ಉಚಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ವಸಂತಕುಮಾರ್ ಹೇಳಿಕೆ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾತಂತ್ರ್ಯ ಮತ್ತು ಸಮಾನತೆಯಿಂದ ಬದುಕಲು ಸಂವಿಧಾನದ ಹಕ್ಕುಗಳು ಪೂರಕವಾಗಿವೆ. ಸಾರ್ವಜನಿಕರು ಸಂವಿಧಾನದ ಮಹತ್ವ ಮತ್ತು ಹಕ್ಕುಗಳನ್ನು ಅರಿತುಕೊಂಡು ಬಾಳಬೇಕೆಂದು ವಕೀಲರ ಸಂಘದ ಅಧ್ಯಕ್ಷ ಪಿ.ಜಿ.ವಸಂತಕುಮಾರ್ ಹೇಳಿದ್ದಾರೆ.ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಮೊಳಕಾಲ್ಮೂರು ಇವರ ಸಹಯೋಗದೊಂದಿಗೆ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಪ್ರತಿ ನಾಗರಿಕರಿಗೂ ಸಂವಿಧಾನ ಸಾಮಾಜಿಕ ನ್ಯಾಯ ನೀಡಿದೆ. ಸ್ವತಂತ್ರ ಮತ್ತು ಸ್ವಾಭಿಮಾನದಿಂದ ಬದುಕಲು ಹಕ್ಕು ನೀಡಿದೆ. ಗೌರವಕ್ಕೆ ಚ್ಯುತಿ ಬಾರದಂತೆ ರಕ್ಷಣೆಗಾಗಿ 1993ರಲ್ಲಿ ಮಾನವ ಹಕ್ಕುಗಳ ರಚನೆ ಮಾಡಲಾಗಿದೆ. ರಾಜ್ಯದಲ್ಲಿಯೂ ಮಾನವ ಹಕ್ಕುಗಳ ಆಯೋಗ ಇದೆ. ಮಾನವನು ಸ್ವತಂತ್ರವಾಗಿ ಜೀವಿಸುವ, ಓಡಾಡುವ, ಶೈಕ್ಷಣಿಕ ಹಕ್ಕುಗಳನ್ನು ಕಲ್ಪಿಸಲಾಗಿದೆ. ಹಕ್ಕುಗಳಿಗೆ ಯಾವುದೇ ರೀತಿಯ ತೊಂದರೆಯಾದಲ್ಲಿ ನ್ಯಾಯಾಲಯದಲ್ಲಿದೂರು ದಾಖಲಿಸಿ ಸಮಸ್ಯೆಪರಿಹರಿಸಿಕೊಳ್ಳಬಹುದು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣವು ಅತಿ ಮುಖ್ಯವಾಗಿದ್ದು, ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ನೀಡುವ ಶಿಕ್ಷಣವನ್ನು ಪಡೆದು ಉತ್ತೀರ್ಣರಾಗಿ ತಂದೆ, ತಾಯಿ, ಶಾಲೆಗೆ ಕೀರ್ತಿ ತರಬೇಕು ಎಂದರು.
ಈ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕ ಮೊಹಮ್ಮದ್ ಶಂಶೀರ್ ಆಲಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಂವಿಧಾನದಡಿಯ ಮೂಲಭೂತ ಹಕ್ಕುಗಳು ಅತ್ಯವಶ್ಯವಾಗಿವೆ. ಸಂವಿಧಾನದಲ್ಲಿ ನೀಡಿರುವ ಮೂಲಭೂತ ಹಕ್ಕುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎ.ಕೆ.ತಿಮ್ಮಪ್ಪ, ಖಜಾಂಚಿ ವಿ.ಡಿ.ರಾಘವೇಂದ್ರ, ವಕೀಲರಾದ ವಿನೋದ, ರಾಮಾಂಜಿನೇಯ, ಮಂಜುನಾಥ, ನ್ಯಾಯಾಲಯದ ಸಿಬ್ಬಂದಿ ಮೋನಿಕಾ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜೋಯೀಸ್, ಶಿಕ್ಷಕರಾದ ಜಗಲೂರು ಪಾಪಯ್ಯ, ಪುರುಷೋತ್ತಮ ರೆಡ್ಡಿ, ಒ.ಟಿ.ನಾಗರಾಜ್, ಜಿ.ಟಿ.ಗುರುಸ್ವಾಮಿ ಇದ್ದರು.