ಜಿಲ್ಲಾ ಪಂಚಾಯತ್‌ನಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಸಿದ್ದು ಪಾಟೀಲ್‌ ಹಾಗೂ ಎಂಎಲ್‌ಸಿಗಳ ಮಧ್ಯ ನಡೆದ ಗಲಾಟೆ ಹಿನ್ನಲೆಯಲ್ಲಿ ಹುಮನಾಬಾದ್‌ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದ್ದರಿಂದ ಪಟ್ಟಣದಾದ್ಯಂತ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಜಿಲ್ಲಾ ಪಂಚಾಯತ್‌ನಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಸಿದ್ದು ಪಾಟೀಲ್‌ ಹಾಗೂ ಎಂಎಲ್‌ಸಿಗಳ ಮಧ್ಯ ನಡೆದ ಗಲಾಟೆ ಹಿನ್ನಲೆಯಲ್ಲಿ ಹುಮನಾಬಾದ್‌ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದ್ದರಿಂದ ಪಟ್ಟಣದಾದ್ಯಂತ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿದೆ.

ಮಾಜಿ ಸಚಿವ ರಾಜಶೇಖರ ಪಾಟೀಲ್‌ ಅವರ ಮನೆ ಮುಂದೆ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಜಮಾವಣೆಯಾದ ಹಿನ್ನಲೆಯಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಶಾಸಕ ಡಾ. ಸಿದ್ದು ಪಾಟೀಲ್‌ ಮನೆ ಮುಂದೆ ಕಾರ್ಯಕರ್ತರ ಗುಂಪು ಸೇರುತ್ತಿರುವುದರಿಂದ ಅಲ್ಲಿಯೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಆರಂಭದಲ್ಲಿ ಡಿವೈಎಸ್ಪಿ ಮಡಿವಾಳಪ್ಪ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ ಮಾಡಿದ್ದರು ನಂತರ ಸ್ಥಳಕ್ಕೆ ಎಸ್ಪಿ ಪ್ರದೀಪ ಗುಂಟಿ ಭೇಟಿ ನೀಡಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.

ಬಳ್ಳಾರಿ ಬಳಿಕ ಹುಮನಾಬಾದ್‌ ರಾಜಕೀಯದಲ್ಲಿ ಭಾರಿ ಗದ್ದಲ :

ಇತ್ತೀಚೆಗೆ ಬಳ್ಳಾರಿಯಲ್ಲಿ ರಾಜಕೀಯ ಗದ್ದಲ ನಡೆದು ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಂತರ ಈಗ ಹುಮನಾಬಾದ್‌ ಕೂಡ ಬಿಜೆಪಿ ಹಾಗೂ ಕಾಂಗ್ರೆಸ್‌ ಶಾಸಕರುಗಳ ಮಧ್ಯದ ಗಲಾಟೆಯು ಹುಮನಾಬಾದ್‌ ಬಳ್ಳಾರಿಯ ಉಗ್ರ ಸ್ವರೂಪ ಪಡೆದುಕೊಂಡಂತೆ ಮಾಡಿದೆ.

ಮಾಜಿ ಸಚಿವ ರಾಜಶೇಖರ ಪಾಟೀಲ್‌ ಮನೆಗೆ ಎಸ್‌ಪಿ ಪ್ರದೀಪ ಗುಂಟಿ ಭೇಟಿ ನೀಡಿದ ಸಮಯದಲ್ಲಿ ಶಾಸಕ ಡಾ. ಸಿದ್ದು ಪಾಟೀಲ್‌ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರಿಂದ ಬಿಜೆಪಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌ ವಿರುದ್ಧ ಧಿಕ್ಕಾರ ಕೂಗಿ, ಬಂಧಿಸಬೇಕೆಂದು ಆಗ್ರಹ ಕೇಳಿಬಂದವು.

ಹುಮನಾಬಾದ್‌ ನಗರದಲ್ಲೆಡೆ ಪೊಲೀಸ್‌ ವಾಹನಗಳ ಸೈರನ್‌ ಶಬ್ದ ಕೇಳಿ ಬರುತ್ತಿದ್ದು, ಮಾಜಿ ಸಚಿವ ರಾಜಶೇಖರ ಪಾಟೀಲ್‌ ಅವರ ಮನೆಯ ಸುತ್ತ ಮುತ್ತಲಿನ ಪ್ರದೇಶದ ಅಂಗಡಿಗಳನ್ನು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಬಂದ್‌ ಮಾಡಿಸಿದರೆಂದು ತಿಳಿದು ಬಂದಿದೆ.