ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಕಾರಣಿಗಳು ಜಾತಿ, ಧರ್ಮದಂತಹ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವುದು ದೇಶದ ದುರಾದೃಷ್ಟ ಎಂದು ಹಿರಿಯ ಸಾಹಿತಿ ಡಾ। ಕೆ.ಮರುಳಸಿದ್ದಪ್ಪ ಬೇಸರ ವ್ಯಕ್ತಪಡಿಸಿದರು.ಮಹಾತ್ಮ ಗಾಂಧಿ ಹುತಾತ್ಮರಾದ ಜನವರಿ 30ರಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ‘ಸೌಹಾರ್ದತೆಗಾಗಿ ಮಾನವ ಸರಪಳಿ’ ನಿರ್ಮಿಸುವ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣ, ವ್ಯವಸ್ಥೆಯ ಬಗ್ಗೆ ಸಮಾಜದಲ್ಲಿ ಅಪನಂಬಿಕೆ ಸೃಷ್ಟಿಯಾಗುತ್ತಿದೆ. ಸ್ನೇಹ, ಸೌಹಾರ್ದತೆ ಕಡಿಮೆಯಾಗುತ್ತಿದೆ. ಹೀಗಾಗಿ, ಭಾವನಾತ್ಮಕ ವಿಚಾರಗಳಿಂದ ಹೊರ ಬಂದು ಸೌಹಾರ್ದತೆಯ ಬಗ್ಗೆ ನಾಗರಿಕರಲ್ಲಿ, ಅದರಲ್ಲೂ ವಿಶೇಷವಾಗಿ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾನವ ಸರಪಳಿ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಧರ್ಮ ಮತ್ತು ದೇವರು ಖಾಸಗಿಯಾಗಿರಬೇಕು. ಜನಪ್ರತಿನಿಧಿಗಳು ದೇಶದ ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು. ರಾಜಕಾರಣಿಗಳು ಪ್ರಜಾಪ್ರಭುತ್ವ ಉಳಿಸಲು ರಾಜಕಾರಣ ಮಾಡುವುದನ್ನು ಬಿಟ್ಟು, ಸ್ವಾರ್ಥದ ದಾರಿ ಹಿಡಿದಿದ್ದಾರೆ. ಇದರಿಂದ ಸಮಾಜ, ದೇಶ ದಾರಿ ತಪ್ಪುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ ಸಿದ್ದರಾಮಯ್ಯ ಮಾತನಾಡಿ, ಯುವ ಜನತೆಗೆ ಧರ್ಮದ ಅಮಲು ತುಂಬಲಾಗುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸುವ ಶಕ್ತಿಗಳಿಂದ ಸಾಮಾಜಿಕ ಸೌಹಾರ್ದತೆಗೆ ತೀವ್ರತರದ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಕಾಳಜಿ ಇರುವ ಎಲ್ಲರೂ ಒಂದೆಡೆ ಸೇರಿ ಸೌಹಾರ್ದತೆಯ ಸಂದೇಶ ನೀಡುವ ಪ್ರಯತ್ನ ಮಾಡುತ್ತೇವೆ. ಅನೇಕ ಸಂಘಟನೆಗಳು, ನಾಡಿನ ಪ್ರಗತಿಪರ ಚಿಂತಕರು ಸೇರಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಜ.30ರಂದು ಸಂಜೆ ಮಾನವ ಸರಪಳಿ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.