ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯ 34ನೇ ಘಟಿಕೋತ್ಸವವು ಮಾಹೆ ಬೆಂಗಳೂರು ಕ್ಯಾಂಪಸ್ನಲ್ಲಿ ಶನಿವಾರ ನಡೆಯಿತು. ಮೊದಲ ದಿನದಂದು 18 ಪಿಎಚ್ಡಿ ಸೇರಿದಂತೆ ಒಟ್ಟು 1,082 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಬೆಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯ 34ನೇ ಘಟಿಕೋತ್ಸವವು ಮಾಹೆ ಬೆಂಗಳೂರು ಕ್ಯಾಂಪಸ್ನಲ್ಲಿ ಶನಿವಾರ ನಡೆಯಿತು. ಮೊದಲ ದಿನದಂದು 18 ಪಿಎಚ್ಡಿ ಸೇರಿದಂತೆ ಒಟ್ಟು 1,082 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮಾಹೆ ಕುಲಪತಿ ಶರತ್ ಕೆ ಕುಮಾರ್ ಅವರು ಘಟಿಕೋತ್ಸವಕ್ಕೆ ಔಪಚಾರಿಕವಾಗಿ ಚಾಲನೆ ನೀಡಿದರು. ಮಾಹೆ ಬೆಂಗಳೂರು ಕ್ಯಾಂಪಸ್ನ ಸಹ ಕುಲಪತಿ ಡಾ. ಮಧು ವೀರರಾಘವನ್ ಅವರು ಸ್ವಾಗತಿಸಿದರು. ಘಟಿಕೋತ್ಸವ ಭಾಷಣ ಮಾಡಿದ ಸಿಸ್ಕೊ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ತ್ರಿದೀಪ್ ರಾಯ್ ಅವರು, ಕೃತಕ ಬುದ್ಧಿಮತ್ತೆ (ಎಐ) ಉದ್ಯೋಗ ಕ್ಷೇತ್ರವನ್ನೇ ಬದಲಿಸುತ್ತಿರುವ ಈ ಕಾಲದಲ್ಲಿ ಮಾನವನ ವಿವೇಚನೆ, ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲ್ಯತೆಗೆ ಹಿಂದಿಗಿಂತಲೂ ಹೆಚ್ಚು ಮಹತ್ವ ಸಿಗಲಿದೆ. ಪದವಿಧರರು ತಮ್ಮ ಜ್ಞಾನ ಮತ್ತು ಕೌಶಲವನ್ನು ವೈಯಕ್ತಿಕ ಯಶಸ್ಸಿಗೆ ಮಾತ್ರ ಬಳಸದೆ, ಜನರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರ ಜೀವನವನ್ನು ಉತ್ತಮಗೊಳಿಸಲು ಬಳಸಬೇಕು ಎಂದು ಕಿವಿಮಾತು ಹೇಳಿದರು.
ಮಾಹೆಯ ಸಾಧನೆಗಳು ಮತ್ತು ಯೋಜನೆಗಳನ್ನು ವಿವರಿಸಿದ ಕುಲಪತಿ ಡಾ. ಶರತ್ ಕೆ. ರಾವ್, ಎಐ ಯುಗದಲ್ಲಿ ವಿವಿಗಳು ಕೇವಲ ತಂತ್ರಜ್ಞಾನ ಬಳಸುವವರನ್ನಷ್ಟೇ ಅಲ್ಲದೆ, ಅದನ್ನೂ ಮೀರಿ ಯೋಚಿಸುವ ಪದವೀಧರರನ್ನು ಸಜ್ಜುಗೊಳಿಸಬೇಕಿದೆ. ಅದಕ್ಕಾಗಿ ಬೆಂಗಳೂರು ಕ್ಯಾಂಪಸ್ನ 25-ಕ್ಯೂಬಿಟ್ ಕ್ವಾಂಟಮ್ ಹಬ್ ಹಾಗೂ ಮಣಿಪಾಲದ ಬಯೋಸೇಫ್ಟಿ ಲೆವೆಲ್-3 ಪ್ರಯೋಗಾಲಯಗಳೆರಡನ್ನೂ ಹೊಂದಿರುವ ಭಾರತದ ಏಕೈಕ ಖಾಸಗಿ ವಿವಿ ಎಂಬ ಹೆಗ್ಗಳಿಕೆ ಮಾಹೆಗಿದೆ ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳಾದ ಬ್ಯಾಚುಲರ್ ಆಫ್ ಡಿಸೈನ್ನ ಆರ್ಯ ಅತುಲ್ ಗೋಹದ್ ಹಾಗೂ ಬಿಬಿಎ (ಆನರ್ಸ್)ನ ಆರುಷಿ ರಾಜೋರಾ ಅವರಿಗೆ ಡಾ. ಟಿ.ಎಂ.ಎ. ಪೈ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.