ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸನಾತನ ಸಂಸ್ಕೃತಿ, ಧಾರ್ಮಿಕ ಕಾರ್ಯಗಳು ಆಧ್ಯಾತ್ಮಿಕ ಚಿಂತನೆಯಿಂದ ಮಾನವ ಜನ್ಮಸಾರ್ಥಕಗೊಳ್ಳುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹಾಸನ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದ್ದಾರೆ.ಮೂದರವಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ 600 ವರ್ಷಗಳ ಇತಿಹಾಸ ಇರುವ ಶ್ರೀ ಈಶ್ವರ ಮತ್ತು ಕಟ್ಟೆ ಬಸವಣ್ಣ ಸ್ವಾಮಿ ದೇವಸ್ಥಾನಗಳ ಪ್ರತಿಷ್ಠಾಪನೆ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು.
ಮಾನವನಲ್ಲಿ ಜ್ಞಾನದ ಬೆಳಕು ಇದ್ದಲ್ಲಿ ಬದುಕು ಸಾರ್ಥಕಗೊಳ್ಳುತ್ತದೆ. ಜ್ಞಾನದ ಶುದ್ಧಿ, ಧಾರ್ಮಿಕ ಕಾರ್ಯಗಳಿಂದಲೂ ಬದುಕು ಹಸನನಾಗುತ್ತದೆ. ಗುರು-ಹಿರಿಯರು ನೀಡುವ ಮಾರ್ಗದರ್ಶನದಿಂದ ಮತ್ತು ಅವರು ನೀಡಿದ ಜ್ಞಾನದ ಶುದ್ಧಿಯಿಂದ ನಾವು ಭಗವಂತನನ್ನು ಕಾಣಬಹುದು. ಕೆಲವರು ಭಯದಿಂದ ಮತ್ತೆ ಕೆಲವರು ಭಕ್ತಿಯಿಂದ ತಾನಾಗಿಯೇ ಭಗವಂತನನ್ನು ಕಾಣುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಧಾರ್ಮಿಕ ಕಾರ್ಯ ಮಾಡುವ ಮೂಲಕ ಭಗವಂತನನ್ನು ಕಾಣಬೇಕು ಎಂದರು.ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಜನ್ಮ ನೀಡಿದ ತಾಯಿ ಸೇರಿದಂತೆ ಮನೆಯ ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು. ಇದರಿಂದ ತನ್ನ ಮನೆ ದೇಗುಲವಾಗುತ್ತದೆ ಎಂದ ಸ್ವಾಮೀಜಿ, ಮನುಷ್ಯನಲ್ಲಿರುವ ಕ್ರೋಧ, ದ್ವೇಷವನ್ನು ಜ್ಞಾನದ ಬೆಳಕು ಮತ್ತು ಪರಿಶುದ್ಧ ಮನಸ್ಸಿಗೆ ನಾಶ ಮಾಡುವ ಶಕ್ತಿ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ದೇವಸ್ಥಾನಗಳನ್ನು ಕಟ್ಟಿದರೆ ಸಾಲದು ವಾರದಲ್ಲಿ ಒಂದು ದಿನವಾದರೂ ದೇವಾಲಯಕ್ಕೆ ಬಂದು ದೇವರ ಆಶೀರ್ವಾದ ಪಡೆದುಕೊಳ್ಳಬೇಕು. ಇದರಿಂದ ಮನಸಿನಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದರು.ಗ್ರಾಮಗಳಲ್ಲಿ ಕಟ್ಟುವ ದೇವಸ್ಥಾನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು ಸಹ ದೇವಸ್ಥಾನ ಸಮಿತಿಯ ಜವಾಬ್ದಾರಿಯಾಗುತ್ತದೆ. ಈ ನಿಟ್ಟಿನಲ್ಲಿ ದೇವಸ್ಥಾನ ಸಮಿತಿಯವರು ದೇವಸ್ಥಾನದ ಅಭಿವೃದ್ಧಿಗಾಗಿ ಶ್ರಮಿಸಿದರೆ ದೇಗುಲಗಳು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಜಿ.ಪಂ. ಮಾಜಿ ಸದಸ್ಯ ಸಿ.ಪಿ. ಪುಟ್ಟರಾಜು ಮಾತನಾಡಿದರು.ಪ್ರಮುಖರಾದ ಶುಂಠಿ ಭರತ್ ಕುಮಾರ್, ಕಳಲೆ ಕೃಷ್ಣೇಗೌಡ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್, ತಾಲೂಕು ಯುವ ವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಬಾಗೇರಿ ಮಧು, ಎಂ.ಪಿ.ದಿನೇಶ್, ರೋಹಿತ್, ಪ್ರವೀಣ್ ಹಂಡ್ಲಿ ಗ್ರಾ.ಪಂ. ಅಧ್ಯಕ್ಷೆ ಸುಧಾ ಸದಸ್ಯೆ ಸುವರ್ಣ, ಕೆ.ಪಿ.ಜಯಕುಮಾರ್, ಈಶ್ವರ ಮತ್ತು ಕಟ್ಟೆ ಬಸವಣ್ಣ ದೇವಸ್ಥಾನ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
ಗ್ರಾಮದ ಜೀರ್ಣೋದ್ಧಾರಗೊಂಡಿರುವ ನೂತನ ದೇವಸ್ಥಾನಗಳಾದ ಶ್ರೀ ಈಶ್ವರ ಮತ್ತು ಕಟ್ಟೆ ಬಸವಣ್ಣ ಸ್ವಾಮಿ ದೇವಸ್ಥಾನಗಳಲ್ಲಿ ಮುಂಜಾನೆ 4 ಗಂಟೆಯಿಂದ ಬೆಳಗ್ಗೆ 10.30ರ ವರೆಗೆ ವಿವಿಧ ದಾರ್ಮಿಕ ಪೂಜಾ ಕಾರ್ಯಗಳು, ಹೋಮ ಇನ್ನು ಮುಂತಾದ ಕಾರ್ಯಗಳನ್ನು ನಡೆಸಲಾಯಿತು.