ಸಾರಾಂಶ
ವಿಶ್ವನಾಥ್ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೇಸಿಗೆ ಬಿಸಿಲು ಹೆಚ್ಚಾದಂತೆ ನಗರದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೆಲವು ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಪ್ರಮಾಣದಲ್ಲಿ ಕಡಿತಗೊಳಿಸಿರುವ ದೂರುಗಳು ವ್ಯಕ್ತವಾಗುತ್ತಿವೆ.
ಅದರಲ್ಲೂ ನ್ಯೂ ಬಿಇಎಲ್ ರಸ್ತೆಯ ಜಲದರ್ಶನಿ ಲೇಔಟ್, ನಾಗಶೆಟ್ಟಿ ಹಳ್ಳಿ, ಸಂಜಯ್ ನಗರ, ಭದ್ರಪ್ಪ ಲೇಔಟ್, ಬೈರಪ್ಪ ಲೇಔಟ್, ಭೂಪಸಂದ್ರ, ಟೀಚರ್ಸ್ ಕಾಲೋನಿ, ಎಂ.ಎಸ್.ರಾಮಯ್ಯ ಬಡಾವಣೆ, ಗೊರಗುಂಟೆ ಪಾಳ್ಯ, ಗೆದ್ದಲಹಳ್ಳಿ, ಪೀಣ್ಯ ಕೈಗಾರಿಕಾ ಪ್ರದೇಶ, ಯಶವಂತಪುರದ ಪ್ರಮುಖ ಭಾಗದಲ್ಲಿ ಈ ಹಿಂದೆ ಪೂರೈಕೆ ಮಾಡುತ್ತಿದಷ್ಟು ನೀರು ಪೂರೈಕೆ ಆಗುತ್ತಿಲ್ಲ. ಹೀಗಾಗಿ, ಈ ಪ್ರದೇಶದಲ್ಲಿ ನಿಧಾನವಾಗಿ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ.
ಕೊಳವೆ ಬಾವಿ ಹೊಂದಿರುವವರಿಗೆ ಹೆಚ್ಚಿನ ಸಮಸ್ಯೆ ಆಗುತ್ತಿಲ್ಲ. ಆದರೆ, ಕೊಳವೆ ಬಾವಿ ಇಲ್ಲದೇ ಕಾವೇರಿ ನೀರಿನ ಮೇಲೆ ಸಂಪೂರ್ಣವಾಗಿ ಅವಲಂಬನೆ ಆಗಿರುವವರೆಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ.
ಇದೇ ರೀತಿಯ ಸಮಸ್ಯೆಗಳು 110 ಹಳ್ಳಿಗೆ ಹೊಂದಿಕೊಂಡಿರುವ ಕಾವೇರಿ ನೀರು ಪೂರೈಕೆ ವ್ಯವಸ್ಥೆ ಹೊಂದಿರುವ ಪ್ರದೇಶದಲ್ಲಿ ಆಗುತ್ತಿದೆ ಎಂದು ಹೆಮ್ಮಿಗೆಪುರ ನಿವಾಸಿಗಳು ಮಾಹಿತಿ ನೀಡಿದ್ದಾರೆ.
ನಿಧಾನಗತಿ ನೀರು: ಮತ್ತೆ ಕೆಲವು ಪ್ರದೇಶದಲ್ಲಿ ಜಲಮಂಡಳಿಯು ನೀರು ಪೂರೈಕೆ ಮಾಡುವ ಕೊಳವೆಗಳಲ್ಲಿ ನೀರಿನ ವೇಗ ಕಡಿಮೆಗೊಳಿಸಲಾಗಿದೆ. ನಿಧಾನಗತಿಯಲ್ಲಿ ನೀರು ಬಿಡಲಾಗಿದೆ.
ಇದರಿಂದ ಕೆಲವು ಮನೆಗಳಿಗೆ ನೀರು ಹರಿದರೆ ಮತ್ತೆ ಕೆಲವು ಮನೆಗಳಿಗೆ ನೀರೇ ಬರುತ್ತಿಲ್ಲ. ನೀರು ಉಳಿತಾಯ ಮಾಡುವ ಉದ್ದೇಶದಿಂದ ಈ ರೀತಿ ನಿಧಾನಗತಿಯಲ್ಲಿ ನೀರು ಹರಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.
ತೀರಾ ಕೊರತೆ ಭಾಗಕ್ಕೆ ಹಂಚಿಕೆ
ಪೂರೈಕೆ ಆಗುತ್ತಿರುವ 1,450 ಎಂಎಲ್‌ಡಿ ನೀರಿನಲ್ಲಿಯೇ ಸದ್ಯ ಪೂರೈಕೆ ಮಾಡುತ್ತಿರುವ ಪ್ರದೇಶಗಳಿಗೆ ಸ್ವಲ್ಪ ಮಟ್ಟಿನ ನೀರನ್ನು ಉಳಿತಾಯ ಮಾಡಿ ಆ ನೀರನ್ನು ತೀರಾ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಹಾಗೂ ಇತರೆ ವ್ಯವಸ್ಥೆ ಮೂಲಕ ಹಂಚಿಕೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ಬೇಸಿಗೆ ಅವಧಿ ಮುಕ್ತಾಯಗೊಳ್ಳುವವರೆಗೆ ಬೆಂಗಳೂರು ನಗರಕ್ಕೆ ಬೇಕಾದಷ್ಟು ನೀರು ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಲ್ಲಿ ಇದೆ. ಪ್ರತಿ ದಿನ ನಗರಕ್ಕೆ 1,450 ಎಂಎಲ್‌ಡಿ ಕಾವೇರಿ ನೀರು ಪೂರೈಕೆಯಾಗುತ್ತಿದೆ.
ನೀರು ಪೂರೈಕೆ ಪ್ರಮಾಣದಲ್ಲಿ ಯಾವುದೇ ಕಡಿತಗೊಳಿಸಿಲ್ಲ ಎಂದು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ನಗರದ ಕೇಂದ್ರ ಭಾಗದಲ್ಲಿರುವ ಪ್ರಮುಖ ಪ್ರದೇಶಗಳಿಗೆ ನೀರಿನ ಪೂರೈಕೆ ಪ್ರಮಾಣದಲ್ಲಿ ಕೊರತೆ ಉಂಟಾಗಿದೆ.
ಕಾವೇರಿ ನೀರು ಪೂರೈಕೆ ಪ್ರಮಾಣದಲ್ಲಿ ಒಂದೇ ಒಂದು ಹನಿ ಕಡಿಮೆ ಮಾಡಿಲ್ಲ. 110 ಹಳ್ಳಿ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳು ಬತ್ತಿ ನೀರಿನ ಸಮಸ್ಯೆ ಉಂಟಾಗಿದೆ. ಕಾವೇರಿ ನೀರು ಪೂರೈಕೆ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ. -ಸುರೇಶ್, ಮುಖ್ಯ ಎಂಜಿನಿಯರ್, ಬೆಂಗಳೂರು ಜಲ ಮಂಡಳಿ.