ರಾಜಕೀಯದಿಂದ ಹಳ್ಳಿಗಳಲ್ಲಿ ಮಾನವ ಸಂಬಂಧಗಳು ಹಾಳಾಗುವುದು ಬೇಡ: ಕೇಂದ್ರ ಸಚಿವ ಎಚ್ಡಿಕೆ ಮನವಿ

| Published : Feb 10 2025, 01:47 AM IST

ರಾಜಕೀಯದಿಂದ ಹಳ್ಳಿಗಳಲ್ಲಿ ಮಾನವ ಸಂಬಂಧಗಳು ಹಾಳಾಗುವುದು ಬೇಡ: ಕೇಂದ್ರ ಸಚಿವ ಎಚ್ಡಿಕೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಮಾನವ ಸಂಬಂಧಗಳು, ರಕ್ತ ಸಂಬಂಧಗಳು ಹಳ್ಳಿಗಳಲ್ಲಿ ಗಾಢವಾಗಿದ್ದವು. ನೆರೆಹೊರೆಯವರು ಚೆನ್ನಾಗಿರಬೇಕು ಎಂಬ ಭಾವನೆ ಎಲ್ಲರಲ್ಲಿಯೂ ಇತ್ತು. ಈ ರಾಜಕೀಯ ಕಾರಣದಿಂದ ಗ್ರಾಮಗಳು ನೆಮ್ಮದಿಯಾಗಿದ್ದವು. ಈಗ ಆ ನೆಮ್ಮದಿ ಸಂತೋಷ ದೂರವಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜಕೀಯ ಕಾರಣಗಳಿಂದ ಹಳ್ಳಿಗಳಲ್ಲಿ ಮಾನವ ಸಂಬಂಧಗಳು, ರಕ್ತ ಸಂಬಂಧಗಳು ಹಾಳಾಗುವುದು ಬೇಡ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಕಳಕಳಿಯ ಮನವಿ ಮಾಡಿದರು.

ತಾಲೂಕಿನ ಚಿಕ್ಕವೀರಕೊಪ್ಪಲು ಗ್ರಾಮದಲ್ಲಿ ಊರಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಈ ಹಿಂದೆ ಮಾನವ ಸಂಬಂಧಗಳು, ರಕ್ತ ಸಂಬಂಧಗಳು ಹಳ್ಳಿಗಳಲ್ಲಿ ಗಾಢವಾಗಿದ್ದವು. ನೆರೆಹೊರೆಯವರು ಚೆನ್ನಾಗಿರಬೇಕು ಎಂಬ ಭಾವನೆ ಎಲ್ಲರಲ್ಲಿಯೂ ಇತ್ತು. ಈ ಕಾರಣದಿಂದ ಗ್ರಾಮಗಳು ನೆಮ್ಮದಿಯಾಗಿದ್ದವು. ಈಗ ಆ ನೆಮ್ಮದಿ ಸಂತೋಷ ದೂರವಾಗಿದೆ ಎಂದು ವಿಷಾದಿಸಿದರು.

ಹಳ್ಳಿಗಳು ಈ ಹಿಂದೆ ನೆಮ್ಮದಿಯ ತಾಣಗಳು ಆಗಿದ್ದವು. ಯಾರದೇ ಮನೆಯಲ್ಲಿ ಶುಭ ಕಾರ್ಯಗಳು ನಡೆದರೂ ಇಡೀ ಊರಿಗೆ ಊರೇ ಸೇರುತ್ತಿತ್ತು. ಪಂಕ್ತಿ ಭೋಜನ ಇರುತ್ತಿತ್ತು. ಅಜ್ಜ, ಅಜ್ಜಿ, ತಂದೆ- ತಾಯಿ ಜತೆ ಅಂತಹ ಶುಭ ಕಾರ್ಯಗಳಲ್ಲಿ ಪಾಲ್ಗೊಂಡ ನೆನಪು ನನಗಿನ್ನೂ ಹಚ್ಚ ಹಸಿರಾಗಿದೆ. ಹಾಗೆಯೇ ಯಾರಿಗೆ ಕಷ್ಟ ಬಂದರೂ ಇಡೀ ಊರೇ ಮಿಡಿಯುತ್ತಿತ್ತು. ಅಂತಹ ವಾತಾವರಣದಿಂದ ನಾವು ವಂಚಿತರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಹಳ್ಳಿ ಹಬ್ಬಗಳು, ಜಾತ್ರೆಗಳು ಜನರನ್ನು ಒಂದು ಮಾಡುತ್ತವೆ. ಸಾಮರಸ್ಯ ಮೂಡಿಸುತ್ತಿವೆ. ನಿಮ್ಮಲ್ಲಿ ರಾಜಕೀಯ ಇರಲಿ, ಅದು ಚುಣಾವಣೆಗೆ ಸೀಮಿತವಾಗಿರಲಿ. ನಂತರ ದಿನಗಳಲ್ಲಿ ಎಲ್ಲರೂ ಒಂದಾಗಿ ಬಾಳುವಂತೆ ಮನವಿ ಮಾಡಿದರು.

ಈ ವೇಳೆ ಮಾಜಿ ಶಾಸಕ ಸುರೇಶ್ ಗೌಡ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು. ಇದೇ ವೇಳೆ ಗ್ರಾಮಸ್ಥರು ಸಚಿವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಇದಕ್ಕೂ ಮೊದಲು ಸಚಿವರು ಬೆಟ್ಟದಮಲ್ಲೇನಹಳ್ಳಿ ಗ್ರಾಮದ ಶ್ರೀಆದಿಶಕ್ತಿ ಹುಚ್ಚಮ್ಮದೇವಿ ದೇವಸ್ಥಾನಕ್ಕೆ ತೆರಳಿ ಅಮ್ಮನವರ ದರ್ಶನ ಪಡೆದರು.