ಮೇ 11ರಂದು ನಡೆಯುವ ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವುದರಿಂದ ಸ್ವಚ್ಛತೆ ಮತ್ತು ಸುರಕ್ಷತೆ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರಸ್ತೆ, ದೇವಾಲಯದ ಆವರಣ, ಸುತ್ತಲಿನ ಪ್ರದೇಶ ಸ್ವಚ್ಛಗೊಳಿಸಬೇಕೆಂದು ಜಿಲ್ಲಾಧಿಕಾರಿ ಹೇಳಿದರು.
ಕೊಪ್ಪಳ:
ಮೇ 10ರಿಂದ 14ರ ವರೆಗೆ ಜಿಲ್ಲೆಯ ಹುಲಿಗಿಯಲ್ಲಿ ನಡೆಯುವ ಶ್ರೀಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು, ಸಾರ್ವಜನಿಕರು ಪಾಲ್ಗೊಳ್ಳಲಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಸೌಲಭ್ಯ ಒದಗಿಸಿ, ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಿ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೇ 11ರಂದು ನಡೆಯುವ ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವುದರಿಂದ ಸ್ವಚ್ಛತೆ ಮತ್ತು ಸುರಕ್ಷತೆ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರಸ್ತೆ, ದೇವಾಲಯದ ಆವರಣ, ಸುತ್ತಲಿನ ಪ್ರದೇಶ ಸ್ವಚ್ಛಗೊಳಿಸಬೇಕು. ಶುದ್ಧ ಕುಡಿಯುವ ನೀರು, ದೇವಸ್ಥಾನದ, ಆವರಣ ಹಾಗೂ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಕಂರಿಸಬೇಕು. ಸಾರ್ವಜನಿಕರ ವಿಶ್ರಾಂತಿ ಗೃಹ, ತಂಗುದಾಣ, ನೀರು ಪೂರೈಸುವ ಪೈಪ್‌ಲೈನ್, ಒಎಚ್‌ಟಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ದುರಸ್ತಿಗೊಳಿಸಬೇಕು. ಮೊಬೈಲ್ ಟಾಯ್ಲೆಟ್‌ಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಪಿಡಿಒ ಹಾಗೂ ದೇವಸ್ಥಾನದ ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.ದೇವಸ್ಥಾನದ ಆವರಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಪ್ರಾಣಿ ಬಲಿ ನಿಷೇಧ ಕಡ್ಡಾಯ ಜಾರಿಗೊಳಿಸಬೇಕು ಮತ್ತು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಸಾರ್ವಜನಿಕರಿಗೆ ಸೂಕ್ತ ಜಾಗೃತಿ ಮೂಡಿಸಬೇಕು. ಪಶುಪಾಲನಾ ಇಲಾಖೆಯಿಂದ ನಿಗದಿತ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಬೇಕು. ಹುಲಿಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಸಂಪರ್ಕ ರಸ್ತೆ ಪರಿಶೀಲಿಸಿ ದುರಸ್ತಿಗೊಳಿಸಬೇಕು ಎಂದ ಜಿಲ್ಲಾಧಿಕಾರಿ, ಅನ್ಯ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದು, ಸೂಕ್ತ ಮಾರ್ಗ ಸೂಚಕ ಫಲಕಗ, ನೀರು, ಶೌಚಾಲಯ, ವಿಶ್ರಾಂತಿ ಗೃಹಗಳ ಸೂಚಕ ಫಲಕ ಅಳವಡಿಸಬೇಕು. ವಾಹನ ದಟ್ಟನೆ ನಿರ್ವಹಣೆಗೆ ಸೂಕ್ತ ಪಾರ್ಕಿಂಗ್ ಸೌಲಭ್ಯ ಒದಗಿಸಬೇಕು ಎಂದರು.
ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ನೀಡಬೇಕೆಂದ ಜಿಲ್ಲಾಧಿಕಾರಿ, ಜಾತ್ರಾ ಮಾಹೋತ್ಸವದಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದು ಅಬಕಾರಿ ಇಲಾಖೆ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ, ತಜ್ಞ ವೈದ್ಯರು, ಶುಶ್ರೂಷಕರು, ಸಿಬ್ಬಂದಿಗಳೊಂದಿಗೆ ಅಗತ್ಯ ವೈದ್ಯಕೀಯ ಸೌಲಭ್ಯ, ಆ್ಯಂಬುಲೆನ್ಸ್ ವ್ಯವಸ್ಥೆ, ಬೇಸಿಗೆ ತೀವ್ರವಾಗಿದ್ದು, ಹೆಚ್ಚಿನ ಪ್ರಮಾಣದ ಒಆರ್‌ಎಸ್ ಒದಗಿಸಬೇಕು. ಆರೋಗ್ಯ ಕೇಂದ್ರಗಳಲ್ಲಿ ನಿರಂತರ ವೈದ್ಯಕೀಯ ಸಿಬ್ಬಂದಿ ಇರುವಂತೆ ಕ್ರಮಕೈಗೊಳ್ಳಬೇಕು ಎಂದು ಆರೋಗ್ಯಾಧಿಕಾರಿಗೆ ಸೂಚಿಸಿದರು.
ಅಗ್ನಿಶಾಮಕ ವಾಹನ ಒದಗಿಸಬೇಕು. ಜಾತ್ರೆ ವೇಳೆ ನದಿಗೆ ನೀರು ಬಿಡಲಿದ್ದು ಭಕ್ತರು ಸ್ನಾನಕ್ಕೆ ತೆರಳಿದಾಗ ಯಾವುದೇ ಅವಘಡ ನಡೆಯದಂತೆ ಭದ್ರತೆ ಕಲ್ಪಿಸಬೇಕು. ಅಗತ್ಯ ಮುನ್ನೆಚ್ಚರಿಕಾ ಫಲಕಗಳನ್ನು ನದಿ ತೀರದಲ್ಲಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ, ದೇವಸ್ಥಾನದ ಪ್ರಸಾದದ ಆಹಾರ ಗುಣಮಟ್ಟ ಪರೀಕ್ಷಿಸಿ ಸುರಕ್ಷಿತವಿದ್ದಲ್ಲಿ ಮಾತ್ರ ವಿತರಿಸಬೇಕು. ಕುಡಿಯುವ ನೀರು ಪರೀಕ್ಷೆಗೆ ಕಲುಷಿತ ಎಂದು ಕಂಡುಬರುವ ಬೋರ್‌ವೆಲ್ ಅಥವಾ ಯಾವುದೇ ನೀರಿನ ಮೂಲವನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು. ದೇವಸ್ಥಾನದ ಆವರಣ ಮತ್ತು ಗ್ರಾಮದ ರಸ್ತೆ ಒತ್ತುವರಿ ಕಟ್ಟಡ, ವ್ಯಾಪಾರ ಮಳಿಗೆಯನ್ನು ನಿಯಮಾನುಸಾರ ತೆರವುಗೊಳಿಸಬೇಕು ಎಂದು ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್‌ಕುಮಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ, ಶ್ರೀಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್. ಪ್ರಕಾಶ್‌ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ., ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ದುಂಡಪ್ಪ ತುರಾದಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.