ಸಾರಾಂಶ
ನಮ್ಮೂರ ಜಾತ್ರೆಯಲ್ಲಿ ಉಭಯ ಶ್ರೀಗಳ ಭಾವಚಿತ್ರದ ದೀಪಾಲಂಕೃತ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಹಾವೇರಿ
ಇಲ್ಲಿಯ ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮಿಗಳ ೭೮ನೇ ಮತ್ತು ಲಿಂ. ಶಿವಲಿಂಗ ಸ್ವಾಮೀಜಿಗಳ ೧೫ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ನಮ್ಮೂರ ಜಾತ್ರೆಯಲ್ಲಿ ಉಭಯ ಶ್ರೀಗಳ ಭಾವಚಿತ್ರದ ದೀಪಾಲಂಕೃತ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ಜರುಗಿತು.ಸಂಜೆ ೪ ಗಂಟೆ ಹೊತ್ತಿಗೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಉತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ಕೂಡ್ಲಪ್ಪನವರ, ಆನಂದ ಅಟವಾಳಗಿ, ಕರಬಸಪ್ಪ ಹಲಗಣ್ಣನವರ, ಶಿವಯೋಗಿ ಹೂಲಿಕಂತಿಮಠ, ವೀರಬಸವ ದೇವರು, ಚಂದ್ರಶೇಖರ ದೇವರು, ಶಿವಪ್ರಸಾದ ದೇವರು ಮತ್ತಿತರರಿದ್ದರು.
ಮಠದ ಆವರಣದಿಂದ ಆರಂಭವಾದ ಲಿಂ. ಶಿವಬಸವ ಶ್ರೀ ಹಾಗೂ ಲಿಂ. ಶಿವಲಿಂಗ ಶ್ರೀಗಳ ಭಾವಚಿತ್ರ ಮೆರವಣಿಗೆ ವಿವಿಧ ವಾದ್ಯ ವೈಭೋಗದೊಂದಿಗೆ ನಡೆಯಿತು. ಮಠದಿಂದ ಹೊರಟ ಮೆರವಣಿಗೆ ಎಂ.ಜಿ. ರಸ್ತೆ ಮೂಲಕ ಮೇಲಿನಪೇಟೆ, ಹಳೇ ಅಂಚೆ ಕಚೇರಿ ರಸ್ತೆ, ಹಳವೂರು, ಹಳೆ ಅಂಚೆ ಕಚೇರಿ ರಸ್ತೆ, ನ್ಯಾಯಾಲಯದ ಎದುರಿನ ರಸ್ತೆ, ಕಲ್ಲು ಮಂಟಪ ರಸ್ತೆ, ಚಂದ್ರಾಪಟ್ಟಣ, ಅಕ್ಕಿಪೇಟೆ, ಏಲಕ್ಕಿ ಓಣಿ, ಪುರದ ಓಣಿ ಮೂಲಕ ಶ್ರೀಮಠಕ್ಕೆ ಮರಳಿತು.ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಭಕ್ತರು ನೀರು ಹಾಕಿ, ರಂಗೋಲಿ ಬಿಡಿಸಿ ಮೆರವಣಿಗೆಗೆ ಸ್ವಾಗತ ಕೋರಿದರು. ಮಾರ್ಗದುದ್ದಕ್ಕೂ ಭಕ್ತರು ಉಭಯ ಶ್ರೀಗಳಿಗೆ ಪುಷ್ಪಾರ್ಚನೆ ಮಾಡಿ, ಕೈಮುಗಿದು ಭಕ್ತಿಭಾವ ವ್ಯಕ್ತಪಡಿಸಿದರು. ರಾತ್ರಿ ೧೨ಗಂಟೆವರೆಗೂ ಮಠದತ್ತ ಭಕ್ತಸಾಗರ ಹರಿದುಬಂತು.
ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳಾದ ರಾಣೆಬೆನ್ನೂರಿನ ಹನುಮಾನ್ ಬ್ಯಾಂಡ್, ಕುಂದಾಪುರದ ಚಂಡೇಮೇಳ, ತುಮ್ಮಿಕಟ್ಟಿಯ ಸಮಾಳ, ದಾವಣಗೆರೆಯ ನಂದಿಕೋಲು ಕುಣಿತ, ನಂದಿಹಳ್ಳಿ ಭಜನಾ ಮಂಡಳಿ, ಹುಲಿ ವೇಷ, ಗೊಂಬೆ ವೇಷ, ಜಾಂಜ್ ಮೇಳ, ಐರಣಿಮಠದ ಆನೆ ಮುಂತಾದವು ಮೆರವಣಿಯಲ್ಲಿ ಭಾಗವಹಿಸಿದ್ದವು.ಬೆಳಗ್ಗೆ ೮ ಗಂಟೆಗೆ ಉಭಯ ಶ್ರೀಗಳ ಗದ್ದುಗೆಗೆ ಬಿಲ್ವಾರ್ಚನೆ ಮತ್ತು ಮಹಾಪೂಜೆ ನಡೆಯುತು. ಗದ್ದುಗೆಗಳನ್ನು ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಗದ್ದುಗೆಯ ದರ್ಶನ ಪಡೆದು ಪುನೀತರಾದರು. ಬಂದಎಲ್ಲ ಸದ್ಭಕ್ತರಿಗೆ ಮಹಾದಾಸೋಹ ಏರ್ಪಡಿಸಲಾಗಿತ್ತು.