ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಸರ್.ಎಂ.ವಿ ಮೊಮ್ಮಗಳಿಗೆ ಆಹ್ವಾನ

| Published : May 01 2024, 01:15 AM IST

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಸರ್.ಎಂ.ವಿ ಮೊಮ್ಮಗಳಿಗೆ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕಾ ಪ್ರವಾಸದಲ್ಲಿರುವ ಡಾ.ಮಹೇಶ್‌ ಜೋಶಿ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಧನೆ ಮಾಡಿದ ಕನ್ನಡಿಗರನ್ನು ಆಹ್ವಾನಿಸುವ ಮೂಲಕ ಸಮ್ಮೇಳನವನ್ನು ಅರ್ಥಪೂರ್ಣವಾಗಿಸಿ ವಿಶ್ವ ಕನ್ನಡಿಗರನ್ನು ಭಾಗಿಯಾಗುವಂತೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಆ ನಿಟ್ಟಿನಲ್ಲಿ ಅಮೆರಿಕಾದ ಕುಪರ್ಟಿನೋ ಮೇಯರ್ ಆಗಿರುವ ಸರ್.ಎಂ.ವಿಶ್ವೇಶ್ವರಯ್ಯನವರ ಮೊಮ್ಮಗಳು ಶೀಲಾ ಮೋಹನ್ ಅವರನ್ನು ಭೇಟಿ ಸಮ್ಮೇಳನಕ್ಕೆ ಆಹ್ವಾನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಮೆರಿಕೆಯಲ್ಲಿರುವ ಸರ್‌.ಎಂ. ವಿಶ್ವೇಶ್ವರಯ್ಯನವರ ಮೊಮ್ಮಗಳು ಶೀಲಾ ಮೋಹನ್‌ ಅವರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ.ಮಹೇಶ್‌ ಜೋಶಿ ಆಹ್ವಾನ ನೀಡಿದರು.

ಅಮೆರಿಕಾ ಪ್ರವಾಸದಲ್ಲಿರುವ ಡಾ.ಮಹೇಶ್‌ ಜೋಶಿ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಧನೆ ಮಾಡಿದ ಕನ್ನಡಿಗರನ್ನು ಆಹ್ವಾನಿಸುವ ಮೂಲಕ ಸಮ್ಮೇಳನವನ್ನು ಅರ್ಥಪೂರ್ಣವಾಗಿಸಿ ವಿಶ್ವ ಕನ್ನಡಿಗರನ್ನು ಭಾಗಿಯಾಗುವಂತೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಆ ನಿಟ್ಟಿನಲ್ಲಿ ಅಮೆರಿಕಾದ ಕುಪರ್ಟಿನೋ ಮೇಯರ್ ಆಗಿರುವ ಸರ್.ಎಂ.ವಿಶ್ವೇಶ್ವರಯ್ಯನವರ ಮೊಮ್ಮಗಳು ಶೀಲಾ ಮೋಹನ್ ಅವರನ್ನು ಭೇಟಿ ಮಾಡಿದ ಡಾ.ಮಹೇಶ್‌ ಜೋಶಿ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸಿದವರಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರು ಪ್ರಮುಖರು. ಅವರ ಮೊಮ್ಮಗಳು ದೂರದ ಅಮೆರಿಕಾದ ಪ್ರಮುಖ ಪ್ರಾಂತ್ಯಕ್ಕೆ ಮೇಯರ್ ಆಗಿರುವುದು ನಿಜಕ್ಕೂ ಸಂತೋಷದ ಸಂಗತಿ. ಅವರ ಭಾಗವಹಿಸುವಿಕೆಯಿಂದ ಸಮ್ಮೇಳನವು ಅರ್ಥಪೂರ್ಣವಾಗಲಿದೆ ಎನ್ನುವ ವಿಶ್ವಾಸವನ್ನು ಜೋಶಿ ವ್ಯಕ್ತಪಡಿಸಿದ್ದಾರೆ.

ಕನ್ನಡಿಗಳು ಎಂಬುದೇ ಹೆಮ್ಮೆಯ ವಿಷಯ; ಶೀಲಾ ಮೋಹನ್

ಆಹ್ವಾನ ಸ್ವೀಕರಿಸಿದ ಶೀಲಾ ಮೋಹನ್ ಮಾತನಾಡಿ, ತಮ್ಮ ಕುಟುಂಬಕ್ಕೂ ಮತ್ತು ಮಂಡ್ಯಕ್ಕೂ ಇರುವ ಭಾವನಾತ್ಮಕ ಸಂಬಂಧವನ್ನು ಸ್ಮರಿಸಿದರು. ತಮ್ಮನ್ನು ಗುರುತಿಸಿ ಆಹ್ವಾನಿಸಿದ್ದಕ್ಕಾಗಿ ಡಾ.ಮಹೇಶ್‌ ಜೋಶಿಯವರಿಗೆ ಧನ್ಯವಾದ ಸಲ್ಲಿಸಿದರು. ಶೀಲಾ ಮೋಹನ್ ಅವರು ತಮ್ಮ ತಾತ ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ಆಡುತ್ತಿದ್ದ ಮಾತುಗಳನ್ನು, ಮಿರ್ಜಾ ಇಸ್ಮಾಯಿಲ್ ಮತ್ತು ತಮ್ಮ ತಾತನವರಿಗೂ ಇದ್ದ ಬಾಂಧವ್ಯವನ್ನು ನೆನಪು ಮಾಡಿಕೊಂಡು ನಾನು ಕನ್ನಡಿಗಳು ಎನ್ನುವುದೇ ನನಗೆ ಹೆಮ್ಮೆಯ ವಿಷಯ. ಅದರಲ್ಲಿಯೂ ವಿಶ್ವೇಶ್ವರಯ್ಯನವರ ಮೊಮ್ಮಗಳು ಎನ್ನುವುದು ಇನ್ನಷ್ಟು ಹೆಮ್ಮೆ ಎಂದರು.

ಮಂಡ್ಯದ ಜನತೆಗೆ ಸರ್.ಎಂ.ವಿಶ್ವೇಶ್ವರಯ್ಯನವರ ಕುರಿತು ಭಾವನಾತ್ಮಕ ಸಂಬಂಧವಿದೆ. ಮಂಡ್ಯದ ಪ್ರತಿ ಮನೆಯಲ್ಲಿಯೂ ತಮ್ಮ ಹಿರಿಯರ ಭಾವಚಿತ್ರ ಇಲ್ಲದೆ ಹೋದರೂ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರ ಇರುತ್ತದೆ ಎಂದು ಸ್ಮರಿಸಿದ್ದಾರೆ.

ಅಮೆರಿಕಾದ ನಾರ್ತ್ ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿ ಕನ್ನಡಿಗರನ್ನು ಸಂಘಟಿಸಿರುವ ಕನ್ನಡ ಕೂಟ ವಸಂತ ಬಳಗರೆಯವರನ್ನು ಡಾ.ಮಹೇಶ್‌ ಜೋಶಿಯವರು ಭೇಟಿ ಮಾಡಿ ಕನ್ನಡಿಗರ ಸ್ಥಿತಿಗತಿಯ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಬಹುಸಂಖ್ಯಾತ ಕನ್ನಡಿಗರು ಡಾ.ಮಹೇಶ್‌ ಜೋಶಿಯವರ ಪ್ರಯತ್ನವನ್ನು ಪ್ರಶಂಸಿಸಿದ್ದೂ ಅಲ್ಲದೇ, ದೊಡ್ಡ ಸಂಖ್ಯೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.