ನಾವು ಇತರರನ್ನು ವಿರೋಧ ಮಾಡುವುದನ್ನು ನಿಲ್ಲಿಸಬೇಕು. ನಮ್ಮ ಮನಸ್ಸಿನಲ್ಲಿರುವ ಅವಗುಣಗಳನ್ನು ವಿರೋಧಿಸಬೇಕು. ಹಾಗಾದಲ್ಲಿ ಮಾತ್ರ ಸೌಹಾರ್ದ ಭಾರತವನ್ನು ಕಟ್ಟಲು ಸಾಧ್ಯ.

ಕನ್ನಡಪ್ರಭ ವಾರ್ತೆ ರಾಮನಗರ

ಧರ್ಮ ಎಂದರೆ ಸಮಾನಾಂತರವಾಗಿ ಇರುವಂಥದ್ದು. ಎಲ್ಲರನ್ನೂ ಸಮಾನವಾಗಿ ಕಾಣುವಂಥದ್ದು. ಹಿಂದೂ, ಇಸ್ಲಾಂ, ಕ್ರಿಶ್ಚಿಯನ್‌, ಬೌದ್ಧ ಇವ್ಯಾವವು ಧರ್ಮಗಳೇ ಅಲ್ಲ. ಮಾನವ ಧರ್ಮವೇ ನಿಜವಾದ ಧರ್ಮ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಹೇಳಿದರು.

ನಗರದ ಎಂ.ಎಚ್‌.ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಮ್ಮವರು ತಂಡದ ವತಿಯಿಂದ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೆಲ್ಲಾ ಸಮಾಜದಲ್ಲಿ ಅಜ್ಞಾನ ಇತ್ತು. ಮೂಢನಂಬಿಕೆ, ಕಂದಾಚಾರ ಹೆಚ್ಚು ಆಚರಣೆಯಲ್ಲಿತ್ತು. ಈಗ ಜನರು ವಿದ್ಯಾವಂತರಾಗಿದ್ದಾರೆ. ಆದರೆ ವೈಚಾರಿಕತೆ ಮಾತ್ರ ಬೆಳೆದಿಲ್ಲ. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಕೆಲಸವನ್ನು ಯಾರೂ ಮಾಡಬಾರದು ಎಂದರು.

ಸಾಹಿತಿ ಡಾ.ಕೆ. ಷರೀಫಾ ಮಾತನಾಡಿ, ಸಮಾಜದಲ್ಲಿ ಮನಸ್ಸುಗಳು ಕಲುಷಿತವಾಗಿವೆ. ಬಲತ್ಕಾರಿ, ಅತ್ಯಾಚಾರಿಗಳು ಜೈಲಿನಿಂದ ಹೊರಗೆ ಬಂದಾಗ ಹೂವಿನ ಹಾರಗಳನ್ನು ಹಾಕಿ ಅವರನ್ನು ಅದ್ಧೂ0ರಿಯಾಗಿ ಸ್ವಾಗತಿಸುವ ಗುಂಪೊಂದು ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಸತ್ತೆಯೇ ಭಾರತದ ಉಸಿರು. ಆದರೀಗ ಪ್ರಜಾಸತ್ತಯೇ ಕೊನೆಯುಸಿರೆಳೆಯುತ್ತಿದೆಯಾ ಎನ್ನಿಸುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಸ್ವಾತಂತ್ರ್ಯಕ್ಕೂ ಮೊದಲು ಬೇರೆ ದೇಶದವರು ನಮ್ಮ ದೇಶದ ಸಂಪತ್ತನ್ನು ಲೂಟಿ ಹೊಡೆದು ನಮ್ಮನ್ನು ಬಡವರಾಗಿ ಮಾಡಿದ್ದರು. ಆದರೆ, ಸ್ವಾತಂತ್ರ್ಯ ಸಿಕ್ಕ ನಂತರ ನಮ್ಮದೇ ದೇಶದ ಕೆಲವೇ ಕೆಲವು ಕಾರ್ಪೋರೇಟ್‌ ವ್ಯಕ್ತಿಗಳು ದೇಶದ ಸಂಪತ್ತನ್ನು ಬಳಸಿಕೊಂಡು ಶ್ರೀಮಂತರಾಗುತ್ತಿದ್ದಾರೆ ಎಂದು ಟೀಕಿಸಿದರು.

ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಮಾತನಾಡಿ, ಹಿಂದೆಲ್ಲಾ ಮಾಧ್ಯಮಗಳು ಸೂಕ್ಷ್ಮ ಸಂವೇದನೆಯನ್ನು ಹೊಂದಿದ್ದವು. ಎರಡು ಗುಂಪುಗಳ ನಡುವೆ ಗಲಾಟೆ ಆದ ಸಂದರ್ಭದಲ್ಲಿ ದ್ವೇಷವನ್ನು ಪ್ರಚಾರ ಮಾಡಬಾರದು ಎನ್ನುವ ಕಾರಣಕ್ಕೆ ಜಾತಿ ಅಥವಾ ಧರ್ಮಗಳ ಹೆಸರನ್ನು ಸಹ ಬಹಿರಂಗ ಪಡಿಸುತ್ತಿರಲಿಲ್ಲ. ಆದರೆ ಈಗ ಸುದ್ದಿ ವಾಹಿನಿಯಲ್ಲಿ ಕುಳಿತುಕೊಳ್ಳುವ ನಿರೂಪಕರೇ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದರು.

ಮಕ್ಕಳಿಗೆ ಪದವಿ ಮುಗಿಯುವವರೆಗೂ ಈ ಜಾತಿ, ಧರ್ಮದ ಬಗ್ಗೆ ಅರಿವು ಇರುವುದಿಲ್ಲ. ಅದು ಮುಗಿದ ನಂತರವೇ ಈ ಹೊಲಸು ಪ್ರಪಂಚಕ್ಕೆ ಕಾಲಿಡುವುದು. ವಿಶ್ವವಿದ್ಯಾಲಯಗಳಲ್ಲಿಯೇ ಜಾತಿ, ಧರ್ಮ ಹೆಚ್ಚು ಪೋಷಣೆಯಾಗುತ್ತಿದೆ. ಅತ್ಯಂತ ವಿದ್ಯಾವಂತರು ಎನ್ನಿಸಿಕೊಂಡಂತಹ ಪ್ರಾಧ್ಯಾಪಕರೇ ಈ ಜಾತಿ, ಧರ್ಮಗಳ ಪೋಷಣೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾಲಯದ ಮುಖ್ಯಸ್ಥ ಭಂತೆ ಬೋಧಿದತ್ತ ಥೇರೋ ಬುದ್ಧನ ಜೀವನದಲ್ಲಿ ನಡೆದ ಕೆಲವು ಘಟನಾವಳಿಗಳ ಕತೆಯನ್ನು ಹೇಳುವ ಮೂಲಕ ಸೌಹಾರ್ದತೆಯ ಸಂದೇಶವನ್ನು ತಿಳಿಸಿಕೊಟ್ಟರು.

ರಾಮನಗರ- ಚನ್ನಪಟ್ಟಣ ಸಭಾ ಪಾಲಕ ಘನ ಸ್ಯಾಮ್‌ ಸನ್‌ ಮಾತನಾಡಿ, ಯಾವ ಸ್ಥಳದಲ್ಲಿ ಎಲ್ಲಾ ಧರ್ಮಗಳು ಸೇರಿ ಬದುಕುತ್ತವೋ ಅಲ್ಲಿ ಸೌಹಾರ್ದತೆ ಕೂಡಿ ಬರುತ್ತದೆ. ನಮ್ಮ ಧರ್ಮ ನಮ್ಮ ಸಮುದಾಯಕ್ಕೆ, ನಮ್ಮ ಮನೆಗೆ ಮಾತ್ರ ಸೀಮಿತವಾಗಿರಬೇಕು. ಸಮಾಜಕ್ಕೆ ಕಾಲಿಡುವಾಗ ಒಬ್ಬ ಮಾನವನಾಗಿ ಬರಬೇಕು ಎಂದರು.

ನಳಂದ ಬೌದ್ಧ ವಿಶ್ವವಿದ್ಯಾಲಯದ ಭಂತೆ ಬೋಧಿದತ್ತ ಮಾತನಾಡಿ, ನಾವು ಇತರರನ್ನು ವಿರೋಧ ಮಾಡುವುದನ್ನು ನಿಲ್ಲಿಸಬೇಕು. ನಮ್ಮ ಮನಸ್ಸಿನಲ್ಲಿರುವ ಅವಗುಣಗಳನ್ನು ವಿರೋಧಿಸಬೇಕು. ಹಾಗಾದಲ್ಲಿ ಮಾತ್ರ ಸೌಹಾರ್ದ ಭಾರತವನ್ನು ಕಟ್ಟಲು ಸಾಧ್ಯ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷ ಬಿ.ಟಿ. ನಾಗೇಶ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ. ಶಿವಣ್ಣ ಕೊತ್ತಿಪುರ, ನಮ್ಮವರು ತಂಡದ ಕುಂಬಾಪುರ ಬಾಬು, ಎಸ್. ಪದ್ಮರೇಖಾ, ಆರ್. ನಾಗರಾಜು, ಡಾ.ಎಚ್.ಡಿ. ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.