ಸಾರಾಂಶ
ಹುಲಕೋಟಿ ಹತ್ತಾರು ಹೊಸತನಕ್ಕೆ ಮುನ್ನುಡಿ ಬರೆದಿರುವ ಗ್ರಾಮ. ಪ್ರಸ್ತುತ ಅಂಗಾಂಗ ಕಸಿ (ಟ್ರ್ಯಾನ್ಸಪ್ಲ್ಯಾಂಟ್) ಕೂಡಾ ಅಲ್ಲಿನ ಆರ್.ಎಂ.ಎಸ್.ಎಸ್ (ರೂರಲ್ ಮೆಡಿಕಲ್ ಸರ್ವೀಸ್ ಸೊಸೈಟಿ) ಆಸ್ಪತ್ರೆಯು ಈ ರೀತಿಯ ಅತ್ಯಾಧುನಿಕ ಸೌಲಭ್ಯವನ್ನು ಪಡೆಯುತ್ತಿರುವ ಉತ್ತರ ಕರ್ನಾಟಕ ಭಾಗದ ಮೊದಲ ಗ್ರಾಮೀಣ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶಿವಕುಮಾರ ಕುಷ್ಟಗಿ
ಕನ್ನಡಪ್ರಭವಾರ್ತೆ ಗದಗಹುಲಕೋಟಿ ಹತ್ತಾರು ಹೊಸತನಕ್ಕೆ ಮುನ್ನುಡಿ ಬರೆದಿರುವ ಗ್ರಾಮ. ಪ್ರಸ್ತುತ ಅಂಗಾಂಗ ಕಸಿ (ಟ್ರ್ಯಾನ್ಸಪ್ಲ್ಯಾಂಟ್) ಕೂಡಾ ಅಲ್ಲಿನ ಆರ್.ಎಂ.ಎಸ್.ಎಸ್ (ರೂರಲ್ ಮೆಡಿಕಲ್ ಸರ್ವೀಸ್ ಸೊಸೈಟಿ) ಆಸ್ಪತ್ರೆಯು ಈ ರೀತಿಯ ಅತ್ಯಾಧುನಿಕ ಸೌಲಭ್ಯವನ್ನು ಪಡೆಯುತ್ತಿರುವ ಉತ್ತರ ಕರ್ನಾಟಕ ಭಾಗದ ಮೊದಲ ಗ್ರಾಮೀಣ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಆಸ್ಪತ್ರೆಯು ರೂರಲ್ ಮೆಡಿಕಲ್ ಸರ್ವಿಸಸ್ ಒಂದು ಭಾಗವಾಗಿದ್ದು, ಕಾನೂನು ಸಚಿವ ಎಚ್.ಕೆ.ಪಾಟೀಲರ ಕನಸಿನ ಕೂಸಾಗಿದೆ. ಪ್ರಸ್ತುತ ಇಲ್ಲಿ 3 ಕೋಟಿಗೂ ಅಧಿಕ ವೆಚ್ಚದಲ್ಲಿ ಅತ್ಯುನ್ನತ ಚಿಕಿತ್ಸಾ ಯಂತ್ರಗಳನ್ನು ಅಳವಡಿಸಲಾಗಿದೆ. ಉತ್ತರ ಕರ್ನಾಟಕದಲ್ಲೇ ಅತ್ಯಾಧುನಿಕ ಮಾಡ್ಯುಲರ್ ಆಪರೇಷನ್ ಥೇಟರ್ ಹೊಂದಿದ ಆಸ್ಪತ್ರೆ ಇದಾಗಿದೆ. ಒಂದು ನಿಮಿಷಕ್ಕೆ 75 ಬಾರಿ ಗಾಳಿ ನವೀಕರಣ (AHU) ಸಾಮರ್ಥ್ಯ ಹೊಂದಿರುವ ಅತ್ಯುತ್ತಮ ಆಪರೇಷನ್ ಥೇಟರ್ ಅಲ್ಲಿ ಅಳವಡಿಸಲಾಗಿದೆ.ಎಚ್.ಕೆ. ಪಾಟೀಲ ಸೇವಾ ತಂಡ: ಕಾನೂನು ಸಚಿವರ ಹೆಸರಿನಲ್ಲಿ ಎಚ್.ಕೆ. ಪಾಟೀಲ ಸೇವಾ ತಂಡ ಎಂದು ಪ್ರಾರಂಭಿಸಲಾಗಿದ್ದು, ಈ ಸೇವಾ ತಂಡ ಗದಗ ಮತಕ್ಷೇತ್ರ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಅತ್ಯುತ್ತಮ, ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುತ್ತಿದೆ. 2023ರ ಆ. 15ರಂದು ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಬಡವರ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಉಚಿತ ಚಿಕಿತ್ಸೆ ಹೀಗೆ ಸಾರ್ವಜನಿಕರ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಸಮರ್ಥವಾಗಿ ನೀಗಿಸುತ್ತಿದೆ.3500 ಜನರಿಗೆ ಉಚಿತ ಚಿಕಿತ್ಸೆ: ದೃಷ್ಟಿ ಹೀನ ಚಿಕಿತ್ಸೆ, ಕಣ್ಣಿನ ಪೊರೆ ಚಿಕಿತ್ಸೆ, ಕಣ್ಣಿನ ದುರ್ಮಾಂಸ ತೆಗೆಯುವುದು ಸೇರಿ ಹಲವು ಚಿಕಿತ್ಸೆ ಮಾಡಲಾಗುತ್ತಿದೆ. ಇತ್ತೀಚೆಗೆ ಈ ಸಮಸ್ಯೆಗಳು ಜನರಲ್ಲಿ ಅಧಿಕವಾಗಿ ಕಂಡು ಬರುತ್ತಿದ್ದು, ಸೇವಾ ತಂಡದ ಮೂಲಕ ಉಚಿತ ಸೇವೆ ನೆರವೇರಿಸಲಾಗುತ್ತಿದೆ. ಕಳೆದ ಆಗಸ್ಟ್ ತಿಂಗಳಿಂದ ಈವರೆಗೆ 2900 ಜನರಿಗೆ ಉಚಿತ ಕಣ್ಣಿನ ಚಿಕಿತ್ಸೆ, 54 ಹೃದಯ ಸಂಬಂಧಿ ಚಿಕಿತ್ಸೆ, ಎಲುವು ಕೀಲು ಹಾಗೂ 2 ಜನರಿಗೆ ಮೊಣಕಾಲು ಚಿಪ್ಪು ಬದಲಾವಣೆ ಚಿಕಿತ್ಸೆ ಸೇರಿದಂತೆ ಒಟ್ಟು 3500ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲಾಗಿದೆ. ಆರ್.ಎಂ.ಎಸ್ ಮತ್ತು ಎಂ.ಎಂ.ಜೋಷಿ ಆಸ್ಪತ್ರೆ ಸಹಯೋಗದಲ್ಲಿ ಈ ಸೇವೆ ನಡೆಯುತ್ತಿದ್ದು, ಡಾ. ಎಸ್.ಆರ್. ನಾಗನೂರು, ಡಾ. ಸವಿತಾ ಹೊಂಬಾಳಿ, ಜಗದೀಶ ಗಡ್ಡೆಪ್ಪನವರ, ಡಾ. ಚಿಂತಾಮಣಿ ಸೇರಿದಂತೆ ಹಲವಾರು ನುರಿತ ವೈದ್ಯರ ತಂಡ ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಲಭ್ಯವಿದೆ.ಚುನಾವಣೆ ನಂತರ ಎರಡನೇ ಅವಧಿಗೆ ಸೇವಾ ತಂಡದಿಂದ ಉಚಿತ ಕಣ್ಣಿನ ಚಿಕಿತ್ಸೆ ಆರಂಭಿಸಲಾಗಿದೆ. ಈ ವಾರ 48 ಜನರನ್ನು ಆಯ್ಕೆ ಮಾಡಲಾಗಿದೆ. ಸೋಮವಾರ, ಮಂಗಳವಾರ ತಲಾ 24 ಜನರ ಕಣ್ಣಿನ ಚಿಕಿತ್ಸೆ ನೆರವೇರಿಸಲಾಗುವುದು ಡಾ. ವೇಮನ್ ಸಾಹುಕಾರ ಹೇಳುತ್ತಾರೆ.
ತಾಲೂಕಿನ ಹುಲಕೋಟಿ ಗ್ರಾಮದ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿಯ ಆಸ್ಪತ್ರೆಯ ಮೂಲಕ ಬಡವರಿಗೆ ಹಲವಾರು ರೀತಿಯ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿದೆ. ನಮ್ಮ ಆಸ್ಪತ್ರೆಯ ಆಪರೇಷನ್ ಥೇಟರ್‌ಗಳಲ್ಲಿ ಅತ್ಯಾಧುನಿಕ ಸೌಲಭ್ಯ ಅಳವಡಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿಂದ ಆಪರೇಶನ್ ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಪ್ರಾರಂಭಿಸಲಾಗಿದ್ದು, ಸೋಮವಾರ 24 ಜನರ ಉಚಿತ ಕಣ್ಣಿನ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹುಲಕೋಟಿ ಆರ್‌ಎಂಎಸ್ ಹಿರಿಯ ವೈದ್ಯಾಧಿಕಾರಿ ಡಾ.ಎಸ್.ಆರ್. ನಾಗನೂರ ಹೇಳುತ್ತಾರೆ.ಮಾರ್ಚ 16ಕ್ಕೆ ಪ್ರಾರಂಭ: ಅಂಗಾಂಗ ಕಸಿಗೆ ಬೇಕಾಗುವ ಬೇಕಾಗುವ ಅತ್ಯಾಧುನಿಕ ಸೌಲಭ್ಯವುಳ್ಳ ಆಪರೇಶನ್ ಥೇಟರ್ ಕೂಡಾ ಸಿದ್ಧವಾಗಿದೆ. ಇಲಾಖೆಯ ನಿಯಮದಂತೆ ಎಲ್ಲಾ ವ್ಯವಸ್ಥೆಗಳು ಪೂರ್ಣಗೊಂಡಿದ್ದು, ಅಂಗಾಂಗ ಕಸಿಗೆ ಅನುಮತಿ ನೀಡುವ ನಿಟ್ಟಿನಲ್ಲಿ ಫೆ. 15ರಂದು ಆರೋಗ್ಯ ಇಲಾಖೆಯಲ್ಲಿನ ವಿಶೇಷ ತಂಡ ಆರ್.ಎಂ.ಎಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅನುಮತಿ ನೀಡಲಿದ್ದು. ಮಾ. 16ಕ್ಕೆ ಈ ಆಸ್ಪತ್ರೆಯಲ್ಲಿಯೇ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈಯಂತಾ ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ನಡೆಯುವಂತೆ ಅಂಗಾಂಗ ಕಸಿ ನಡೆಯುವ ಸಾಧ್ಯತೆ ಇದೆ.