ಸಾರಾಂಶ
ಮಾನವನಿಗೂ ಪ್ರಾಣಿಗಳಿಗೂ ವ್ಯತ್ಯಾಸವಿದ್ದು, ಮನುಷ್ಯನಿಗೆ ಅರಿವಿದ್ದರೆ ಪ್ರಾಣಿಗಳಿಗೆ ಅರಿವಿಲ್ಲ. ಹಾಗಾಗಿ ಮನುಷ್ಯ ತನ್ನನ್ನು ತಾನು ಅರಿತು ಜೀವಿಸಬೇಕು.
ರಾಣಿಬೆನ್ನೂರು: ಹಲವಾರು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ ಎಂದು ಇಂಚಲ ಶಿವಯೋಗಿಶ್ವರ ಸಾಧು ಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ನುಡಿದರು. ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ಬುಧವಾರ ಸದ್ಗುರು ಸಿದ್ಧಾರೂಢ ಸ್ವಾಮಿಯವರ ಜಯಂತಿ ಅಂಗವಾಗಿ ಏರ್ಪಡಿಸಿದ್ದ 31ನೇ ವೇದಾಂತ ಪರಿಷತ್, ಡಾ. ಶಿವಾನಂದ ಭಾರತಿ ಸ್ವಾಮೀಜಿಯವರ 85ನೇ ಜಯಂತ್ಯುತ್ಸವ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾನವನಿಗೂ ಪ್ರಾಣಿಗಳಿಗೂ ವ್ಯತ್ಯಾಸವಿದ್ದು, ಮನುಷ್ಯನಿಗೆ ಅರಿವಿದ್ದರೆ ಪ್ರಾಣಿಗಳಿಗೆ ಅರಿವಿಲ್ಲ. ಹಾಗಾಗಿ ಮನುಷ್ಯ ತನ್ನನ್ನು ತಾನು ಅರಿತು ಜೀವಿಸಬೇಕು. ಮನುಜನು ತನ್ನ ಜೀವಿತ ಕಾಲದಲ್ಲಿ ಮನಸ್ಸು, ಬುದ್ಧಿ, ಚಿತ್ತ ಎಲ್ಲಿಯವರೆಗೂ ಶುದ್ಧವಾಗಿರುವುದಿಲ್ಲವೋ ಅಲ್ಲಿಯವರೆಗೂ ಶಾಂತಿ, ನೆಮ್ಮದಿ ಹಾಗೂ ಸಂತೃಪ್ತಿ ಮತ್ತು ಮುಕ್ತಿ ಸಿಗುವುದಿಲ್ಲ. ಮನುಷ್ಯನ ಮನಸ್ಸು, ಬುದ್ಧಿ, ಚಿತ್ತಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಸದ್ಗುರುವಿನ ಉಪದೇಶವನ್ನು ಆಲಿಸಿದಾಗಲೇ ಮನುಜ ಸದ್ಗತಿಯನ್ನು ಪಡೆಯಲು ಸಾಧ್ಯ ಎಂದರು. ಶ್ರೀಮಠದ ಪೀಠಾಧಿಪತಿ ನಾಗರಾಜಾನಂದ ಸ್ವಾಮೀಜಿ, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಶ್ರೀಗಳು, ಹುಬ್ಬಳ್ಳಿಯ ಸಚ್ಚಿದಾನಂದ ಶ್ರೀಗಳು, ದಾವಣಗೆರೆಯ ಜಡಿಸಿದ್ದೇಶ್ವರ ಮಠದ ಶಿವಾನಂದ ಶ್ರೀಗಳು, ಹದಡಿಯ ಚಂದ್ರಗಿರಿ ಮಠದ ಮುರಳಿಧರ ಶ್ರೀಗಳು, ಗೋಕಾಕ ತಾಲೂಕಿನ ಹಡಗಿನಾಳದ ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು, ಮಣಕೂರ ಸಿದ್ಧಾರೂಢ ಗುರುದೇವಾಶ್ರಮದ ಮಾತಾಜಿ ಚನ್ನಬಸಮ್ಮನವರು ಮಾತನಾಡಿದರು. ಇದಕ್ಕೂ ಪೂರ್ವ ಬ್ರಾಹ್ಮಿ ಮುಹೂರ್ತದಲ್ಲಿ ಸಿದ್ಧಾರೂಢರ ಪಂಚಲೋಹದ ಮೂರ್ತಿಗೆ ಪಂಚಾಮೃತ ಅಭಿಷೇಕ ಹಾಗೂ ಪೂಜಾ ವಿಧಾನಗಳನ್ನು ಚನ್ನಯ್ಯ ಶಾಸ್ತ್ರಿ ನಡೆಸಿಕೊಟ್ಟರು.ವಿಧಾನಸಭಾ ಉಪಸಭಾಧ್ಯಕ್ಷ ಹಾಗೂ ಶ್ರೀಮಠದ ಕಾರ್ಯದರ್ಶಿ ರುದ್ರಪ್ಪ ಲಮಾಣಿ, ಗ್ರಾಪಂ ಅಧ್ಯಕ್ಷೆ ಲಲಿತಾ ಹಿರೇಬಿದರಿ, ಉಪಾಧ್ಯಕ್ಷೆ ನೀಲಮ್ಮ ಪ್ರಜಾರ, ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪಗೌಡ್ರ, ಜನಾರ್ದನ ಕಡೂರ, ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ, ಅರುಣಸ್ವಾಮಿ ಹಿರೇಮಠ, ಡಾಕೇಶ ಲಮಾಣಿ, ಗುರುಶಾಂತ ಬಾಗಿಲದವರ, ಶಿವಣ್ಣ ಬಣಕಾರ, ಗೋಪಾಲ ಕೊಡ್ಲೇರ, ಗುಡ್ಡಪ್ಪ ಹೆಡಿಯಾಲ, ಪ್ರಕಾಶ ಚನ್ನಗೌಡ್ರ ಮತ್ತಿತರರಿದ್ದರು.ರಾಜೀವ್ ಗಾಂಧಿ ಪುಣ್ಯಸ್ಮರಣೆಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಬುಧವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮುಖಂಡರು ಮಾತನಾಡಿ, ನವಭಾರತ ನಿರ್ಮಾಣಕ್ಕೆ ರಾಜೀವ್ ಗಾಂಧಿ ಅವರು ಆ ದಿನಗಳಲ್ಲಿಯೇ ಅಡಿಪಾಯ ಹಾಕಿದ್ದಾರೆ. ಆರೋಗ್ಯ, ಶಿಕ್ಷಣ, ರಾಜಕೀಯ ಪಾತಿನಿಧ್ಯ, ತಂತ್ರಜ್ಞಾನ, ಅಧಿಕಾರ ವಿಕೇಂದ್ರೀಕರಣ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗಮನಾರ್ಹ ಸುಧಾರಣೆ ತಂದಿದ್ದಾರೆ.18ನೇ ವಯಸ್ಸಿನವರಿಗೆ ಮತ ಚಲಾಯಿಸುವ ಹಕ್ಕು ದೊರಕಿಸಿದ್ದಾರೆ. ಸರಿಯಾದ ದಿಕ್ಕಿನಲ್ಲಿ ಸಮರ್ಥವಾಗಿ ದೇಶವನ್ನು ಮುನ್ನಡೆಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕಿದೆ. ಅವರು ಕಂಡ ಕನಸು ನನಸು ಮಾಡುವ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದರು.ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಮಾಜಿ ಅಧ್ಯಕ್ಷ ಖುರ್ಷಿದ್ ಅಹ್ಮದ್ ಹುಲ್ಲತ್ತಿ, ಮುಖಂಡರಾದ ಮಂಜಣ್ಣ ನೀಲಗುಂದ, ಗುರುರಾಜ್ ನಿಂಗೋಜಿ, ಸಂತೋಷ ಸುಣಗಾರ, ಮೇಕಾಜಿ ಕಲಾಲ, ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷ ಸಂತೋಷ ದುಂಡಣ್ಣನವರ, ಸುರೇಶ ನಾಗಣ್ಣನವರ ಉಪಸ್ಥಿತರಿದ್ದರು.