ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಜನಸಾಮಾನ್ಯರು ಮನವಿ ಮಾಡಿದ 24 ಗಂಟೆಯೊಳಗೆ ಸ್ಪಂದಿಸಿ, ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀರೆ, ಪೆರ್ಡೂರು, ಮುದ್ರಾಡಿ, ಬೆಳ್ವೆ, ಉಪ್ಪುಂದದ ಗ್ರಾಮದ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಅಲ್ಲಿ ಗ್ರಾಪಂಗಳ ಎಸ್.ಎಲ್.ಆರ್.ಎಂ. ವಾಹನಗಳಲ್ಲಿ ಸಿಂಟ್ಯಾಕ್ಸ್ ಟ್ಯಾಂಕುಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದರು.ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಈವರೆಗೂ ಕಂಡುಬಂದಿಲ್ಲ. ಜಿಲ್ಲೆಯಲ್ಲಿ 2.20 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿದ್ದು, ಮುಂದಿನ 14 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯತೆ ಇದೆ. ರೈತರು ತಮ್ಮ ಜಾನುವಾರುಗಳಿಗೆ ಮೇವಿನ ಅಭಾವವಾದಲ್ಲಿ ಜಿಲ್ಲೆಯ ಗೋಶಾಲೆಗಳಿಗೆ ದನ-ಕರುಗಳನ್ನು ಬಿಡಬಹುದು ಎಂದ ಅವರು, ಮೇವಿನ ಕೊರತೆ ಉಂಟಾದ ರೈತರಿಗೆ ಸರ್ಕಾರಿ ದರದಲ್ಲಿ ಮೇವನ್ನು ನೀಡಲಾಗುವುದು ಎಂದರು.
ಹಾಲು ಉತ್ಪಾದಕರ ಒಕ್ಕೂಟದ ಮೂಲಕ ಮೇವು ಮಿನಿಕಿಟ್‌ಗಳನ್ನು ರೈತರಿಗೆ ವಿತರಿಸಿದ್ದು, 979.5 ಎಕರೆ ಪ್ರದೇಶದಲ್ಲಿ ಸುಮಾರು 9795 ಮೆಟ್ರಿಕ್‌ನಷ್ಟು ಉತ್ಪಾದನೆ ಮಾಡಲಾಗಿದೆ. ಇವುಗಳ ಜೊತೆಯಲ್ಲಿ ಪಶು ಆಹಾರಗಳನ್ನು ಸಹ ರೈತರಿಗೆ ಒದಗಿಸಲಾಗಿದೆ ಎಂದರು.ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ಅಪಾಯಕಾರಿ ಹಾಗೂ ವಿದ್ಯುತ್ ಲೈನ್‌ಗಳಿಗೆ ತೊಂದರೆ ಉಂಟುಮಾಡುವ ಮರಗಳನ್ನು ತೆರೆವುಗೊಳಿಸಲು ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಯವರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಕ್ರಮಕ್ಕೆ ಈಗಾಗಲೇ ಪಿ.ಡಿ. ಖಾತೆಯಲ್ಲಿ 16.94 ಕೋಟಿ ರು.ನಷ್ಟು ಅನುದಾನ ಲಭ್ಯವಿದೆ. ಈಗಾಗಲೇ ತಾಲೂಕು ಮಟ್ಟದ ತಹಶೀಲ್ದಾರರ ವಿಪತ್ತು ಪಿ.ಡಿ ಖಾತೆಯಲ್ಲಿ 2.21 ಕೋಟಿ ರು. ಹಾಗೂ ಜಿಲ್ಲೆಯ ಬರ ಪ್ರದೇಶ ಎಂದು ಘೋಷಿಸಿದ ಮೂರು ತಾಲೂಕುಗಳ ಬರ ನಿರ್ವಹಣೆಗೆ 4.5 ಕೋಟಿ ರು. ಅನುದಾನ ಒದಗಿಸಲಾಗಿದ್ದು, ಬರ ನಿರ್ವಹಣೆಗೆ ಯಾವುದೇ ಕೊರತೆ ಇರುವುದಿಲ್ಲ ಎಂದರು.ಸಭೆಯಲ್ಲಿ ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ. ಎಸ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಹಸೀಲ್ದಾರ್‌ಗಳು, ತಾಲೂಕು ಪಂಚಾಯಿತಿ ಇ.ಒ.ಗಳು ಉಪಸ್ಥಿತರಿದ್ದರು................
ಮೇ 7ರ ವರೆಗೆ ಹೀಟ್ ವೇವ್ ಸಾಧ್ಯತೆಮೇ 7ರ ವರೆಗೆ ಹೀಟ್ ವೇವ್ (ಬಿಸಿಗಾಳಿ) ಬೀಸುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಜನರು ಮಧ್ಯಾಹ್ನ 12 ರಿಂದ 3ರ ವರೆಗೆ ಸಾಧ್ಯವಾದಷ್ಟು ಹೊರಗಡೆ ಓಡಾಡುವುದನ್ನು ತಪ್ಪಿಸಬೇಕು. ಸಾಕಷ್ಟು ನೀರನ್ನು ಕುಡಿಯಬೇಕು. ಸಾಕು ಪ್ರಾಣಿಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು. ಬಿಸಿಗಾಳಿಗೆ ತುತ್ತಾಗಿ ಆರೋಗ್ಯದಲ್ಲಿ ವ್ಯತ್ಯಾಸವಾದ ವ್ಯಕ್ತಿಯು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆಯಬೇಕು, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಡಿಸಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))