ಶಿಕ್ಷಣ, ದಾಸೋಹಕ್ಕೆ ನಾಡಿನಲ್ಲಿ ಹೆಸರಾಗಿರುವ ಹುಕ್ಕೇರಿಮಠ

| Published : Oct 14 2024, 01:28 AM IST

ಸಾರಾಂಶ

ಶಿಕ್ಷಣ, ದಾಸೋಹಕ್ಕೆ ಹುಕ್ಕೇರಿಮಠ ನಾಡಿನಲ್ಲಿ ಹೆಸರಾಗಿದ್ದು, ಜ್ಞಾನದ ಜೊತೆಗೆ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದ ಹುಕ್ಕೇರಿಮಠ ಶಿಕ್ಷಣ ಸಂಸ್ಥೆಯ ಕಾರ್ಯ ಸ್ಮರಣೀಯವಾಗಿದೆ. ಇಂತಹ ಸಂಸ್ಥೆಯಲ್ಲಿ ಕಲಿತು ಉನ್ನತ ಹಂತಕ್ಕೆ ಬೆಳೆದಿರುವ ಹಳೆಯ ವಿದ್ಯಾರ್ಥಿಗಳೇ ಈ ಸಂಸ್ಥೆಗೆ ಶಕ್ತಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಹಾವೇರಿ: ಶಿಕ್ಷಣ, ದಾಸೋಹಕ್ಕೆ ಹುಕ್ಕೇರಿಮಠ ನಾಡಿನಲ್ಲಿ ಹೆಸರಾಗಿದ್ದು, ಜ್ಞಾನದ ಜೊತೆಗೆ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದ ಹುಕ್ಕೇರಿಮಠ ಶಿಕ್ಷಣ ಸಂಸ್ಥೆಯ ಕಾರ್ಯ ಸ್ಮರಣೀಯವಾಗಿದೆ. ಇಂತಹ ಸಂಸ್ಥೆಯಲ್ಲಿ ಕಲಿತು ಉನ್ನತ ಹಂತಕ್ಕೆ ಬೆಳೆದಿರುವ ಹಳೆಯ ವಿದ್ಯಾರ್ಥಿಗಳೇ ಈ ಸಂಸ್ಥೆಗೆ ಶಕ್ತಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು. ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಆಚರಣೆ ಕುರಿತು ಏರ್ಪಡಿಸಿದ್ದ ಹಳೇಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹುಕ್ಕೇರಿಮಠದಲ್ಲಿ ನಾನು ಕೇವಲ ಒಂದು ವರ್ಷ ಅಧ್ಯಯನ ಮಾಡಿದ್ದರೂ ಸಹ ಇಲ್ಲಿನ ಶಿಸ್ತು, ಪ್ರೀತಿ, ಸಹಕಾರ ಮನೋಭಾವ ಎಲ್ಲ ವಿದ್ಯಾರ್ಥಿಗಳನ್ನು ಒಂದೇ ಕುಟುಂಬದ ಸದಸ್ಯರನ್ನಾಗಿ ಮಾಡಿದ್ದವು. ಒಂದು ಶಿಕ್ಷಣ ಸಂಸ್ಥೆಯನ್ನು ೫೦ ವರ್ಷಗಳ ಕಾಲ ನಡೆಸಿಕೊಂಡು ಬರುವುದು ಸುಲಭವಿಲ್ಲ, ಯಾವುದೇ ಅಪೇಕ್ಷೆ ಇಲ್ಲದೆ ಇಂತಹ ಕಾರ್ಯವನ್ನು ಹುಕ್ಕೇರಿಮಠ ಶಿಕ್ಷಣ ಸಂಸ್ಥೆ ಮಾಡುವ ಮೂಲಕ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ಮಾಡಿದೆ. ಇಲ್ಲಿ ಕಲಿತ ಹಳೇಯ ವಿದ್ಯಾರ್ಥಿಗಳು ಸಂಸ್ಥೆಯ ಬೆನ್ನಲುಬಾಗಿ ನಿಂತುಕೊಂಡು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದರು. ಯೋಜನೆಗಳನ್ನು ಸರಯಾಗಿ ಮಾಡಿಕೊಂಡರೆ ಕಾರ್ಯಕ್ರಮ ಯಶಸ್ವಿಯಾಗಿ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಅಗತ್ಯವಿರುವ ಸಮಿತಿಗಳನ್ನು ರಚಿಸಿಕೊಳ್ಳುವುದು, ಹಳೇಯ ವಿದ್ಯಾರ್ಥಿಗಳ ವಾಟ್ಸ್ ಅಪ್ ಗ್ರೂಪ್ ರಚನೆ, ಆನ್‌ಲೈನ್ ರಿಜಿಸ್ಟ್ರೇಷನ್ ವ್ಯವಸ್ಥೆ ಮಾಡಿಕೊಂಡರೆ ಕಾರ್ಯಕ್ರಮ ಯಶಸ್ವಿಯಾಗಿ ಮಾಡಲು ಸಹಕಾರಿಯಾಗುತ್ತದೆ. ಜೊತೆಗೆ ಕಾರ್ಯಕ್ರಮದ ಸವಿನೆನಪಿಗಾಗಿ ಶ್ರೀಮಠದಲ್ಲಿ ಹಾಸ್ಟೆಲ್ ನಿರ್ಮಿಸಿದರೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುತ್ತಿರುವ ಹುಕ್ಕೇರಿಮಠದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಸುವರ್ಣ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದ್ದು ಹಳೇಯ ವಿದ್ಯಾರ್ಥಿಗಳ ಸಹಕಾರ, ಅಗತ್ಯವಿದೆ. ಈ ನಿಟ್ಟಿನಲ್ಲಿ ಮೊದಲು ದಿನಾಂಕ ನಿಗದಿ ಮಾಡುವುದು ಅಗತ್ಯವಿದೆ. ಮುಂಬರುವ ಜನೇವರಿ ತಿಂಗಳಲ್ಲಿ ಹುಕ್ಕೇರಿಮಠದ ಜಾತ್ರೆ ನಡೆಯಲಿದ್ದು, ಜಾತ್ರೆಯ ಸಂದರ್ಭದಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜಿಸಿದರೆ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು. ಈ ವೇಳೆ ಹಲವು ಹಳೆಯ ವಿದ್ಯಾರ್ಥಿಗಳು ಮಾರ್ಚ್ ೩ರಂದು ಲಿಂ.ಶಿವಲಿಂಗೇಶ್ವರ ಶ್ರೀಗಳ ಜನ್ಮದಿನ ಆಚರಿಸಲಾಗುತ್ತಿದ್ದು, ಈ ವೇಳೆ ಕಾರ್ಯಕ್ರಮ ಮಾಡಿದರೆ ಅರ್ಥಪೂರ್ಣವಾಗಿರುತ್ತದೆ ಎಂದು ಸಲಹೆ ನೀಡಿದರು. ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್ ಎಸ್.ಎಸ್.ಮುಷ್ಠಿ ಮಾತನಾಡಿ, ಸಂಸ್ಥೆಯಲ್ಲಿ ಸುಮಾರು ೧೨೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ದೊಡ್ಡ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಕಲಿತು ಉನ್ನತ ಹಂತಕ್ಕೆ ಹೋಗಿರುವ ಹಳೇಯ ವಿದ್ಯಾರ್ಥಿಗಳು ಅಗತ್ಯ ಸಹಾಯ, ಸಹಕಾರ ನೀಡುವ ಮೂಲಕ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಬಿಜಿಗಲ್ ವಿರಕ್ತಮಠದ ಶಿವಲಿಂಗ ಸ್ವಾಮೀಜಿ, ಪ್ರಮುಖರಾದ ಪಿ.ಡಿ.ಶಿರೂರ, ಆರ್.ಎಸ್.ಮಾಗನೂರ, ವೀರಣ್ಣ ವಳಸಂಗದ, ಮಲ್ಲಿಕಾರ್ಜುನ ಸಾತೇನಹಳ್ಳಿ ಸೇರಿದಂತೆ ನೂರಾರು ಹಳೇಯ ವಿದ್ಯಾರ್ಥಿಗಳು ಇದ್ದರು. ನಿವೃತ್ತ ಪ್ರಾಚಾರ್ಯ ಬಿ.ಬಸವರಾಜ ಪ್ರಸ್ತಾವಿಕ ಮಾತನಾಡಿದರು. ನಿವೃತ್ತ ಶಿಕ್ಷಕ ಸಿ.ಎಸ್.ಮರಳಿಹಳ್ಳಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು.ಜ. ೫ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮ: ನಗರದ ಹುಕ್ಕೇರಿಮಠದ ಶಿವಬಸವೇಶ್ವರ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ೨೦೨೫ರ ಜ. ೫ರಂದು ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕೆ ಪೂರಕವಾಗಿ ಸಭೆಯಲ್ಲಿ ಸುವರ್ಣ ಮಹೋತ್ಸವ ಆಚರಣಾ ಸಮಿತಿ ರಚಿಸಲಾಯಿತು. ಸಮಿತಿಯ ಮಹಾಪೋಷಕರಾಗಿ ಸದಾಶಿವ ಸ್ವಾಮೀಜಿ, ಗೌರವಾಧ್ಯಕ್ಷರಾಗಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಕಾರ್ಯಾಧ್ಯಕ್ಷರಾಗಿ ಮಹೇಶ ಚಿನ್ನಿಕಟ್ಟಿ, ಅಧ್ಯಕ್ಷರಾಗಿ ಅಶೋಕ ಹಾವನೂರ ಅವರನ್ನು ನೇಮಕ ಮಾಡಲಾಯಿತು.