ಸಾರಾಂಶ
ಕಾವೇರಿ ಹರಿವು ನಿಲ್ಲಿಸಿ ಬಹುತೇಕ 60ದಿನಗಳು ಕಳೆದು ಹೋಗಿವೆ. ನದಿಯಲ್ಲಿನ ಜಲಚರಗಳ ಮಾರಣಹೋಮದ ದೃಶ್ಯಗಳು ಗೋಚರಿಸತೊಡಗಿದೆ.
ವಿಶೇಷ ವರದಿ ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಸುತ್ತಮುತ್ತ ವ್ಯಾಪ್ತಿಯಲ್ಲಿ ಕಾವೇರಿ ತನ್ನ ಹರಿವು ನಿಲ್ಲಿಸಿ ಇದೀಗ ಬಹುತೇಕ 60ಕ್ಕೂ ಹೆಚ್ಚು ದಿನಗಳು ಕಳೆದು ಹೋಗಿದೆ.ದುಬಾರೆ ಸಾಕಾನೆ ಶಿಬಿರದ ಬಳಿಯಿಂದ ಕುಶಾಲನಗರ ಕೂಡಿಗೆ ತನಕ ನದಿ ಸಂಪೂರ್ಣ ಬತ್ತಿ ಹೋಗಿ ಎಲ್ಲಿ ನೋಡಿದರೂ ಕಂಡು ಬರುವ ಕಲ್ಲು ಬಂಡೆಗಳು, ಅಲ್ಲಲ್ಲಿ ಅಲ್ಪಸ್ವಲ್ಪ ನಿಂತಿರುವ ನೀರು. ನದಿಯಲ್ಲಿ ಜಲಚರಗಳ ಮಾರಣ ಹೋಮದ ದೃಶ್ಯಗಳು ಗೋಚರಿಸತೊಡಗಿವೆ.
ನದಿತಟದಲ್ಲಿರುವ ಪಟ್ಟಣ, ಗ್ರಾಮಗಳ ಜನತೆ ನೀರಿಗಾಗಿ ಕೊಳವೆ ಬಾವಿ ಆಶ್ರಯಿಸುವ ಪರಿಸ್ಥಿತಿ ಒದಗಿದೆ. ಪಟ್ಟಣಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ನಡೆಯುತ್ತಿದೆ. ಪಟ್ಟಣ ಗ್ರಾಮಗಳ ಕಲುಷಿತ ನೀರು, ಚರಂಡಿ ಮೂಲಕ ನೇರವಾಗಿ ನದಿಯಲ್ಲಿ ಅಳಿದುಳಿದ ನೀರನ್ನು ಸೇರಿ ಮಿಶ್ರಣವಾಗುತ್ತಿದೆ. ನಿಂತಿರುವ ನೀರಿನ ಗುಣಮಟ್ಟ ಸಂಪೂರ್ಣ ಕುಸಿದಿದೆ. ಇಡೀ ಕಾವೇರಿ ನದಿ ಸದ್ಯದ ಪರಿಸ್ಥಿತಿಯಲ್ಲಿ ದುರ್ನಾತ ಬೀರುತ್ತಿದೆ.ಭಾಗಮಂಡಲದಿಂದ ಕುಶಾಲನಗರ ತನಕ ಹರಿಯುವ ಕಾವೇರಿಯಲ್ಲಿ ಎಲ್ಲಿಯೂ ನೀರಿನ ಸಂಗ್ರಹಣಾ ವ್ಯವಸ್ಥೆಗೆ ಯೋಜನೆಗಳನ್ನು ರೂಪಿಸಿಲ್ಲ. ನದಿಯ ಪೂಜೆ ನೆರವೇರಿಸಲು ಕೊಳವೆ ಬಾವಿಯ ನೀರನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ನೀರಿನ ಗುಣಮಟ್ಟದಲ್ಲೂ ಕುಸಿತ: ಇದೀಗ ನದಿಯಲ್ಲಿ ಹೊಂಡಗಳಲ್ಲಿ ಪಾಚಿ ಕಟ್ಟಿ ಸಂಗ್ರಹವಾಗಿರುವ ನೀರನ್ನು ಪ್ರಾಣಿ-ಪಕ್ಷಿಗಳು ಕೂಡ ಬಳಸುವ ಗುಣಮಟ್ಟದಲ್ಲಿ ಇಲ್ಲದಿರುವುದು ಆತಂಕಕಾರಿ ಬೆಳವಣಿಗೆ. ಪಟ್ಟಣಗಳ ವಾಣಿಜ್ಯ ಕಟ್ಟಡಗಳಿಂದ ಹೊರ ಸೂಸುವ ಸಂಪೂರ್ಣ ಕಲುಷಿತ ನೀರು, ನದಿಯ ಒಡಲು ಸೇರಿ ನದಿಯಲ್ಲಿ ಅಳಿದುಳಿದ ನೀರಿನ ಬಣ್ಣ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿ ತನ್ನ ಮೂಲ ಅಸ್ತಿತ್ವವನ್ನೇ ನದಿ ಕಳೆದುಕೊಂಡಂತೆ ಗೋಚರಿಸುತ್ತಿದೆ.ನದಿಯ ತಟದ ಭಾಗಗಳ ಕೊಳವೆ ಬಾವಿಯಲ್ಲಿ ಕೂಡ ನೀರಿನ ಮಟ್ಟ ಸಂಪೂರ್ಣ ಕುಸಿದಿದ್ದು, ಜನತೆ ನೀರಿಗಾಗಿ ಭವಣೆ ಪಡುವ ಪರಿಸ್ಥಿತಿ ಎದುರಾಗಿದೆ.
ಕಳೆದ ಹಲವು ದಶಕಗಳಿಂದ ಇದೇ ಮೊದಲ ಬಾರಿ ಈ ರೀತಿಯ ಪರಿಸ್ಥಿತಿ ಸೃಷ್ಟಿಯಾಗಿದೆ ಎನ್ನುತ್ತಾರೆ ಇಲ್ಲಿನ ಹಿರಿಯರಾದ ನಜೀರ್ ಅಹ್ಮದ್. ಕಳೆದ 8 ದಶಕಗಳ ಅವಧಿಯಲ್ಲಿ ಕಾವೇರಿಯ ಹರಿವು ಸ್ಥಗಿತಗೊಂಡಿದ್ದೇ ಅಪರೂಪ ಎನ್ನುವ ಅವರು ಪ್ರಕೃತಿಯ ಸಮತೋಲನ ತಪ್ಪಿಧ್ದೇ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ.ಕುಶಾಲನಗರದ ಬಹುತೇಕ ಕಚೇರಿಗಳಲ್ಲಿ ಶುದ್ಧ ಕುಡಿಯುವ ನೀರಿನ ಅಭಾವ ತಲೆದೋರಿದೆ. ಲಭ್ಯ ನೀರಿನ ಗುಣಮಟ್ಟ ಕೂಡ ಕುಸಿದಿದೆ. ಇದರಿಂದ ಬಹುತೇಕ ಮಂದಿ ತಮ್ಮ ಮನೆಯಿಂದಲೇ ಕಚೇರಿಗೆ ಶುದ್ಧ ಕುಡಿಯುವ ನೀರನ್ನು ಒಯ್ಯಬೇಕಾದ ಪರಿಸ್ಥಿತಿ ಉಂಟಾಗಿದೆ.
ಮುಂದಿನ ದಿನಗಳಲ್ಲಿ ಸರ್ಕಾರದ ಮೂಲಕ ಅಲ್ಲಲ್ಲಿ ವಾಟರ್ ಗೊಡೌನ್ ನಿರ್ಮಾಣದ ಅಗತ್ಯತೆ ಕಂಡುಬರುತ್ತದೆ. ಅವಶ್ಯವಿರುವ ನೀರಿನ ಸಂಗ್ರಹಕ್ಕೆ ನೆಲಮಟ್ಟದ ಜಲಾಗಾರ ನಿರ್ಮಾಣ ಕೂಡ ಅಗತ್ಯ. ಈ ಬಾರಿ ಕೊರತೆಯ ಮುಂಗಾರು ಎದುರಾಗಲಿದ್ದು, ಮುಂದಿನ ಬೇಸಿಗೆಯಲ್ಲಿ ಪರಿಸ್ಥಿತಿ ಭೀಕರವಾಗಿರಲಿ ಎಂದು ಭಾರತೀಯ ಭೂವಿಜ್ಞಾನ ಸರ್ವೇಕ್ಷಣ ನಿವೃತ್ತ ಉಪ ಮಹಾನಿರ್ದೇಶಕರಾದ ಹಿರಿಯ ವಿಜ್ಞಾನಿ ಡಾ. ಎಚ್.ಎಸ್.ಎಂ. ಪ್ರಕಾಶ್ ಹೇಳಿದರು.