ಮತಯಂತ್ರಗಳಿರುವ ಕಾಲೇಜಿಗೆ ಡಾ.ಸಿ.ಎನ್ .ಮಂಜುನಾಥ್ ಭೇಟಿ

| Published : May 01 2024, 01:15 AM IST

ಸಾರಾಂಶ

ಬೆಂಗಳೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯ 2829 ಮತಗಟ್ಟೆಗಳಲ್ಲಿನ ವಿದ್ಯುನ್ಮಾನ ಮತಯಂತ್ರಗಳನ್ನು 25 ಭದ್ರತಾ ಕೊಠಡಿಗಳಲ್ಲಿ ಇರಿಸಿದ್ದು, ಕಾಲೇಜಿಗೆ ಭೇಟಿ ನೀಡಿದ ಮಂಜುನಾಥ್ ರವರು ಭದ್ರತಾ ವ್ಯವಸ್ಥೆ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ವಿದ್ಯುನ್ಮಾನ ಮತ ಯಂತ್ರಗಳನ್ನು ಭದ್ರತಾ ಕೊಠಡಿಯಡಿ ಇರಿಸಿರುವ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಮಂಗಳವಾರ ಭೇಟಿ ನೀಡಿದರು.

ಬೆಂಗಳೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯ 2829 ಮತಗಟ್ಟೆಗಳಲ್ಲಿನ ವಿದ್ಯುನ್ಮಾನ ಮತಯಂತ್ರಗಳನ್ನು 25 ಭದ್ರತಾ ಕೊಠಡಿಗಳಲ್ಲಿ ಇರಿಸಿದ್ದು, ಕಾಲೇಜಿಗೆ ಭೇಟಿ ನೀಡಿದ ಮಂಜುನಾಥ್ ರವರು ಭದ್ರತಾ ವ್ಯವಸ್ಥೆ ವೀಕ್ಷಿಸಿದರು.

ಈ ವೇಳೆ ಮಾತನಾಡಿದ ಡಾ.ಸಿ.ಎನ್ .ಮಂಜುನಾಥ್ , ಸ್ಟ್ರಾಂಗ್ ರೂಮ್ ವ್ಯವಸ್ಥೆ ಹೇಗಿದೆ ಎಂದು ನೋಡಲು ಬಂದಿದ್ದೇನೆ. ಈಗ ನಾವೇನು ಪ್ರಚಾರ ಮಾಡುತ್ತಿಲ್ಲ. ಗೆಲ್ಲುವ ವಿಶ್ವಾಸ ಇದ್ದು, ಜನ ಸಾಮಾನ್ಯರು ಬಂದು ಗೆಲ್ಲುವುದಾಗಿ ಹೇಳುತ್ತಿದ್ದಾರೆ. ತಾಲೂಕು ಹಾಗೂ ಗ್ರಾಪಂ ಭಾಗಗಳಲ್ಲಿ ಮತದಾನ ಚೆನ್ನಾಗಿ ಆಗಿದೆ ಎಂದು ಪಕ್ಷದ ಮುಖಂಡರು, ಕಾರ್ಯಕರ್ತರು ಫೀಡ್ ಬ್ಯಾಕ್ ಹೇಳುತ್ತಿದ್ದಾರೆ. ದಾರಿಯಲ್ಲಿ ಸಿಗುವ ಕೆಲ ಮತದಾರರು ಗೆಲುವಿನ ವಿಶ್ವಾಸ ತೋರಿಸುತ್ತಿದ್ದಾರೆ. ಹಾಗಾಗಿಯೇ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಎರಡು ಲಕ್ಷಕ್ಕಿಂತ ಅಧಿಕ ಮತದಾನ ಆಗಿದೆ. ನಗರ ಪ್ರದೇಶದಲ್ಲೇ ಹೆಚ್ಚಿನ ಮತದಾನವಾಗಿದೆ. 2019‌ರ ಚುನಾವಣೆಗಿಂತಲೂ ಸುಮಾರು ಎರಡೂವರೆ ಪರ್ಸೆಂಟ್ ಮತದಾನ ಹೆಚ್ಚಾಗಿದೆ. ನಗರದ ಪ್ರದೇಶದಲ್ಲಿ ಶೇ.50,52 ರಷ್ಟು ಆಗುತ್ತಿತ್ತು. ಈ ಬಾರಿ ಶೇ.56ರಷ್ಟು ಆಗಿದೆ.ಚುನಾವಣಾ ಆಯೋಗ ಒಂದು ಬದಲಾವಣೆ ಮಾಡಬೇಕು.

ವೀಕೆಂಡ್ ಟೈಮಿನ ಬದಲಾಗಿ ಮಂಗಳವಾರ, ಬುಧವಾರ ಮತದಾನ ಇಟ್ಟುಕೊಳ್ಳಬೇಕು. ನಗರ ಪ್ರದೇಶಗಳಲ್ಲಿ‌ ಇದನ್ನು ಚುನಾವಣಾ ಆಯೋಗ ಜಾರಿಗೆ ತರಬೇಕು. ಇದರಿಂದ ಇನ್ನೂ ಮೂರು ಪರ್ಸೆಂಟ್ ಹೆಚ್ಚಿನ ಮತದಾನ ಆಗಬಹುದು ಎಂದು ಹೇಳಿದರು.

ಸಂಸದ ಪ್ರಜ್ವಲ್ ರೇವಣ್ಣ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿ ಡಾ.‌ಸಿ ಎನ್ ಮಂಜುನಾಥ್ ಹೊರಟು ಹೋದರು.