ಡಾ.ಮಲ್ಲಿಕಾರ್ಜುನ ಜವಳಿ ಅಭಿಮತ । ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯ ಸಮಾರೋಪ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
12ನೇ ಶತಮಾನದ ಚಳುವಳಿಯಲ್ಲಿ ಶಿವಶರಣರು ಮಾಡಿದ ಮಾನವೋದ್ಧಾರದ ಕಾರ್ಯವನ್ನು ಪ್ರಸ್ತುತ ಕಾಲಘಟ್ಟದಲ್ಲಿ ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ದಾವಣಗೆರೆಯ ಬಸವ ಪ್ರಜ್ಞಾ ಸಂಚಾಲಕ ಡಾ.ಮಲ್ಲಿಕಾರ್ಜುನ ಜವಳಿ ಹೇಳಿದರು.ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣಮಾಸದ ಪ್ರಯುಕ್ತ ಆಯೋಜಿಸಿರುವ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ದಾವಣಗೆರೆಯ ಶ್ರೀ ಬಕೇಶ್ವರರ ಜೀವನ ಹಾಗೂ ಸಾಧನೆ ಕುರಿತ ಚಿಂತನಗೋಷ್ಠಿಯಲ್ಲಿ ಉಪನ್ಯಾಸ ನೀಡಿ, ಕಳೆದ 28 ದಿನಗಳಿಂದ ಶ್ರೀ ಮಠದಲ್ಲಿ ನಡೆದ ಅನುಭಾವ ಶ್ರಾವಣ ಚಿಂತನ ಮಾಲಿಕೆಯಲ್ಲಿ ಪ್ರತಿದಿನ ಸತ್ಪುರುಷರ ಭಕ್ತಿ ಜ್ಞಾನ ಮತ್ತು ದಾಸೋಹದ ಧಾರೆಯನ್ನು ಎರೆದುಕೊಟ್ಟಿದೆ. ಅನುಭಾವವಿಲ್ಲದ ಕ್ರಿಯೆ ಆಚಾರಕ್ಕೆ ದೂರ. ಶರಣರು ತಾವು ಆಲೋಚಿಸಿದ ವಿಷಯಗಳನ್ನು ತಮ್ಮ ಪ್ರಾಯೋಗಿಕ ಜೀವನಕ್ಕೆ ಅಳವಡಿಸಿಕೊಂಡರು. ಅನುಭಾವವಿಲ್ಲದ ಭಕ್ತಿ ಅರಿವಿಗೆ ದೂರ. ಇಂತಹ ಅನುಭಾವವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಉದ್ಧಾರಕ್ಕೆ ಶ್ರಮಿಸಿದವರು ದಾವಣಗೆರೆಯ ಬಕ್ಕೇಶ್ವರರು. ಬಸವಾದಿ ಶರಣರ ಪಳಯುಳಿಕೆಯಂತೆ ಇದ್ದುದು ಮುರುಘಾ ಪರಂಪರೆ. ಈ ಪರಂಪರೆಯಲ್ಲಿ ಬಕ್ಕೇಶ್ವರರು ಕಾಣಸಿಗುತ್ತಾರೆ ಎಂದರು. ಶಿವಜ್ಞಾನದ ಶಿವಯೋಗಿಗಳಲ್ಲಿ ಬಕ್ಕೇಶ್ವರರೂ ಒಬ್ಬರು. ಇವರು ಚಿತ್ರದುರ್ಗ, ದಾವಣಗೆರೆ ಪರಿಸರದ ಗುಮ್ಮನೂರು ಗ್ರಾಮದ ಬಸವಲಿಂಗಪ್ಪ ಪಾರ್ವತಮ್ಮನವರ ಪುತ್ರರಾಗಿ ಜನಿಸಿದರು. ಇವರಿಗೆ ಉಳವಿ ಚೆನ್ನಬಸವೇಶ್ವರರ ಕೃಪೆಯಾಗಿರುತ್ತದೆ. ಶಿವಯೋಗಿ ಸ್ವರೂಪದ ಬಕ್ಕೇಶ್ವರರು ದನಕಾಯುವ ಕೆಲಸದಿಂದ ಪ್ರಾರಂಭಿಸಿ ತನ್ನ ಲೀಲೆಗಳನ್ನು ತೋರಿಸಿದರು. ಇವರ ಗೆಳೆಯ ಸಿದ್ದಪ್ಪನಿಗೆ ತನ್ನ ಲೀಲೆಗಳನ್ನು ತೋರಿಸುತ್ತಿದ್ದರು. ಧರ್ಮ ಜಾಗೃತಿಗಾಗಿ ದೀನ ದಲಿತರ ಉದ್ಧಾರಕ್ಕಾಗಿ ಧರ್ಮಪ್ರಚಾರ ಕೈಗೊಳ್ಳಲು ದೇಶಾಂತರ ಹೋದರು. ಬೇರೆಯವರಿಗೆ ಶಿವಸ್ವರೂಪಿಯಾಗಿ ಕಾಣುತ್ತಿದ್ದರು. ಚಂದ್ರವಳ್ಳಿಯ ಅಂಕಲಿ ಮಠದಲ್ಲಿ ಬಕ್ಕೇಶ್ವರರು ಶಿವಯೋಗ ನಿರತರಾಗಿದ್ದ ಅವರು ಸಮಾಜವನ್ನು ತಿದ್ದುವಂತಹ ಅನೇಕ ಕೆಲಸಗಳನ್ನು ಮಾಡಿದರು. ಕಳ್ಳರ ಮನಸ್ಸನ್ನು ಪರಿವರ್ತಿಸಿ ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸಿದವರು. ಗೋಕರ್ಣ, ಹಂಪಿ, ಕಾಶಿ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಎಲ್ಲಾ ಕನಿಷ್ಠತೆಗಳಲ್ಲಿ ಶ್ರೇಷ್ಠತೆಯನ್ನು ಗುರುತಿಸಿ ಸನ್ಮಾರ್ಗಕ್ಕೆ ಎಲ್ಲರನ್ನು ಕೊಂಡೊಯ್ದವರು ಎಂದು ತಿಳಿಸಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸದ 28 ದಿನಗಳಿಂದ ನಡೆದು ಬಂದ ಕಾರ್ಯಕ್ರಮದ ಸಮಾರೋಪ ಸಾಂಕೇತಿಕವಾಗಿ ನಡೆಯುತ್ತಿದೆ. ಸ್ಮರಣೆಗಿಂತ ಮತ್ತೊಂದು ವಸ್ತು ಯಾವುದಿಲ್ಲ. ಕೃತಜ್ಞತಾ ಭಾವನೆ ಎಲ್ಲರಲ್ಲೂ ಇರಬೇಕು. ಕರ್ನಾಟಕದ ಎಲ್ಲ ಮಠಗಳಲ್ಲಿರುವ ಮೂಲಗುರುಗಳನ್ನು ಸ್ಮರಿಸಬೇಕು. ಮುಂಚೂಣಿಯಲ್ಲಿಲ್ಲದ 30 ಜನರ ಸ್ಮರಣೆಯನ್ನು ಕಾರ್ತಿಕ ಮಾಸದಲ್ಲಿ ಮಾಡಲಾಯಿತು. ಅದರಂತೆ ಶ್ರಾವಣ ಮಾಸದಲ್ಲಿಯೂ 28 ಶರಣರ ಸ್ಮರಣೆಯನ್ನು ಈಗ ಮಾಡಲಾಗಿದೆ. ಆತ್ಮಶೋಧನೆಯಿಲ್ಲದೆ ಶರಣರ ಬಗ್ಗೆ ಮಾತನಾಡುವುದು ಸಂಶೋಧನೆ ಮಾಡುವುದು ಮೂರ್ಖತನ ಎನಿಸಿಕೊಳ್ಳುತ್ತದೆ ಎನ್ನುವ ಮಲ್ಲಿಕಾರ್ಜುನ ಶ್ರೀಗಳ ಮಾತನ್ನು ನೆನಪಿಸಿಕೊಂಡರು.ಶರಣ ಸಂಸ್ಕೃತಿ ಉತ್ಸವ ಸಂದರ್ಭದಲ್ಲಿ ಭದ್ರಾ ನಾಲೆಗೆ ಭೂಮಿಕೊಟ್ಟ ರೈತರು, ಎಂಜಿನಿಯರ್‌ಗಳ ಪಾತ್ರವನ್ನು ಶ್ಲಾಘಿಸಿದರಲ್ಲದೆ, ಈ ಸಲದ ಶರಣ ಸಂಸ್ಕೃತಿ ಉತ್ಸವದಲ್ಲಿ ಚೆನ್ನಬಸವಣ್ಣನವರಿಂದ ಅ.13 ರಿಂದ 21ರವರೆಗೆ ಯೋಗವನ್ನು ಏರ್ಪಡಿಸಲಾಗಿದೆ. ವಿಚಾರ ಸಂಕಿರಣ, ಚಿನ್ಮೂಲಾದ್ರಿಯ ಚಿದ್ರೂಪ ಗ್ರಂಥ ಬಿಡುಗಡೆ, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ, ಎಸ್.ನಿಜಲಿಂಗಪ್ಪನವರ ವಿಚಾರ ಸಂಕಿರಣ, ಶಿವಾನುಭವ ಪತ್ರಿಕೆಗೆ 100 ವರ್ಷ ತುಂಬಿರುವುದರಿಂದ ವಿಚಾರ ಸಂಕಿರಣ ಇರುತ್ತದೆ ಎಂದರು.
ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ, ಶರಣರ ಭಾವಚಿತ್ರಗಳನ್ನು ಪೂಜಿಸುತ್ತೇವೆ. ಸಮಾಜ ಪರಿವರ್ತನೆ, ದಾರಿದ್ರ, ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವ ಕೆಲಸವನ್ನು ಮಾಡಿದ ಶರಣರ ಚಿಂತನೆಗಳನ್ನು ಶ್ರೀಮಠ ನಡೆಸುತ್ತ ಸ್ವಾರ್ಥರಹಿತ ಸಮಾಜ ನಿರ್ಮಾಣ ಮಾಡುತ್ತ ಬಂದಿದೆ. ಇದು ಸಂತೋಷದ ವಿಚಾರ. ನೀರು ಜೀವಜಲ. ನೀರಿಲ್ಲದೆ ಬದುಕಿಲ್ಲ. ಇಂತಹ ನೀರನ್ನು ಗೋನೂರು ಕೆರೆಗೆ ಭದ್ರಾ ನೀರು ತರುವಲ್ಲಿ ಮುರುಘಾಮಠ ಮುಂಚೂಣಿಯಲ್ಲಿತ್ತು. ನೀರು ಹರಿದು ಬಂದಿರುವುದು ಈ ಭಾಗದ ರೈತರ ಮೊಗದಲ್ಲಿ ಹರ್ಷವನ್ನುಂಟು ಮಾಡಿದೆ ಎಂದರು.ಬಾಪೂಜಿ ವಿದ್ಯಾಸಂಸ್ಥೆಯ ಕೆ.ಎಂ.ವೀರೇಶ್, ಎಸ್‌ಜೆಎಂ ವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಮಾತನಾಡಿದರು.
ಸಮಾರಂಭದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ಬಸವ ಮುರುಘಂದ್ರ ಸ್ವಾಮೀಜಿ, ಶ್ರೀ ಬಸವಮೂರ್ತಿ ಗುಂಡಯ್ಯ ಸ್ವಾಮೀಜಿ, ಲಾಳನಹಳ್ಳಿ ಶರಣೆ ಜಯದೇವಿ, ಶರಣೆ ಚಿನ್ಮಯಿದೇವಿ, ವಿವಿಧ ಸಮಾಜಗಳ ಮತ್ತು ಸಂಘಟನೆಗಳ ಮುಖಂಡರಾದ ಡಿ.ಎಸ್.ಮಲ್ಲಿಕಾರ್ಜುನ್, ಪಟೇಲ್ ಶಿವಕುಮಾರ್, ಎಸ್.ಷಣ್ಮುಖಪ್ಪ, ಎಸ್.ವಿ.ಕೊಟ್ರೇಶ್, ಎಸ್.ವಿ.ಮುರುಫೇಶ್, ರೋ.ವೀರೇಶ್ ಎಸ್, ಗುತ್ತಿನಾಡು ಪ್ರಕಾಶ್, ಎಸ್.ಪರಮೇಶ್, ಗಾಯತ್ರಿ ಶಿವರಾಂ, ನಾಗರಾಜ ಸಂಗಂ, ಡಾ.ದೊಡ್ಡಮಲ್ಲಯ್ಯ, ಕಸವನಹಳ್ಳಿ ಶಿವಣ್ಣ, ಬಸವರಾಜ ಕಟ್ಟಿ ಮೊದಲಾದವರಿದ್ದರು.