ನೂತನ ಮರಳು ಬ್ಲಾಕ್ ಹಂಚಿಕೆ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ, ಕೆಲವರಿಗೆ ಅನುಕೂಲವಾಗುವ ರೀತಿಯಲ್ಲಿ ಹಂಚಿಕೆ ಮಾಡಲು ಯತ್ನಿಸಲಾಗಿದೆ ಎಂದು ಆರೋಪಿಸಿ ಗುತ್ತಿಗೆದಾರರು ಜಿಲ್ಲಾಡಳಿತ ಭವನದ ಮುಖ್ಯದ್ವಾರದಲ್ಲಿಯೇ ಸಚಿವರನ್ನು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗದಗ: ಜಿಲ್ಲೆಯ ತುಂಗಭದ್ರಾ ನದಿ ಮರಳು ಗುತ್ತಿಗೆ ಟೆಂಡರ್ ಪ್ರಕ್ರಿಯೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಸಮ್ಮುಖದಲ್ಲಿಯೇ ಮರಳು ಗುತ್ತಿಗೆದಾರರು ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿರುದ್ಧ ಸೋಮವಾರ ಗಂಭೀರ ಆರೋಪಗಳನ್ನು ಮಾಡಿದರು.
ನೂತನ ಮರಳು ಬ್ಲಾಕ್ ಹಂಚಿಕೆ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ, ಕೆಲವರಿಗೆ ಅನುಕೂಲವಾಗುವ ರೀತಿಯಲ್ಲಿ ಹಂಚಿಕೆ ಮಾಡಲು ಯತ್ನಿಸಲಾಗಿದೆ ಎಂದು ಆರೋಪಿಸಿ ಗುತ್ತಿಗೆದಾರರು ಜಿಲ್ಲಾಡಳಿತ ಭವನದ ಮುಖ್ಯದ್ವಾರದಲ್ಲಿಯೇ ಸಚಿವರನ್ನು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.ತುಂಗಭದ್ರಾ ನದಿ ಪಾತ್ರದ ಮರಳು ಉತ್ತರ ಕರ್ನಾಟಕದಲ್ಲಿ ಅತ್ಯಂತ ಬೇಡಿಕೆಯಲ್ಲಿದ್ದು, ಹುಬ್ಬಳ್ಳಿ- ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಸರಬರಾಜಾಗುತ್ತದೆ. ಗುಣಮಟ್ಟದ ಮರಳಿನಿಂದಾಗಿ ಈ ಮರಳು ಗುತ್ತಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಪರಿಣಮಿಸಿದ್ದು, ಟೆಂಡರ್ ಪಡೆಯಲು ಭಾರೀ ಪೈಪೋಟಿ ನಡೆಯುತ್ತಿದೆ. ಸಕಾರಣವಿಲ್ಲದೇ ನಮ್ಮ ಅರ್ಜಿ ತಿರಸ್ಕರಿಸಿದ್ದಾರೆ ಎಂದು ಮರಳು ಗುತ್ತಿಗೆದಾರರು ದೂರಿದರು.
350 ಅರ್ಜಿಗಳಲ್ಲಿ 129 ತಿರಸ್ಕಾರ: ಟೆಂಡರ್ ಪ್ರಕ್ರಿಯೆಯಲ್ಲಿ 350ಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 129 ಅರ್ಜಿಗಳನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ ತಿರಸ್ಕರಿಸಲಾಗಿದೆ. ತಿರಸ್ಕಾರಕ್ಕೆ ದಾಖಲೆಗಳನ್ನು ಕೊಡುತ್ತಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದರು. ರೋಣ ಹಾಗೂ ಹುಬ್ಬಳ್ಳಿ ಭಾಗದ ಅರ್ಜಿದಾರರ ಮಾತುಗಳನ್ನು ಕೇಳಿ ನಮ್ಮ ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ ಎಂದು ಸಚಿವರ ಎದುರಲ್ಲೇ ಆಕ್ರೋಶ ಹೊರಹಾಕಿದರು.ಬಾನಗಡಿ ನಡೆಯಬಾರದು: ತಮ್ಮ ಸಮ್ಮುಖದಲ್ಲಿಯೇ ಈ ರೀತಿಯ ಘಟನೆ ನಡೆಯುತ್ತಿದ್ದಂತೆ ಕೋಪಗೊಂಡ ಸಚಿವ ಎಚ್.ಕೆ. ಪಾಟೀಲ, ಈ ರೀತಿಯ ಬಾನಗಡಿ ಕೆಲಸಗಳು ನಮ್ಮ ಜಿಲ್ಲೆಯಲ್ಲಿ ನಡೆಯಬಾರದು. ಗೊಂದಲ ಇದ್ದರೆ ಟೆಂಡರ್ ಪ್ರಕ್ರಿಯೆ ರದ್ದು ಮಾಡಿ ಹೊಸದಾಗಿ ಪಾರದರ್ಶಕವಾಗಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆದರೆ, ಈ ಹಂತದಲ್ಲಿ ಟೆಂಡರ್ ರದ್ದು ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ಜಿಲ್ಲಾಧಿಕಾರಿಯಿಂದ ಬಂದಿತು. ಇದರಿಂದ ಗುತ್ತಿಗೆದಾರರ ಅಸಮಾಧಾನ ಮತ್ತಷ್ಟು ಹೆಚ್ಚಾಯಿತು.ಭುಗಿಲೆದ್ದ ವಾಗ್ವಾದ: ಸಾರ್ವಜನಿಕರ ಸಮ್ಮುಖದಲ್ಲಿಯೇ ನಡೆದ ಈ ಘಟನೆಯಿಂದ ಆಕ್ರೋಶಗೊಂಡ ಸಚಿವರು ಅಧಿಕಾರಿಗಳನ್ನು ಕರೆದುಕೊಂಡು ಅಲ್ಲಿಂದ ತೆರಳುತ್ತಿದ್ದಂತೆಯೇ ಕೆಲ ಮರಳು ಗುತ್ತಿಗೆದಾರರು ಮತ್ತು ಜಿಲ್ಲಾಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿತ್ತು.
ಸ್ಥಳದಲ್ಲಿನ ಗದ್ದಲ ಹೆಚ್ಚಾಗುತ್ತಿದ್ದಂತೆ ಎಸ್ಪಿ ಸ್ಥಳಕ್ಕೆ ಆಗಮಿಸಿ, ಇಲ್ಲಿ ಚರ್ಚೆ ಬೇಡ, ಒಳಗಡೆ ಕೂತು ಚರ್ಚಿಸೋಣ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದೀರ್ಘ ಸಭೆ ನಡೆಯಿತು.ಟೆಂಡರ್ ಮುಂದೂಡುವುದಿಲ್ಲ: ಸಭೆಯ ವೇಳೆ ಜಿಲ್ಲಾಧಿಕಾರಿಗಳು, ನಾಳೆ ಸಂಜೆಯೊಳಗೆ ರದ್ದಾಗಿರುವ ಅರ್ಜಿಗಳ ಸಂಬಂಧಿತ ಎಲ್ಲಾ ದಾಖಲೆಗಳನ್ನು ತಂದು ಕೊಡಿ ಎಂದು ಸೂಚಿಸಿ, ಯಾವುದೇ ಕಾರಣಕ್ಕೂ ಟೆಂಡರ್ ಪ್ರಕ್ರಿಯೆಯನ್ನು ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮರಳು ಗುತ್ತಿಗೆದಾರರು, ಈ ಪ್ರಕ್ರಿಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಬಲವಾದ ಅನುಮಾನವಿದೆ. ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಗೊಣಗುತ್ತಲೇ ಸಭೆಯಿಂದ ಹೊರನಡೆದರು.