11ರಂದು ಜಿಲ್ಲಾಡಳಿತದ ವಿರುದ್ಧ ರೈತರ ಮಾನವ ಸರಪಳಿ, ರಸ್ತೆ ತಡೆ

| Published : Oct 09 2024, 01:34 AM IST

ಸಾರಾಂಶ

ಈ ಬಗ್ಗೆ ರಾಮನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರನ್ನೂ ಸಹ ಸಂಪರ್ಕಿಸಿ ಬೇಡಿಕೆ ಈಡೇರಿಸಲು ಕೋರಲಾಗಿತ್ತು. ಆದರೆ, 15 ದಿನಗಳ ಕಾಲಾವಕಾಶ ಕೋರಿದ್ದ ಉಸ್ತುವಾರಿ ಸಚಿವರು ನಮ್ಮ ಹೋರಾಟವನ್ನು ಕಡೆಗಣಿಸಿರುವುದರಿಂದ ಪ್ರೊ. ನಂಜುಂಡಸ್ವಾಮಿಯವರ ಮಾದರಿಯಂತೆ ಸರ್ಕಾರಕ್ಕೆ ಚಾಟಿ ಬೀಸುವ ಸಲುವಾಗಿ ನಾಡಹಬ್ಬ ವಿಜಯದಶಮಿಯಂದು ಹೋರಾಟ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ನಾಡಹಬ್ಬ ವಿಜಯದಶಮಿಯ ದಿನ ಅ.11 ರಂದು ರೈತಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಾಮಾಹಿಕ ನಾಯಕತ್ವದಲ್ಲಿ ಐಜೂರು ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಮಲ್ಲಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಡಹಬ್ಬವು ನಮ್ಮ ಮನಗಳ ಹಬ್ಬ, ಮನೆಗಳ ಹಬ್ಬ, ಅದನ್ನು ವೈಯಕ್ತಿಕವಾಗಿ ಸಂಭ್ರಮಿಸುತ್ತೇವೆ. ಆದರೆ ಸತ್ತ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತಚೇತ‌ನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಮಾದರಿಯ ಹೋರಾಟ ಹಮ್ಮಿಕೊಂಡಿದ್ದು, ವಿವಿಧ ಸಂಘಟನೆಗಳ ಹಾಗೂ ರಾಜ್ಯ ರೈತ ಸಂಘದ ಸಹಸ್ರಾರು ರೈತರನ್ನು ಸೇರಿಸಿ ಪ್ರತಿಭಟಿಸಲಿದ್ದೇವೆ ಎಂದು ತಿಳಿಸಿದರು.

ರಾಮನಗರದ ರೈತರು ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಮತ್ತು ಜಿಲ್ಲಾಧಿಕಾರಿಗಳು ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಭಟನೆ ನಿಷೇಧಿಸಿ ಸಂವಿಧಾನ ಬಾಹಿರವಾಗಿ ಹೊರಡಿಸಿದ್ದ 144 ಸೆಕ್ಷನ್ ತೆರವಿಗೆ ಆಗ್ರಹಿಸಿ ಕಳೆದ ತಿಂಗಳು ರೈತಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮುಷ್ಕರ ನಡೆಸಲಾಗಿತ್ತು ಎಂದರು.

ಈ ಬಗ್ಗೆ ರಾಮನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರನ್ನೂ ಸಹ ಸಂಪರ್ಕಿಸಿ ಬೇಡಿಕೆ ಈಡೇರಿಸಲು ಕೋರಲಾಗಿತ್ತು. ಆದರೆ, 15 ದಿನಗಳ ಕಾಲಾವಕಾಶ ಕೋರಿದ್ದ ಉಸ್ತುವಾರಿ ಸಚಿವರು ನಮ್ಮ ಹೋರಾಟವನ್ನು ಕಡೆಗಣಿಸಿರುವುದರಿಂದ ಪ್ರೊ. ನಂಜುಂಡಸ್ವಾಮಿಯವರ ಮಾದರಿಯಂತೆ ಸರ್ಕಾರಕ್ಕೆ ಚಾಟಿ ಬೀಸುವ ಸಲುವಾಗಿ ನಾಡಹಬ್ಬ ವಿಜಯದಶಮಿಯಂದು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮಲ್ಲಯ್ಯ ಹೇಳಿದರು.

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ರೈತಸಂಘದ ಬೇಡಿಕೆಗಳ ಪಟ್ಟಿಯನ್ನು ನೋಡಿದರೆ ಈ ಸರ್ಕಾರದ ಆಡಳಿತ ಯಂತ್ರವು ರಾಮನಗರದಲ್ಲಿ ಎಷ್ಟು ನಿಷ್ಕ್ರಿಯವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಸಮಸ್ಯೆ ಗಳನ್ನು ಪರಿಹರಿಸುವ ಇಚ್ಛಾಶಕ್ತಿ ಇಲ್ಲದ ಜಿಲ್ಲಾಧಿಕಾರಿಯನ್ನು ರಾಮನಗರದ ಜನತೆ ಹೊಂದಿರುವುದು ವಿಷಾದಕರ ಎಂದರು.

ಸಮಸ್ಯೆಗಳನ್ನು ಆಲಿಸದೆ ನಿಷೇಧಾಜ್ಞೆ ಹೇರಿ ನಮ್ಮ ನಿಮ್ಮ ನಡುವೆ ಅಂತರವಿರಲಿ ಎಂಬ ಹಂಬಲದ ಅಸಮರ್ಥ ಜಿಲ್ಲಾಧಿಕಾರಿಯಿಂದ ಜಿಲ್ಲೆಯ ಪ್ರಗತಿ ಸಂಪೂರ್ಣ ಹಿಂದುಳಿಯುವ ಸಾಧ್ಯತೆ ಹೆಚ್ಚಾಗಿದೆ. ರೈತರ ಅಹವಾಲು ಆಲಿಸದ ಜಿಲ್ಲಾಧಿಕಾರಿ ಅಧಿಕಾರ ಬಿಟ್ಟು ತೊಲಗಲಿ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಮುಡಾ ಮತ್ತು ವಾಲ್ಮೀಕಿ ಹಗರಣದಿಂದ ಪಾರಾಗುವ ನಿಟ್ಟಿನಲ್ಲಿ ಜನಪರ ಆಡಳಿತವನ್ನು ಮರೆತಿದೆ. ರೈತಪರ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬೇಡಿಕೆ ಈಡೇರುವವರೆಗೂ ನಿರಂತರವಾಗಿ ಪ್ರತಿಭಟಿಸಲಿದ್ದು ಮಣಿಯುವ ಮಾತೇ ಇಲ್ಲ ಎಂದು ಹೇಳಿದರು.

ರಾಜ್ಯ ರೈತಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ರೈತರ ಚಳುವಳಿಗಳನ್ನು ಜಿಲ್ಲಾಧಿಕಾರಿಗಳು ನಿರ್ಲಕ್ಷಿಸುತ್ತ ಬಂದಿದ್ದು ಅವರಿಗೆ ಸಂವಿಧಾನದ ಅರಿವಿಲ್ಲ ಎನಿಸುತ್ತದೆ. ಇಂತಹ ಜಿಲ್ಲಾಧಿಕಾರಿ ನಮಗೆ ಅಗತ್ಯವಿಲ್ಲ ಎಂದರು.

ರೈತ ಸಂಘದ ರಾಮನಗರ ಜಿಲ್ಲಾ ಅಧ್ಯಕ್ಷ ತಿಮ್ಮೇಗೌಡ್ರು, ಚನ್ನಪಟ್ಟಣ ಅಧ್ಯಕ್ಷ ರಾಮೇಗೌಡ, ಕೆ ಆರ್ ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ, ಜಿಲ್ಲಾ ಕಾರ್ಯದರ್ಶಿ ಶಿಲ್ಪಾ, ಎಚ್.ಸಿ.ಕೃಷ್ಣಪ್ಪ. ಪುಟ್ಟಸ್ವಾಮಿ ನಾಗರಾಜು, ಶಿವಣ್ಣ ಯಲಿಯೂರು, ರವಿ, ಸಿದ್ದರಾಜು, ಲೋಕೇಶ್, ಡಿ‌.ಕೆ.ಶಿವಲಿಂಗಯ್ಯ ಇತರರಿದ್ದರು.