ಪ್ರಜ್ವಲ್‌ ವಿರುದ್ಧ ಬೀದಿಗಿಳಿದ ಕಾಂಗ್ರೆಸ್‌ ನಾರಿಯರು

| Published : May 01 2024, 01:15 AM IST

ಪ್ರಜ್ವಲ್‌ ವಿರುದ್ಧ ಬೀದಿಗಿಳಿದ ಕಾಂಗ್ರೆಸ್‌ ನಾರಿಯರು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ವಲ್ ರೇವಣ್ಣ ಮಾಡಿದ ವಿಕೃತ ಘಟನೆಯನ್ನು ಬಿಜೆಪಿ ಖಂಡಿಸುವ ಬದಲು ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ. ವೈರಲ್ ಆಗಿರುವ ವಿಡಿಯೋ ಸುಳ್ಳು ಎಂದು ಹೇಳುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಪಕ್ಷ ನಾಯಕ ಆರ್. ಅಶೋಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆ ಖಂಡನೀಯ

ಹುಬ್ಬಳ್ಳಿ:

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಲು ಒತ್ತಾಯಿಸಿ ಮಂಗಳವಾರ ಹು-ಧಾ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಸಾವಿರಾರು ಮಹಿಳಾ ಕಾರ್ಯಕರ್ತರು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಮಹಿಳಾ ಕಾರ್ಯಕರ್ತೆಯರು, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಲ್ಲಿಂದ ಹೊರಟ ಪ್ರತಿಭಟನಾ ರ್‍ಯಾಲಿಯು ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಮತ್ತೊಮ್ಮೆ ಸಮಾವೇಶಗೊಂಡರು.

ಈ ವೇಳೆ ಮಾತನಾಡಿದ ಸಚಿವ ದಿನೇಶ ಗುಂಡೂರಾವ್, ಪ್ರಜ್ವಲ್ ರೇವಣ್ಣ ಮಾಡಿದ ವಿಕೃತ ಕೃತ್ಯವನ್ನು ಬಿಜೆಪಿ ಖಂಡಿಸುವ ಬದಲು ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ. ವೈರಲ್ ಆಗಿರುವ ವಿಡಿಯೋ ಸುಳ್ಳು ಎಂದು ಹೇಳುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಪಕ್ಷ ನಾಯಕ ಆರ್. ಅಶೋಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆ ಖಂಡನೀಯ ಎಂದರು.

ಬೇಟಿ ಬಚಾವೋ ಬೇಟಿ ಪಡಾವೋ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಈ ವಿಷಯದಲ್ಲಿ ಏಕೆ ಮೌನ ವಹಿಸುತ್ತಿದ್ದಾರೆ ಎಂದು ಗುಂಡೂರಾವ್ ಪ್ರಶ್ನಿಸಿದರು.

ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಮತ್ತು ಎಚ್.ಡಿ. ಕುಮಾರಸ್ವಾಮಿ ತಮ್ಮ ಮಗ ಪ್ರಜ್ವಲ್‌ನನ್ನು ವಿದೇಶಕ್ಕೆ ಓಡಿ ಹೋಗಲು ಬಿಟ್ಟು, ಈಗ ಸುದ್ದಿಗೋಷ್ಠಿಯಲ್ಲಿ ವೈರಲ್ ಆದ ವಿಡಿಯೋಗಳು ಹಳೆಯವು ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಅವನನ್ನು ಕರ್ನಾಟಕಕ್ಕೆ ಕರೆತಂದು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ದೀಪಾ ಗೌರಿ ಮಾತನಾಡಿ, ವಿದೇಶಕ್ಕೆ ಹೋಗಿರುವ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ, ವಾಪಸ್ ಕರ್ನಾಟಕಕ್ಕೆ ಕರೆತರಬೇಕು. ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಜ್ವಲ್‌ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಶಾಸಕ ಪ್ರಸಾದ್ ಅಬ್ಬಯ್ಯ, ಹುಡಾ ಅಧ್ಯಕ್ಷ ಶಾಕೀರ ಸನದಿ, ಜಿಲ್ಲಾಧ್ಯಕ್ಷರಾದ ಅಲ್ತಾಫ ಹಳ್ಳೂರ, ಸದಾನಂದ ಡಂಗನವರ, ಕೆಪಿಸಿಸಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿ, ರಾಜೇಶ್ವರಿ ಪಾಟೀಲ, ಮಹಿಳಾ ಮುಖಂಡರಾದ ದೇವಕಿ ಯೋಗಾನಂದ, ಸುಜಾತಾ ಮುನಿರಾಜು, ಶಿವಲೀಲಾ ಕುಲಕರ್ಣಿ, ಚೇತನಾ ಲಿಂಗದಾಳ, ಬಾಳಮ್ಮ ಜಂಗೀನವರ, ಕಲಾವತಿ ಡಿ. ಸೇರಿದಂತೆ ಹಲವರಿದ್ದರು.