ಸಾರಾಂಶ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ । ತಂಡವಾಗಿ ಧಾವಿಸಿದ ವಿದ್ಯಾರ್ಥಿಗಳು, ಜನರು । 55 ಕಿ.ಮೀ. ನಿರ್ಮಾಣ
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಕೋಲಾರ ಜಿಲ್ಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ಕಾರ್ಯಕ್ರಮವು ಹೊಸ ಇತಿಹಾಸ ಸೃಷ್ಟಿಸಿತು.
ಪೂರ್ವನಿಗದಿಯಂತೆ ಬೆಳಗಿನ ಅವಧಿಯಲ್ಲಿ ಮಾನವ ಸರಪಳಿ ಕಾರ್ಯವು ಮಾರ್ಗದುದ್ದಕ್ಕೂ ಯಶಸ್ವಿಯಾಗಿ ನೆರವೇರಿತು.ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸಿ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವ ಕಾರ್ಯಕ್ರಮಕ್ಕೆ ಕೈಜೋಡಿಸಿದರು.
ಚಿಕ್ಕಬಳ್ಳಾಪುರ-ಕೋಲಾರ ಗಡಿಭಾಗದ ಹೆದ್ದಾರಿಯಲ್ಲಿನ ಚೊಕ್ಕಂಡ ಹಳ್ಳಿ ಗ್ರಾಮದಿಂದ ಕೋಲಾರ ನಗರ ಮೂಲಕ ರಾಷ್ಟೀಯ ಹೆದ್ದಾರಿಯಲ್ಲಿ ಜಿಲ್ಲೆಯ ಗಡಿ ರಾಮಸಂದ್ರ ಗೇಟ್‌ವರೆಗೆ ಸುಮಾರು ೫೫ ಕಿ.ಮೀ ಉದ್ದ ಮಾನವ ಸರಪಳಿಯನ್ನು ನಿರ್ಮಿಸಿ ಕೋಲಾರ ಜಿಲ್ಲೆಯ ಜನರು ವಿಶ್ವದಾಖಲೆಯ ಭಾಗವಾದರು.ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ನಿರಂತರ ಸಭೆ ನಡೆಸಿ ಅಧಿಕಾರಿಗಳ ತಂಡ ರಚಿಸಿ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದ ಐತಿಹಾಸಿಕ ಮಾನವ ಸರಪಳಿಯಲ್ಲಿ ಜಿಲ್ಲೆಯ ಜನ ಪ್ರತಿನಿಧಿಗಳು, ಗಣ್ಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಎಲ್ಲಾ ಸಂಘ ಸಂಸ್ಥೆಗಳು ಪ್ರತಿನಿಧಿಗಳು, ಕಾರ್ಮಿಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸಂವಿಧಾನ ಪೀಠಿಕೆ ವಾಚನ:ಕೋಲಾರದ ಗಡಿ ಪ್ರಾರಂಭವಾಗುವ ಚೊಕ್ಕಂಡ ಹಳ್ಳಿ ಗ್ರಾಮದ ಬಳಿ ವೇದಿಕೆ ಕಾರ್ಯಕ್ರಮ ನಡೆಯಿತು.
ಇದೇ ವೇಳೆ, ಸಂವಿಧಾನ ಪೀಠಿಕೆಯ ವಾಚನ ಕಾರ್ಯಕ್ರಮಕ್ಕೆ ಗಾಳಿಬುರುಡೆಗಳನ್ನು ಹಾಗೂ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಜಿಲ್ಲಾಧಿಕಾರಿ ಅಕ್ರಂ ಪಾಷ ಚಾಲನೆ ನೀಡಿದರು.ಈ ವೇಳೆ ಮಾತನಾಡಿ, ಜನಾಡಳಿತ ಜಾರಿಗೊಳಿಸಿದ ಪ್ರಜಾಪ್ರಭುತ್ವವು ಅತ್ಯಂತ ದೊಡ್ಡ ಶಕ್ತಿಯಾಗಿದೆ. ಎಲ್ಲರಿಗೂ ಸಮಾನವಾಗಿ ಬದುಕುವ ಸ್ವಾತಂತ್ರ್ಯದ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿ ಬ್ರಿಟಿಷ್‌ರ ಹಾಗೂ ರಾಜರ ಆಡಳಿತವಿತ್ತು. ಆದರೆ ಜನರ ಆಡಳಿತವಿರಲಿಲ್ಲ. ಪ್ರಜಾಪ್ರಭುತ್ವದಿಂದಲೇ ನಮಗೆ ಜನಾಡಳಿತ ಸಾಧ್ಯವಾಗಿದೆ. ಸಂವಿಧಾನದಿಂದಾಗಿ ನಮಗೆ ಮಹತ್ವದ ಹಕ್ಕುಗಳು ದೊರೆತಿವೆ. ನಮ್ಮ ಹಕ್ಕಗಳನ್ನು ರಕ್ಷಣೆ ಮಾಡಿಕೊಳ್ಳುವುದರ ಜತೆಗೆ ಅವುಗಳನ್ನು ಉಳಿಸಿಕೊಳ್ಳಬೇಕು. ಪ್ರಜಾಪ್ರಭುತ್ವವು ಅತ್ಯಂತ ದೊಡ್ಡ ಶಕ್ತಿಯಾಗಿದ್ದು, ಅದನ್ನು ಯಾರು ಬಿಟ್ಟುಕೊಡಬಾರದು ಎಂದು ತಿಳಿಸಿದರು.೨೫೦೦ ಕಿ.ಮೀ ಉದ್ದದ ಬೃಹತ್ ಮಾನವ ಸರಪಳಿ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಸಹ ಸಾವಿರಾರು ಸಂಖ್ಯೆಯಲ್ಲಿ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಶಾಲಾ-ಕಾಲೇಜು ಮಕ್ಕಳು, ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.
ಮಾಜಿ ವಿಧಾನ ಪರಿಷತ್ ಸಭಾಪತಿ ಸುದರ್ಶನ್, ಉಪವಿಭಾಗಾಧಿಕಾರಿ ಡಾ.ಮೈತ್ರಿ, ವೇಮಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ್, ಉಪ ಕಾರ್ಯದರ್ಶಿ ಶಿವಕುಮಾರ್ ಇದ್ದರು.ಗಮನ ಸೆಳೆದ ಕಲಾ ತಂಡಗಳು:
ಕೋಲಾರ ನಗರದ ಮೇಕ್ರಿ ವೃತ್ತದಲ್ಲಿ ನಂದಿ ಕೋಲು, ವಿರಾಗಾಸೆ ,ಗಾರುಡಿ ಗೊಂಬೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡು ಹಬ್ಬದ ವಾತಾವರಣ ಸೃಷ್ಟಿಸಿದ್ದವು. ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಭಾಗಿಯಾಗಿದ್ದರು.