ಸಾರಾಂಶ
ಧಾರವಾಡ:
ಪ್ರಸ್ತುತ ನಾವೆಲ್ಲ ಭ್ರಮೆಯಲ್ಲಿಯೇ ಜೀವನ ನಡೆಸುತ್ತಿದ್ದೇವೆ. ಅದರಲ್ಲೂ ವಿದ್ಯಾವಂತರಿಗೆ ಮಿತಿಮೀರಿದ ಭ್ರಮೆ ಇದೆ. ಭ್ರಮಾಲೋಕದಲ್ಲಿ ನಮ್ಮ ಜನಾಂಗ ತೇಲಾಡುತ್ತಿದೆ. ಕಾಣುವ ಮನುಷ್ಯರನ್ನು ಪ್ರೀತಿ ಮಾಡಲಾಗದ ವ್ಯಕ್ತಿ ಕಾಣದೇ ಇರುವ ದೇವರನ್ನು ಹೇಗೆ ಪ್ರೀತಿ ಮಾಡುತ್ತಾನೆ? ದೇವರೆಂಬ ಭ್ರಮೆಯಲ್ಲಿ ಮನುಷ್ಯರನ್ನು ಪ್ರೀತಿ ಮಾಡುವುದನ್ನೇ ಬಿಟ್ಟಿದ್ದೇವೆ ಎಂದು ತೋಂಟದ ನಿಜಗುಣಪ್ರಭು ಸ್ವಾಮೀಜಿ ವಿಷಾದಿಸಿದ್ದಾರೆ.ಸಂತೋಷ ಲಾಡ್ ಫೌಂಡೇಶನ್ ಹಾಗೂ ಶರ್ವಿಲ್ ಪ್ರಕಾಶನ ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕರಣ್ ಲಾಡ್ ಅವರ ಗ್ಲಿಚ್ ಇನ್ ದ ಸಿಮುಲೇಶನ್ ಇಂಗ್ಲಿಷ್ ಕೃತಿಯ ಕನ್ನಡ ಅನುವಾದ ಪ್ರತ್ಯನುಕರಣೆಯ ನ್ಯೂನತೆಗಳು ಕೃತಿ ಬಿಡುಗೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
12ನೇ ಶತಮಾನದ ಶರಣರನ್ನು ಯಾವಾಗ ನಾವು ಅರ್ಥೈಸಿಕೊಳ್ಳುವುದಿಲ್ಲವೋ ಅಲ್ಲಿಯ ವರೆಗೆ ಜೀವನದ ಸ್ಪಷ್ಟತೆ ಅರ್ಥವಾಗುವುದಿಲ್ಲ. ತನ್ನ ಬದುಕಿಗೆ ಏನು ಬೇಕು ಎಂದು ಅರ್ಥೈಸಿಕೊಳ್ಳುವುದೇ ತತ್ವಜ್ಞಾನ. ಬದುಕು ಕಟ್ಟಿಕೊಳ್ಳಲು ಬೇಕಾದ ವಿಚಾರಧಾರೆಗಳಿಗೆ ಕೊರತೆ ಇಲ್ಲ ಎಂದರು.ಪ್ರತ್ಯನುಕರಣೆ ನ್ಯೂನತೆಗಳು ಕೃತಿ ಬಗ್ಗೆ ಪ್ರಸ್ತಾಪಿಸಿ, ಕರಣ್ ಲಾಡ್ ತನ್ನ 17ನೇ ವಯಸ್ಸಿನಲ್ಲಿ ತತ್ವಜ್ಞಾನ ಕುರಿತು ಪುಸ್ತಕ ಬರೆದಿದ್ದು, ಅರಿವಿಗೆ ಹಿರಿಯ-ಕಿರಿಯ ಎನ್ನುವುದಿಲ್ಲ ಎಂಬುದಕ್ಕೆ ಸಾಕ್ಷಿ. ಆತ ಬರೆದ ಕೃತಿ ನಮ್ಮನ್ನು ಚಿಂತನೆಗೆ ಹಚ್ಚಿದ್ದು, ಪ್ರತ್ಯನುಕರಣೆಯ ನ್ಯೂನತೆಗಳು ಜ್ಞಾನದ ಪ್ರಭೆಯಾಗಿ ಹೊರ ಹೊಮ್ಮಿದೆ ಎಂದು ಶ್ಲೇಷಿಸಿದರು.
ಕರಣ್ ಲಾಡ್ ಶ್ರೀಮಂತಿಕೆಯ ಜೀವನ ನಡೆಸುತ್ತಿದ್ದರೂ ನೈಜ ಬದುಕಿನ ಅರಿವು ಆತನಿಗೆ ಆಗಿದೆ. ಆತನಲ್ಲಿರುವ ಸುಪ್ತ ಶಕ್ತಿ ಕೃತಿಯಾಗಿ ಹೊರಹೊಮ್ಮಿದೆ. ಆತ ಮತ್ತಷ್ಟು ಓದಿನ ಮೂಲಕ ಇನ್ನಷ್ಟು ಕೃತಿಗಳನ್ನು ರಚಿಸಲಿ ಎಂದು ಆಶಿಸಿದರು.ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಜೀವನದಲ್ಲಿ ನಾವು ಏನು ಮಾಡಲು ಸಾಧ್ಯ ಆಗೋದಿಲ್ಲವೋ ಆ ಕೆಲಸವನ್ನು ಮಕ್ಕಳ ಮೂಲಕ ಮಾಡಿಸಲು ಪಾಲಕರು ಪ್ರಯತ್ನಿಸುತ್ತಾರೆ. ಅದರ ಬದಲು ಮಕ್ಕಳ ಆಸಕ್ತಿಗೆ ತಕ್ಕಂತೆ ಅವರ ಭವಿಷ್ಯ ರೂಪಿಸಲು ಪ್ರಯತ್ನಿಸಬೇಕು. ಸಚಿವ ಸಂತೋಷ ಲಾಡ್ ಹಾಗೂ ಅವರ ಪತ್ನಿ ಪ್ರೋತ್ಸಾಹಿಸಿದ ಕಾರಣದಿಂದ ಕರಣ್ ಚಿಕ್ಕ ವಯಸ್ಸಿನಲ್ಲಿ ಕೃತಿ ರಚಿಸಿದ್ದಾನೆ. ಅದೇ ರೀತಿ ವಿದ್ಯಾರ್ಥಿಗಳು ಹೆಚ್ಚು ಓದು-ಬರಹದ ಅಭ್ಯಾಸ ರೂಢಿಸಿಕೊಳ್ಳಬೇಕು. ಪುಸ್ತಕಗಳು ತಮ್ಮ ಜೀವನದ ಗತಿಯನ್ನೇ ಬದಲಿಸುವ ಶಕ್ತಿ ಹೊಂದಿವೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ, ಸಾಮಾನ್ಯವಾಗಿ ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆಗಲು ಬಯಸುತ್ತಾರೆ. ಆದರೆ, ಕರಣ್ ಬರಹಗಾರ, ತತ್ವಜ್ಞಾನಿ ಆಗಲು ಬಯಸಿದ್ದು ವಿಶೇಷ. ತತ್ವಜ್ಞಾನದ ಬಗ್ಗೆ ಕರಣ್ 37 ಪುಟಗಳಲ್ಲಿ ಏಳು ಅಧ್ಯಾಯಗಳಲ್ಲಿ ಕೃತಿ ರಚಿಸಿದ್ದಾನೆ. ಇದಕ್ಕೆ ಪೂರಕವಾಗಿ ಆತನ ವಿಚಾರಗಳಿಗೆ ಹೊಸ ದಿಕ್ಕು ತೋರಿಸಲು ವಚನಗಳನ್ನು ಓದುವುದು ಸೂಕ್ತವೆಂದು ಹೇಳಿದರು.ಕೃತಿ ಕುರಿತು ಕವಿವಿ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಪಿ. ರಮೇಶ ಮಾತನಾಡಿದರು. ಅನುವಾದಕ ಡಾ. ವಿನಾಯಕ ನಾಯಕ, ಡಾ. ಲೋಹಿತ ನಾಯ್ಕರ, ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಬಾಳಣ್ಣ ಶೀಗಿಹಳ್ಳಿ, ಪ್ರಾಚಾರ್ಯ ಶಶಿಧರ ತೋಡ್ಕರ, ಶರ್ವಿಲ್ ಪ್ರಕಾಶನದ ಸಮೀರ ಜೋಶಿ ಇದ್ದರು. ಅಧ್ಯಕ್ಷತೆ ವಹಿಸಿ ಸಚಿವ ಸಂತೋಷ ಲಾಡ್ ಪುತ್ರ ಕೃತಿ ರಚಿಸಿದ ಸಂದರ್ಭಗಳನ್ನು ವಿವರಿಸಿದರು. ಮಾತನಾಡಿದರೆ ಧರ್ಮ ವಿರೋಧ ಪಟ್ಟ
ಮುಕ್ತವಾಗಿ ಮಾತನಾಡಬೇಕು ಎನ್ನುವ ನಮ್ಮಂತಹ ಸ್ವಾಮೀಜಿಗಳು ಸ್ವತಂತ್ರ್ಯ ಕಳೆದುಕೊಂಡಿದ್ದೇವೆ. ಯಾವುದೇ ವಿಚಾರಗಳ ಬಗ್ಗೆ ಮಾತನಾಡಿದರೆ ಧರ್ಮ ವಿರೋಧಿ ಪಟ್ಟ ಕಟ್ಟುತ್ತಾರೆ. ಕೊಂದೇ ಬಿಡುತ್ತೇವೆಂದು ಭಯಪಡಿಸುತ್ತಾರೆ. ಹೀಗಾಗಿ ನಮ್ಮತನಕ್ಕೆ ನಾವೇ ಕೊಡಲಿ ಪೆಟ್ಟು ಹಾಕಿಕೊಂಡಿದ್ದೇವೆ. ಆದರೂ ನಾನು ಎಲ್ಲವನ್ನೂ ಹೇಳಿ ಬಿಡಬೇಕು ಎಂದುಕೊಂಡಿದ್ದೇನೆ. ಕೆಟ್ಟದ್ದು, ಒಳ್ಳೆಯದು ಎಲ್ಲ ಹೇಳಲು ತೀರ್ಮಾನಿಸಿದ್ದೇನೆ. ಈಗಂತೂ ನನಗೆ 60 ವರ್ಷಗಳಾಯ್ತು. ಇನ್ಮುಂದೆ ಎಲ್ಲವನ್ನೂ ಹೇಳಿಕೊಳ್ಳುವೆ. ಸಂಪ್ರದಾಯಕ್ಕಾಗಿ ಊಟ ಬಿಟ್ಟು ಸತ್ತವರು ಬಹಳ ಜನ ಇದ್ದಾರೆ. ಆದರೆ, ಸಂಪ್ರದಾಯಕ್ಕಾಗಿ ತಪ್ಪು ಬಿಟ್ಟವರು ಯಾರೂ ಇಲ್ಲ ಎಂದು ತೋಂಟದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.