ಮಾನವ- ವನ್ಯಜೀವಿಗಳ ಸಂಘರ್ಷ: ಕಾಡಾನೆ ದಾಳಿಗೆ 5 ವರ್ಷದಲ್ಲಿ 13 ಜನ ಸಾವು

| Published : Mar 02 2024, 01:48 AM IST

ಸಾರಾಂಶ

ಮಾನವ- ವನ್ಯಜೀವಿ ಸಂಘರ್ಷಕ್ಕೆ ಆರಂಭ- ಅಂತ್ಯ ಎಂಬುದೇ ಇಲ್ಲ. ಇವರುಗಳು ಒಂದೇ ಕಡೆ ಸಾಮಾನ್ಯರಂತೆ ಬದುಕಲು ಸಾಧ್ಯವೇ ಇಲ್ಲ. ಈ ಕಾರಣಕ್ಕಾಗಿ ಪರಸ್ಪರ ಮನಸ್ಥಿತಿಗಳು ಬೇರೆ ಬೇರೆ. ಹಾಗಾಗಿ ಸಂಘರ್ಷಗಳು ನಿರಂತರವಾಗಿ ನಡೆಯುತ್ತಲೇ ಇದೆ.

- ಇದೇ ಅವಧಿಯಲ್ಲಿ 9 ಆನೆಗಳು ಸಾವು, ವಯೋ ಸಹಜಕ್ಕಿಂತ ವಿದ್ಯುತ್‌ ತಂತಿ ತುಳಿದು ಮೃತಪಟ್ಟ ಕಾಡಾನೆಗಳ ಸಂಖ್ಯೆ ಹೆಚ್ಚು, ಈವರೆಗೆ 1.12 ಕೋಟಿ ರು. ಪರಿಹಾರ ವಿತರಣೆ

ಆರ್‌. ತಾರಾನಾಥ್‌ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಾನವ- ವನ್ಯಜೀವಿ ಸಂಘರ್ಷಕ್ಕೆ ಆರಂಭ- ಅಂತ್ಯ ಎಂಬುದೇ ಇಲ್ಲ. ಇವರುಗಳು ಒಂದೇ ಕಡೆ ಸಾಮಾನ್ಯರಂತೆ ಬದುಕಲು ಸಾಧ್ಯವೇ ಇಲ್ಲ. ಈ ಕಾರಣಕ್ಕಾಗಿ ಪರಸ್ಪರ ಮನಸ್ಥಿತಿಗಳು ಬೇರೆ ಬೇರೆ. ಹಾಗಾಗಿ ಸಂಘರ್ಷಗಳು ನಿರಂತರವಾಗಿ ನಡೆಯುತ್ತಲೇ ಇದೆ.ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ 7,22,075 ಹೆಕ್ಟೇರ್‌. ಇದರಲ್ಲಿ ಅರಣ್ಯದ ವಿಸ್ತೀರ್ಣ 2,00,485 ಹೆಕ್ಟೇರ್‌. ಅದ್ದರಿಂದ ಭದ್ರಾ ವನ್ಯ ಜೀವಿ ವ್ಯಾಪ್ತಿಯೊಳಗೆ ಚಿಕ್ಕಮಗಳೂರು ಜಿಲ್ಲೆಯೂ ಕೂಡ ಸೇರಿಕೊಂಡಿದೆ. ಕಾಡಿರುವ ಕಡೆ ಕಾಡು ಪ್ರಾಣಿ ಗಳು ಇರುವುದು ಸಹಜ. ಆದರೆ, ಆಗಾಗ ಕಾಡು ಪ್ರಾಣಿಗಳು ಮತ್ತು ಮನುಷ್ಯನ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಜಿಲ್ಲೆಯಲ್ಲಿ ಸುಮಾರು 450ಕ್ಕೂ ಹೆಚ್ಚು ಕಾಡಾನೆಗಳು ಇವೆ. ಇವುಗಳ ಜತೆಗೆ ಸುಮಾರು 100ಕ್ಕೂ ಹೆಚ್ಚು ಆನೆಗಳು ಜಿಲ್ಲೆಯಾದ್ಯಂತ ನಿರಂತರವಾಗಿ ಸಂಚರಿಸುತ್ತಿವೆ. ಕಾಫಿಯ ನಾಡಿನಲ್ಲಿ ಕಾಡು ಪ್ರಾಣಿಗಳಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಅತಿ ಹೆಚ್ಚು ಮಂದಿ ಮರಣ ಹೊಂದಿರುವುದು ಕಾಡಾನೆಗಳ ತುಳಿತದಿಂದ.ಕಳೆದ ಐದು ವರ್ಷಗಳ ಅಂಕಿಅಂಶ ನೋಡಿದರೆ ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಸಂಖ್ಯೆ 14. ಇದರಲ್ಲಿ ಕಾಡು ಹಂದಿ ದಾಳಿಯಿಂದ ಮೃತಪಟ್ಟವರು ಓರ್ವರು ಮಾತ್ರ. ಇನ್ನುಳಿದ 13 ಮಂದಿ ಮೃತಪಟ್ಟಿದ್ದು ಕಾಡಾನೆಗಳ ದಾಳಿಯಿಂದ. ಅಂದರೆ, ಇಲ್ಲಿ ಆನೆಗಳು ಹಾಗಾಗ ಮನುಷ್ಯನ ಮೇಲೆ ದಾಳಿ ನಡೆಸುತ್ತಲೇ ಇವೆ. ಇದಕ್ಕೆ ಮೇಲ್ಪಟಕ್ಕೆ ಕಂಡು ಬರುವ ಕಾರಣ, ವಲಸೆ ಬರುತ್ತಿರುವ ಆನೆಗಳ ದಾಳಿಗಳೇ ಹೆಚ್ಚು.ಪ್ರಾಣ ಹಾನಿ: ಕಳೆದ ಐದು ವರ್ಷಗಳಲ್ಲಿ ಕಾಡಾನೆಗಳ ದಾಳಿಯಿಂದ 13 ಮಂದಿ ಮೃತಪಟ್ಟಿದ್ದಾರೆ. 2018ರಲ್ಲಿ ಒಂದು ಪ್ರಕರಣ ಮಾತ್ರ ನಡೆದಿದ್ದರೆ, 2019ರಲ್ಲಿ 4 ಮಂದಿ ಮೃತಪಟ್ಟಿದ್ದರೆ, 2020ರಲ್ಲಿ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ನಡೆದಿರಲಿಲ್ಲ. 2021ರಲ್ಲಿ ಒಂದು ಪ್ರಕರಣ ನಡೆದಿದ್ದರೆ, 2022 ಹಾಗೂ 2023ರಲ್ಲಿ ಆನೆಗಳ ಉಪಟಳದಿಂದ ಅತಿ ಹೆಚ್ಚು ಮಂದಿ. ಕಳೆದ 2 ವರ್ಷಗಳಲ್ಲಿ 3 ಮಂದಿ ಮೃತಪಟ್ಟಿದ್ದಾರೆ.ಕಾಡಾನೆಗಳ ದಾಳಿಯಿಂದ ಮೃತಪಟ್ಟವರಲ್ಲಿ ಅತಿ ಹೆಚ್ಚಿನ ಪ್ರಕರಣಗಳು ನಡೆದಿರುವುದು ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ಅಂದರೆ, ಮೂಡಿಗೆರೆ ಮತ್ತು ಚಿಕ್ಕಮಗಳೂರು ತಾಲೂಕುಗಳಲ್ಲಿ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.ತೋಟಗಳಲ್ಲಿ ಕೂಲಿ ಕೆಲಸ ಮಾಡಲು ತೆರಳುವ ಸಂದರ್ಭದಲ್ಲಿ ಕೆಲವರು ಕಾಡಾನೆಗಳ ದಾಳಿಗೆ ಮೃತಪಟ್ಟಿದ್ದರೆ, 2021ರಲ್ಲಿ ಕಾಡಾನೆ ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ಅರಣ್ಯ ರಕ್ಷಕ ಆಲ್ದೂರು ವಲಯದ ಗುಲ್ಲನ್‌ಪೇಟೆಯಲ್ಲಿ ಕಾಡಾನೆ ದಾಳಿಗೆ ತುತ್ತಾದರು. ಕಳೆದ ವರ್ಷ ಅಂದರೆ, 2023ರ ನವೆಂಬರ್‌ 22 ರಂದು ಮೂಡಿಗೆರೆ ವಲಯದ ದೊಡ್ಡಗೊಳ ನಿವಾಸಿ ಆನೆ ನಿಗ್ರಹ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ತಿಕ್‌ಗೌಡ ಅವರು ಕಾಡಾನೆ ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ಆನೆ ತುಳಿತಕ್ಕೆ ಬಲಿಯಾದರು. ವನ್ಯ ಪ್ರಾಣಿಗಳ ದಾಳಿಗೆ ಮೃತಪಟ್ಟಿರುವ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ಈವರೆಗೆ 1.12 ಕೋಟಿ ರು. ಪರಿಹಾರ ಧನ ನೀಡಿದೆ.ಅಕ್ರಮ ವಿದ್ಯುತ್‌ ತಂತಿ: ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 9 ಕಾಡಾನೆಗಳು ಮೃತಪಟ್ಟಿವೆ. ಇವುಗಳಲ್ಲಿ ಒಂದು ಆನೆ ಮಾತ್ರ ವಯೋ ಸಹಜದಿಂದ ಕೊಪ್ಪದ ಚಿಕ್ಕ ಅಗ್ರಹಾರದಲ್ಲಿ 2021 ರಲ್ಲಿ ಮೃತಪಟ್ಟಿದ್ದರೆ, ಒಂದು ಆನೆಯನ್ನು ಹಂತಕರು ಶೂಟ್‌ ಮಾಡಿ ಸಾಯಿಸಿದ್ದಾರೆ. ಇನ್ನೊಂದು ಆನೆ ಪರಸ್ಪರ ಕಾದಾಟದಲ್ಲಿ ಮೃತಪಟ್ಟಿವೆ.ಇನ್ನುಳಿದಂತೆ 6 ಆನೆಗಳು ವಿದ್ಯುತ್‌ ಚಾಲಿತ ತಂತಿಯನ್ನು ತುಳಿದು ಮೃತಪಟ್ಟಿವೆ. ಇವುಗಳಲ್ಲಿ 7 ವರ್ಷದಿಂದ 50 ವರ್ಷ ವಯೋಮಾನದೊಳಗಿನ ಆನೆಗಳು. ಕಡೂರು, ಚಿಕ್ಕಮಗಳೂರು ಹಾಗೂ ಮೂಡಿಗೆರೆ ವಲಯಗಳಲ್ಲಿ ಈ ಅವಘಡಗಳು ಸಂಭವಿಸಿವೆ. ಎನ್‌.ಆರ್‌.ಪುರ ತಾಲೂಕಿನ ಮುತ್ತಿನ ಕೊಪ್ಪದಲ್ಲಿ 2021 ರಲ್ಲಿ ಬಿಎಸ್‌ಎನ್‌ಎಲ್‌ ಟವರ್‌ ಲೈನ್‌ ಮೇಲೆ ವಿದ್ಯುತ್‌ ತಂತಿ ಬಿದ್ದು, ಆ ತಂತಿ ತುಳಿದು ಆನೆಯೊಂದು ಮೃತಪಟ್ಟಿತು.ಇಲ್ಲಿ ಗಂಬೀರವಾದ ವಿಷಯ ಎಂದರೆ, ವಿವಿಧ ಪ್ರಕರಣಗಳಲ್ಲಿ ಮೃತಪಟ್ಟಿರುವುದು ಕಡಿಮೆ ವಯಸ್ಸಿನ ಗಂಡಾನೆಗಳು. ಯಾವುದೇ ಪ್ರಕರಣದಲ್ಲೂ ಯಾರಿಗೂ ಶಿಕ್ಷೆಯಾಗಿಲ್ಲ ಎಂಬುದು ಗಮನಾರ್ಹ ಅಂಶ. 1 ಕೆಸಿಕೆಎಂ 42023ರ ಡಿಸೆಂಬರ್‌ 3 ರಂದು ಮೂಡಿಗೆರೆ ತಾಲೂಕಿನ ಮೇಕನಗದ್ದೆ ಬಳಿ ಕಾರ್ಯಾಚರಣೆ ವೇಳೆಯಲ್ಲಿ ಮೃತಪಟ್ಟ ಕಾಡಾನೆ.