ಸಾರಾಂಶ
ವಿರಾಜಪೇಟೆ : ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ವತಿಯಿಂದ ವಿರಾಜಪೇಟೆ ಅರಣ್ಯ ಭವನ ಸಭಾಂಗಣದಲ್ಲಿ ರೈತರ ಸಮಸ್ಯೆ ಮತ್ತು ಕಾಡಾನೆ ಮಾನವ ಸಂಘರ್ಷ, ವನ್ಯಜೀವಿಗಳ ಉಪಟಳದ ಬಗ್ಗೆ ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದಂತೆ ಸಭೆ ನಡೆಯಿತು.
ಕೊಡಗು ಜಿಲ್ಲಾದ್ಯಂತ ರೈತಾಪಿ ವರ್ಗ ಮತ್ತು ಕೃಷಿ ಸಂಬಂಧಿತ ಬೆಳೆಗಾರರು ಸತತ 20 ವರ್ಷಗಳಿಂದ ಕಾಡಾನೆ ಮಾನವ ಸಂಘರ್ಷ ಮತ್ತು ವನ್ಯಜೀವಿಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಮನವಿಯ ಮೇರೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೊಮ್ಮಯ್ಯ ಮಾತನಾಡಿ, ಉಭಯ ತಾಲೂಕುಗಳ ಕಾಫಿ ತೋಟಗಳಲ್ಲಿ ಗುಂಪು ಗುಂಪಾಗಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡುಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಕಾಡಿಗಟ್ಟುವ ಕ್ರಮ ಕೈಗೊಳ್ಳಬೇಕು. ಕಾಡಾನೆಗಳನ್ನು ನಿಯಂತ್ರಿಸಲು ಅರಣ್ಯದಂಚಿನಲ್ಲಿ ನಿರ್ಮಾಣ ಮಾಡಿರುವ ಇಪಿಟಿ ಕಂದಕವನ್ನು 15- 20 ಅಡಿ ಆಳ ಹಾಗೂ ಅಗಲಕ್ಕೆ ವಿಸ್ತರಿಸಬೇಕು ಎಂದರು.
ಅರಣ್ಯಾದಂಚಿನಲ್ಲಿ ಮನುಜ ವಾಸ ವ್ಯಾಪ್ತಿಗೆ ಕಾಡಾನೆಗಳು ಬಾರದಿರುವಂತೆ ಅರಣ್ಯ ಇಲಾಖೆಯು ರೈಲ್ವೆ ಬ್ಯಾರಿಕೇಡ್ ಅಳವಡಿಸಿರುತ್ತಾರೆ, ಕೆಲವು ಭಾಗಗಳಲ್ಲಿ ಬ್ಯಾರಿಕೇಡ್ ಅಳವಡಿಸದೆ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ, ಅಂತಹ ಸ್ಥಳಗಳಲ್ಲಿ ಬ್ಯಾರಿ ಗೇಡ್ ಅಳವಡಿಸಬೇಕು. ಅರಣ್ಯದಂಚಿನಲ್ಲಿ ಕಾಡಾನೆಗಳನ್ನು ನಿಯಂತ್ರಣಗೊಳಿಸುವ ಸಲುವಾಗಿ ಅಳವಡಿಸಿರುವ ಸೊಲಾರ್ ಬೇಲಿಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕು. ಅರಣ್ಯ ಪ್ರದೇಶದಿಂದ ಜನ ವಾಸ ಪ್ರೆದೇಶದ ಗಡಿ ಭಾಗಗಳಲ್ಲಿ ಕಾಡಾನೆಗಳನ್ನು ಕಣ್ಗಾವಲುಗೊಳಿಸಲು ವೀಕ್ಷಕ ಗೋಪುರ ನಿರ್ಮಿಸಿ ಕೃತಕ ಬುದ್ದಿಮತ್ತೆ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.
ಕಾಡಾನೆ ದಾಳಿ ಮತ್ತು ವನ್ಯಜೀವಿ ಉಪಟಳಗಳಿಂದ ಸಾವು ನೋವುಗಳು, ಬೆಳೆ ಹಾನಿ, ಸಾಕು ಪ್ರಾಣಿ ಹಾನಿಗಳಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಇಲಾಖೆಯಿಂದ ನೀಡಲಾಗುತ್ತಿರುವ ಪರಿಹಾರ ಧನ ಮೊತ್ತವನ್ನು ಪ್ರಸ್ತುತ ಮೊತ್ತಕಿಂತ ಶೇ.20ರಷ್ಟು ಹೆಚ್ಚಳಕ್ಕೆ ಕ್ರಮ ವಹಿಸಬೇಕು ಎಂದರು.
ಪ್ರವಾಸೋದ್ಯಮ ಕೈಬಿಡಲು ಆಗ್ರಹ:
ತಿತಿಮತಿ ನೂಕ್ಯ ಗ್ರಾಮದ ಜಂಗಲ್ ಹಾಡಿಯಲ್ಲಿ ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿರುವ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಆದಿವಾಸಿಗಳ ವಾಸ ವಲಯ ಹೊರತುಪಡಿಸಿ ರೈಲ್ವೆ ಬ್ಯಾರಿ ಗೇಡ್ ಅಳವಡಿಸಬೇಕು, ಮತ್ತು ಕೊಡಗು ಜಿಲ್ಲೆ ಸೇರಿದಂತೆ ಮಲೆನಾಡು ಭಾಗಗಳಲ್ಲಿ ಕಾಡಾನೆ ಮಾನವ ಸಂಘರ್ಷದಿಂದಾಗಿ ಪ್ರಾಣ ಹಾನಿ, ಜಾನುವಾರುಗಳ ಹಾನಿ, ಬೆಳೆ ಹಾನಿಗಳಂತಹ ದುರ್ಘಟನೆಗಳು ಕಳೆದ 20 ವರ್ಷದಿಂದ ನಿರಂತರವಾಗಿ ನಡೆದುಕೊಂಡು ಬಂದಿರುವುದರಿಂದ ಅರಣ್ಯ ಇಲಾಖೆಯು ಮತ್ತಿಗೋಡು ಅರಣ್ಯ ಪ್ರೆದೇಶದಲ್ಲಿ ನಡೆಸಿಕೊಂಡು ಬರುತ್ತಿರುವ ಪ್ರವಾಸೋದ್ಯಮದನ್ನು ತಕ್ಷಣವೇ ಕೈ ಬಿಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಪದಾಧಿಕಾರಿಗಳು ಮತ್ತು ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಅಲಿಸಿ ಮಾತನಾಡಿದ ಕೊಡಗು ಜಿಲ್ಲಾ ಮುಖ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ, ಕಾಫಿ ತೋಟಗಳಲ್ಲಿ ಬಿಡು ಬಿಟ್ಟಿರುವ ಕಾಡಾನೆಗಳ ಸಂಖ್ಯೆ 160-170 ಎಂದು ಅಂದಾಜಿಸಲಾಗಿದೆ, ಅರಣ್ಯ ಪ್ರದೇಶಗಳಲ್ಲಿ ಸಾವಿರಕ್ಕಿಂತ ಅಧಿಕ ಕಾಡಾನೆಗಳು ಉಳಿದಿವೆ, ಕಾಡಾನೆಗಳ ನಿಯಂತ್ರಣಕ್ಕೆ ರಾಜ್ಯ, ಕೇಂದ್ರ ಸರಕಾರ, ಹಾಗೂ ಅರಣ್ಯ ಇಲಾಖೆ ವಿವಿಧ ರೀತಿಯ ಯೋಜನೆಗಳನ್ನು ರೂಪಿಸಿಕೊಂಡು ಬರುತ್ತಿದೆ ಎಂದು ಮಾಹಿತಿ ನೀಡಿದರು.
ಆನೆ ಮಾನವ ಸಂಘರ್ಷದಿಂದಾಗಿ ಪ್ರಾಣ ಹಾನಿ, ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಸಹಾಯಧನ ವಿತರಣೆಯಲ್ಲಿ ವಿಳಂಬವಾಗದೆ ಅತಿ ಶೀಘ್ರದಲ್ಲಿ ಪರಿಹಾರ ಧನ ವಿತರಣೆಗೆ ಕ್ರಮ ಜರುಗಿಸಲಾಗುವುದು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ನವಂಬರ್ ತಿಂಗಳ ಅಂತ್ಯದ ವೇಳೆಗೆ ಅರಣ್ಯ ಪಾಲಕರು ಮತ್ತು ವೀಕ್ಷಕರ ಆಯ್ಕೆ ಪ್ರಕ್ರಿಯೆಗಳು ಪೂರ್ಣಗೊಳ್ಳುವುದರಿಂದ ಕೊಂಚ ಮಟ್ಟಿಗೆ ಸಿಬ್ಬಂದಿ ಕೊರತೆ ನಿಗಬಹುದು ಎಂದು ಹೇಳಿದರು.
ಕಾಡಾನೆ ನಿಯಂತ್ರಣಕ್ಕೆ ಮಾರ್ಗೋಪಾಯಗಳನ್ನು ಸರಕಾರ ಇಲಾಖೆ ಮತ್ತು ತಜ್ಞರ ಸಲಹೆ ಸೂಚನೆಯ ಮೇರೆಗೆ ಸಮಸ್ಯೆಯ ಪರಿಹಾರಕ್ಕೆ ಮುಂದಾಗುತ್ತೇವೆಂದು ಹೇಳಿದರು.
ಕೊಡಗು ಜಿಲ್ಲಾ ಘಟಕದ ಸಂಚಾಲಕ ಪುಚ್ಚಿಮಾಡ ಸುಭಾಸ್ ಸುಬ್ಬಯ್ಯ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಟ್ರುಮಾಡ ಸುಜಯ್ ಬೋಪ್ಪಯ್ಯ, ಖಜಾಂಚಿ ಸಬೀತ ಭೀಮಯ್ಯ, ಉಪ ಸಂರಕ್ಷಣಾ ಅಧಿಕಾರಿ ಏನ್.ಟಿ. ಜಗನಾಥ್, ಸಹಾಯಕ ಅರಣ್ಯ ಅಧಿಕಾರಿ ಕೆ.ಎ. ನೆಹರು , ಕೆ.ಪಿ..ಗೋಪಾಲ್ , ದಯಾನಂದ ಮತ್ತು ಶ್ರೀನಿವಾಸ್ ನಾಯಕ್ ಇದ್ದರು.
ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಲೆಮಾಡ ಮಂಜುನಾಥ್, ಪೊನ್ನಂಪೇಟೆ ಅಧ್ಯಕ್ಷ ಚೋಟೆಕಾಳಪಂಡ ಮನು ,
ಮಾಯಾಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ನಲ್ಲೂರು ಅಧ್ಯಕ್ಷ ರಾಜ ಕರುಬಯ್ಯ ಹಾಗೂ ವಿವಿಧ ಘಟಕದ ರೈತ ಸಂಘದ ಪದಾಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಹಿರಿಯ ಕಿರಿಯ ಸಿಬ್ಬಂದಿಗಳು ಹಾಜರಿದ್ದರು.