುದು ಹೆಮ್ಮೆ ಪಡುವ ವಿಷಯ. ಆದರೆ, ರಾಹುಲ್ ಅವರು ಇದನ್ನು ತಿಳಿಯದೇ ಅವಹೇಳನ ಮಾಡಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.1994ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ತೇಲಿ ಅಥವಾ ಗಾಣಿಗ ಸಮಾಜವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿದ್ದಾರೆ. ಇದನ್ನು ಖುದ್ದು ಅಂದಿನ ಕಾಂಗ್ರೆಸ್‌ ಉಪ ಮುಖ್ಯಮಂತ್ರಿ ಗಳೇ ಸ್ಪಷ್ಟ ಪಡಿಸಿದ್ದಾರೆ. ನಂತರ ಕೇಂದ್ರ 1999 ರಲ್ಲಿ ಗಾಣಿಗ ಸಮಾಜವನ್ನು ಕೇಂದ್ರ ಓಬಿಸಿ ಲಿಸ್ಟ್‌ನಲ್ಲಿ ಸೇರಿಸಿದ್ದಾರೆ ಎಂದರು. ಆದ್ದರಿಂದ ಪ್ರಧಾನಮಂತ್ರಿಗಳಿಗೂ ಹಾಗೂ ಹಿಂದುಳಿದ ವರ್ಗಕ್ಕೂ ಅವಹೇಳನ ಮಾಡಿರುವ ರಾಹುಲ್‌ಗಾಂಧಿಯವರು ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಟಿ.ಡಿ.ಮೇಘರಾಜ್, ಆರ್.ಕೆ.ಸಿದ್ರಾಮಣ್ಣ, ಮೋಹನ್‌ರೆಡ್ಡಿ, ಶಿವರಾಜ್, ಸಿ.ಎಚ್.ಮಾಲತೇಶ್, ಸುಧಾಕರ್, ಕುಪ್ಪೇಂದ್ರ, ಪ್ರದೀಪ್ ಹೊನ್ನಪ್ಪ, ಪುರುಷೋತ್ತಮ, ವಿಕಾಸ್, ಪ್ರಭಾಕರ್, ರಂಗನಾಥ್, ವಿನ್ಸಟ್ ರೂಡ್ರಿಗಸ್, ವೀರಭದ್ರಪ್ಪ ಪೂಜಾರಿ, ಸುರೇಖಾ ಮುರಳೀಧರ್, ದರ್ಶನ್, ಹರೀಶ್, ರಾಮು, ಅಣ್ಣಪ್ಪ ಮತ್ತಿತರರು ಇದ್ದರು.