ಸಾರಾಂಶ
ಮಹಾತ್ಮ ಗಾಂಧಿ ಹುತಾತ್ಮ ದಿನದಂದು ಕುಂದಾಪುರದ ಸಮಾನಮನಸ್ಕ ಸಂಘಟನೆಗಳಿಂದ ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿ-66ರ ಬಳಿ ನಡೆದ ಮಾನವ ಸರಪಳಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರ
ನಮ್ಮ ದೇಶವನ್ನು ಇನ್ನೂರು ವರ್ಷಗಳ ಕಾಲ ಆಳಿದ ಬ್ರಿಟನ್ ದೇಶದ ಪಾರ್ಲಿಮೆಂಟ್ ಕಟ್ಟಡದ ಮಧ್ಯೆ ಗಾಂಧಿ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಎಲ್ಲಿಯ ತನಕ ಗಾಂಧಿ ಅಲ್ಲಿ ಇರುತ್ತಾರೊ ಅಲ್ಲಿಯ ತನಕ ಗಾಂಧಿಗೆ ಸೋಲಿಲ್ಲ. ಗಾಂಧಿಯನ್ನು ಕುಗ್ಗಿಸಲೂ ಸಾಧ್ಯವಿಲ್ಲ. ಗಾಂಧಿ ಇಂದು ನಮಗೆ ಜಗತ್ತಿನ ಸೊತ್ತಾಗಿ ಉಳಿದುಕೊಂಡಿದ್ದಾರೆ ಎಂದು ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಚಿಂತಕ ಎಮ್. ದಿನೇಶ್ ಹೆಗ್ಡೆ ಹೇಳಿದರು.ಮಹಾತ್ಮ ಗಾಂಧಿ ಹುತಾತ್ಮ ದಿನದಂದು ಕುಂದಾಪುರದ ಸಮಾನಮನಸ್ಕ ಸಂಘಟನೆಗಳಿಂದ ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿ-66ರ ಬಳಿ ನಡೆದ ಮಾನವ ಸರಪಳಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗಾಂಧಿ ಮತ್ತು ಅಂಬೇಡ್ಕರ್ ಅವರಲ್ಲಿ ಒಂದು ರೀತಿಯ ಸಹಮತವಿದೆ. ಇಬ್ಬರೂ ಕೂಡ ನಮಗೆ ಶಾಂತಿ, ಸಹಬಾಳ್ವೆಯನ್ನು ಕೊಟ್ಟವರು. ಪಠ್ಯದಲ್ಲಿ, ದಿನನಿತ್ಯದ ಜೀವನದ ಪ್ರತಿಯೊಂದು ಹಂತದಲ್ಲಿ ಗಾಂಧಿಯನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಗಾಂಧೀಜಿ ಅವರು ಅಂಬೇಡ್ಕರ್ ಎದುರಿಗೆ ನಿಂತು ವಾದ ಮಾಡಿದ್ದಾರೆ. ಜೊತೆ ಜೊತೆಗೆ ಬಹುತೇಕ ವಿಚಾರಗಳಲ್ಲಿ ಅವರನ್ನು ಮೆಚ್ಚಿಕೊಂಡಿದ್ದಾರೆ ಎಂದರು. ಈ ಸಂದರ್ಭ ವಿವಿಧ ಸಂಘಟನೆಗಳ ಮುಖಂಡರಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಕೆ. ಶಂಕರ್, ಎಚ್. ನರಸಿಂಹ, ಸುರೇಶ್ ಕಲ್ಲಾಗರ, ಚಂದ್ರಶೇಖರ ದೇವಾಡಿಗ, ಉದಯ್ ಕುಮಾರ್ ತಲ್ಲೂರು, ರಾಮಕೃಷ್ಣ ಹೇರ್ಳೆ, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಉದಯ್ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ವಿನೋದ್ ಕ್ರಾಸ್ತಾ, ವಸಂತ ಬನ್ನಾಡಿ, ಸಯ್ಯದ್ ಯಾಸೀನ್ ಸಂತೋಷನಗರ, ಗಣೇಶ್ ಮೆಂಡನ್, ರವಿ ವಿ.ಎಂ, ಬಲ್ಕಿಸ್, ದೇವಕಿ ಸಣ್ಣಯ್ಯ, ಗಣೇಶ್ ಶೇರುಗಾರ್, ಪ್ರಭಾವತಿ ಶೆಟ್ಟಿ, ಆಶಾ ಕಾರ್ವೆಲ್ಲೊ, ಶೋಭಾ ಸಚ್ಚಿದಾನಂದ ಉಪಸ್ಥಿತರಿದ್ದರು. ತ್ರಾಸಿಯಿಂದ- ಕುಂಭಾಶಿ ತನಕ ನಡೆದ ಮಾನವ ಸರಪಳಿಯಲ್ಲಿ ತ್ರಾಸಿ, ಹೆಮ್ಮಾಡಿ, ತಲ್ಲೂರು, ಸಂಗಮ್, ಶಾಸ್ತ್ರೀ ಸರ್ಕಲ್, ಬಸ್ರೂರು ಮೂರುಕೈ, ಕೋಟೇಶ್ವರ ಮತ್ತು ಕುಂಭಾಸಿಯ ರಾಷ್ಟ್ರೀಯ ಹೆದ್ದಾರಿ -66 ಬಳಿ ಮಾನವ ಸರಪಳಿಯಲ್ಲಿ ಸಹಬಾಳ್ವೆ ಕುಂದಾಪುರ, ಸೌಹಾರ್ದ ಕರ್ನಾಟಕ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕುಂದಾಪುರ ತಾಲೂಕು ಘಟಕ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ), ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ, ಸಮುದಾಯ ಕುಂದಾಪುರ, ಕ್ಯಾಥೊಲಿಕ್ ಸಭಾ ಕುಂದಾಪುರ ವಲಯ, ಸಿಐಟಿಯು ಕುಂದಾಫುರ, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‍ಐ ಕುಂದಾಪುರ, ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಮುಸ್ಲಿಂ ಜಮಾತೆ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ದಲಿತ ಹಕ್ಕುಗಳ ಸಮಿತಿಯ ಸದಸ್ಯರು ಪಾಲ್ಗೊಂಡರು.