ಸಾರಾಂಶ
ಕೂಡ್ಲಿಗಿ ಶ್ರೀ ಊರಮ್ಮ ವೈಭವ ಧ್ವನಿಸುರುಳಿ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ ಕೂಡ್ಲಿಗಿಧಾರ್ಮಿಕ ಕಾರ್ಯಗಳಿಂದ ಮನುಷ್ಯ ಸಂಬಂಧಗಳು ಗಟ್ಟಿಯಾಗುತ್ತಿದ್ದು, ಪರಸ್ಪರ ಅರಿತು ಬಾಳುವ, ದಿನನಿತ್ಯದ ಜಂಜಡ, ನೋವುಗಳನ್ನು ಮರೆತು ತನ್ನ ಎಲ್ಲಾ ಸಂಬಂಧಿಕರೊಂದಿಗೆ ನಲಿಯಲು, ನೋವು-ನಲಿವು ಹಂಚಿಕೊಳ್ಳಲು ಹಬ್ಬ, ಜಾತ್ರೆಗಳನ್ನು ನಮ್ಮ ಪೂರ್ವಜರು ಮಾಡಿಕೊಂಡು ಬಂದಿದ್ದಾರೆ ಎಂದು ಬಳ್ಳಾರಿ ಸಂಸದ ಈ.ತುಕಾರಾಂ ತಿಳಿಸಿದರು.
ಕೂಡ್ಲಿಗಿ ಪಟ್ಟಣದ ಶ್ರೀ ಊರಮ್ಮದೇವಿಯ ದೇವಾಲಯದಲ್ಲಿ ಬುಧವಾರ ಲೇಖಕ ಭೀಮಣ್ಣ ಗಜಾಪುರ ರಚಿಸಿದ ಕೂಡ್ಲಿಗಿ ಶ್ರೀ ಊರಮ್ಮ ವೈಭವ ಭಕ್ತಿಗೀತೆಗಳ ಧ್ವನಿಸುರುಳಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹಬ್ಬಹರಿದಿನಗಳು ಬಂದಾಗ ಎಲ್ಲಾ ಸಂಬಂಧಿಕರು ಊರಿಗೆ ಬರುತ್ತಾರೆ, ಎಷ್ಟೋ ವರ್ಷಗಳ ನಂತರ ರಕ್ತಸಂಬಂಧಗಳು ಕೂಡಿಕೊಳ್ಳುತ್ತವೆ. ಆ ಕ್ಷಣ ಅವಿಸ್ಮರಣೀಯ, ಅದಕ್ಕೆ ಬೆಲೆಕಟ್ಟಲಾಗದು. ಹೀಗಾಗಿ ಎಲ್ಲರೂ ಸೇರಿ ಸೌಹಾರ್ದಯುತವಾಗಿ ಒಬ್ಬರಿಗೊಬ್ಬರು ಅರ್ಥೈಸಿಕೊಂಡು ಸಹಾಯ ಮಾಡುವ ಗುಣಗಳನ್ನು ನೋಡುವುದೇ ಇಂದಿನ ದಿನಗಳಲ್ಲಿ ಸೋಜಿಗ ಮೂಡಿಸುತ್ತದೆ. ಮಹಾನಗರಗಳಲ್ಲಿ ಸಂಬಂಧಗಳೇ ಕಳಚುತ್ತಿರುವ ಇಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಇನ್ನೂ ನಮ್ಮ ಪೂರ್ವಜರ ಆಚರಣೆಗಳನ್ನು ಮಾಡುವುದರ ಮೂಲಕ ಸಂಬಂಧ ಉಳಿಸಿಕೊಳ್ಳುವಂತ ಮಹತ್ತರ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, ಹಳ್ಳಿಗಳಲ್ಲಿ ಊರದೇವರ ಜಾತ್ರೆಗಳು ನಡೆಯುವುದು ಸಾಮಾನ್ಯ ಆದರೆ ಕೂಡ್ಲಿಗಿಯಂತಹ ಪಟ್ಟಣದಲ್ಲಿ ಶ್ರೀ ಊರಮ್ಮನ ಹಬ್ಬ ಮಾಡುವುದು ಅಷ್ಟು ಸುಲಭವಲ್ಲ. ಇಲ್ಲಿಯ ಮುಖಂಡರು, ಆಯಾಗಾರರು, ಗ್ರಾಮಸ್ಥರು ಸೇರಿ 15 ವರ್ಷಗಳ ನಂತರ ಊರಮ್ಮನ ಜಾತ್ರೆ ಮಾಡಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿದೆ. ಕೂಡ್ಲಿಗಿಯಲ್ಲಿ ಶ್ರೀ ಊರಮ್ಮಗೆ ₹3 ಕೋಟಿ ವೆಚ್ಚದಲ್ಲಿ ಇಲ್ಲಿಯ ಗ್ರಾಮಸ್ಥರು ಸುಂದರ ದೇವಾಲಯ ನಿರ್ಮಿಸುವ ಮೂಲಕ ಕೂಡ್ಲಿಗಿಗೆ ಕಳೆ ತಂದಿದ್ದರು. ಈಗ ಜಾತ್ರೆ ಮಾಡುವುದರ ಮೂಲಕ ಕೂಡ್ಲಿಗಿಯಲ್ಲಿ ಭಕ್ತಿಯ ಪರಾಕಷ್ಠೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದರು.
ಈ ಸಂದರ್ಭ ಕೂಡ್ಲಿಗಿ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಹಿ.ಮ. ಚಿದಾನಂದಸ್ವಾಮಿ, ಕೆ.ಎಚ್. ವೀರಗೌಡ್ರು, ಬಣಕಾರ ಮಂಜುನಾಥ, ಕೂಡ್ಲಿಗಿಯ ಲೋಕನಗೌಡ್ರು, ಕಾಂಗ್ರೆಸ್ ಯುವ ಮುಖಂಡ ಬಣವಿಕಲ್ಲು ಯರ್ರಿಸ್ವಾಮಿ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ರಾಜ್ಯ ಕಾಂಗ್ರೆಸ್ ಮಹಿಳಾ ಮುಖಂಡರಾದ ಜಿಂಕಲ್ ನಾಗಮಣಿ, ಕೂಡ್ಲಿಗಿ ತಾಲೂಕು ವಾಲ್ಮೀಕಿ ಮಹಾಸಭಾದ ಅಧ್ಯಕ್ಷರಾದ ಸುರೇಶ್ ವಿಕ್ಟರಿ, ಬಿ.ನಾಗರಾಜ, ಗುತ್ತಿಗೆದಾರರಾದ ಮಲ್ಲಿಕಾರ್ಜುನಗೌಡ್ರು, ಕೆ.ಎಚ್. ಸಂದೀಪ್ ಗೌಡ, ಟಿ.ಜಿ. ಮಲ್ಲಿಕಾರ್ಜುನಗೌಡ, ಕಂಪ್ಯೂಟರ್ ರಾಘವೇಂದ್ರ ಮುಂತಾದವರಿದ್ದರು.