ಸಾರಾಂಶ
ಸಿಂಧನೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ಪಳ ಲೋಕಸಭೆ ಅಭ್ಯರ್ಥಿಯಾಗಿರುವ ಡಾ.ಬಸವರಾಜ ಕ್ಯಾವಟರ್ ಅವರನ್ನು ಬಹುಮತದಿಂದ ಗೆಲ್ಲಿಸಿರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಮತಯಾಚಿಸಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳ ಸಹಕಾರದೊಂದಿಗೆ ಕೊಪ್ಪಳ ಲೋಕಸಭೆ ಅಭ್ಯರ್ಥಿಯಾಗಿರುವ ಡಾ.ಬಸವರಾಜ ಕ್ಯಾವಟರ್ ಅವರನ್ನು ಬಹುಮತದಿಂದ ಗೆಲ್ಲಿಸಿರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.ನಗರದ ಸತ್ಯಗಾರ್ಡನ್‌ನಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯ ತಳಮಟ್ಟದಲ್ಲಿರುವ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ತೆರಳಿ ಬಿಜೆಪಿ ಗೆಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಅವರಿಗೆ ತಿಳಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರ ಜನಪರ ಕೆಲಸಗಳ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಹಿಂದೆ ವಿದೇಶಗಳಿಂದ ಸಾಲ ಬೇಡುವ ಸ್ಥಿತಿಯಲ್ಲಿದ್ದ ಭಾರತ ಈಗ 76 ದೇಶಗಳಿಗೆ ನೆರವು ನೀಡುವ ಆರ್ಥಿಕ ಸ್ಥಿರತೆಯನ್ನು ಹೊಂದಿದೆ. ವಿಶ್ವದ ಪ್ರತಿಯೊಂದು ರಾಷ್ಟ್ರದೊಂದಿಗೆ ಬಾಂಧವ್ಯ ಇಟ್ಟುಕೊಂಡಿರುವ ಪ್ರಧಾನಿ ರಷ್ಯಾ, ಉಕ್ರೇನ್ ಯುದ್ಧದಲ್ಲಿ ಸಂಕಟ ಅನುಭವಿಸುತ್ತಿದ್ದ 23 ಸಾವಿರ ಭಾರತೀಯರನ್ನು ತಾಯ್ನಾಡಿಗೆ ಕರೆದುಕೊಂಡು ಬಂದ ಕೀರ್ತಿ ಹೊಂದಿದ್ದಾರೆ. 34 ಕೋಟಿ ಜನರಿಗೆ ನೇರವಾಗಿ ಹಣ ತಲುಪಿಸುತ್ತಿದ್ದಾರೆ. 100ರಷ್ಟು ಜನರಿಗೆ ಕೋವಿಡ್ ಸಮಯದಲ್ಲಿ ಉಚಿತ ಔಷಧಿ ನೀಡಿದ್ದಾರೆ. ಸೌದೆಯಲ್ಲಿ ಅಡುಗೆ ಮಾಡುವ ತಾಯಂದಿರಿಗೆ ಗ್ಯಾಸ್ ಸ್ವಿಚ್ ಆನ್ ಮಾಡಿದರೆ ಸಾಕು ಅಡುಗೆ ತಯಾರಾಗುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಇವೆಲ್ಲ ಅಚ್ಛಾ ದಿನಗಳು ಅಲ್ಲವೇ ಎಂದು ಸಭಿಕರ ಕರತಾಡನಗಳ ಮಧ್ಯೆ ಪ್ರಶ್ನಿಸಿದರು.ಮಾಜಿ ಸಂಸದರು, ಶಾಸಕರು, ಮುಖಂಡರು, ಕಾರ್ಯಕರ್ತರು ಇದ್ದರು.