ದುಶ್ಚಟಗಳು ಮನುಷ್ಯನನ್ನು ವಿನಾಶಗೊಳಿಸಿದರೆ ಸದಾಚಾರ ಮತ್ತು ಸದ್ಗುಣಗಳು ವಿಕಾಸಗೊಳಿಸುತ್ತವೆ. ಅಮೂಲ್ಯವಾದ ಈ ಜೀವನವನ್ನು ಸಾರ್ಥಕಗೊಳಿಸಲು ಸಜ್ಜನರ ಸಂಗದಲ್ಲಿರಬೇಕು, ದುರ್ಜನರಿಂದ ದೂರವಿರಬೇಕು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಹಾವೇರಿ: ದುಶ್ಚಟಗಳು ಮನುಷ್ಯನನ್ನು ವಿನಾಶಗೊಳಿಸಿದರೆ ಸದಾಚಾರ ಮತ್ತು ಸದ್ಗುಣಗಳು ವಿಕಾಸಗೊಳಿಸುತ್ತವೆ. ಅಮೂಲ್ಯವಾದ ಈ ಜೀವನವನ್ನು ಸಾರ್ಥಕಗೊಳಿಸಲು ಸಜ್ಜನರ ಸಂಗದಲ್ಲಿರಬೇಕು, ದುರ್ಜನರಿಂದ ದೂರವಿರಬೇಕು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ನಗರದ ಹುಕ್ಕೇರಿಮಠದ ನಮ್ಮೂರ ಜಾತ್ರಾ ಮಹೋತ್ಸವ ನಿಮಿತ್ತ ರಾಮದೇವರ ಗುಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುಶ್ಚಟಗಳಿಗೆ ಅಂಟಿಕೊಂಡ ಒಬ್ಬ ವ್ಯಕ್ತಿಯಿಂದ ಇಡೀ ಕುಟುಂಬವೇ ತತ್ತರಿಸಬಹುದು. ಸಂಸ್ಕಾರ ಇದ್ದ ಮನೆಯ ಸಂಸಾರ ಸದಾ ಸುಖಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸ್ವಸ್ಥ ಸಮಾಜ ಹಾಗೂ ಸ್ವಸ್ಥ ಕುಟುಂಬ ನಿರ್ಮಾಣಕ್ಕೆ ದುಶ್ಚಟಗಳು ಮಾರಕ. ಇಂದಿನ ಯುವ ಪೀಳಿಗೆ ಸನ್ಮಾರ್ಗದಿಂದ ವಿಮುಖವಾಗುತ್ತಿದೆ. ಮಕ್ಕಳು ಮಾತು ಕೇಳದ ಕಾಲಘಟ್ಟದಲ್ಲಿದ್ದೇವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಪಾಲಕರು ಮತ್ತು ವಿಶೇಷವಾಗಿ ಮಹಿಳೆಯರು ತಮ್ಮ ಕೌಟುಂಬಿಕ ವಾತಾವರಣ ಸುಸ್ಥಿತಿಯಲ್ಲಿಡಲು ಶ್ರಮಿಸಬೇಕು. ಅಂದಾಗ ಮಾತ್ರ ನೆಮ್ಮದಿ ಜೀವನ ಕಳೆಯಬಹುದು ಎಂದರು.ಇದಕ್ಕೂ ಮುನ್ನ ಶ್ರೀಗಳ ನೇತೃತ್ವದ ಪಾದಯಾತ್ರೆ ನಗರದ ನಾಯಕ ಚಾಳದಿಂದ ಆರಂಭವಾಗಿ ದ್ಯಾಮವ್ವನ ಗುಡಿ ಓಣಿ, ದೇಸಾಯಿ ಗಲ್ಲಿ, ಕೊರಗರ ಓಣಿ, ಮುದ್ದುರಗೆಮ್ಮ ದೇವಸ್ಥಾನ ಮಾರ್ಗವಾಗಿ ರಾಮದೇವರ ಗುಡಿಯಲ್ಲಿ ಮುಕ್ತಾಯಗೊಂಡಿತು. ಹುಕ್ಕೇರಿಮಠದ ಭಕ್ತರು ತಮ್ಮ ಮನೆ ಹಾಗೂ ತಮ್ಮ ಓಣಿಗಳನ್ನು ಸ್ವಚ್ಛಗೊಳಿಸಿ ರಸ್ತೆ ಮಧ್ಯೆಯೇ ಬಣ್ಣ ಬಣ್ಣದ ಚಿತ್ತಾರಗಳನ್ನು ಮತ್ತು ತಮ್ಮ ಮನೆ ಎದುರು ಅಂದವಾದ ರಂಗೋಲಿ ಬಿಡಿಸಿದ್ದರು. ಅಷ್ಟೇ ಅಲ್ಲದೇ ಶಿವಬಸವ ಸ್ವಾಮೀಜಿ ಹಾಗೂ ಶಿವಲಿಂಗೇಶ್ವರ ಸ್ವಾಮೀಜಿ ಜೊತೆಗೆ ವಿಶ್ವಗುರು ಬಸವಣ್ಣ ಹಾಗೂ ಹಾನಗಲ್ಲ ಕುಮಾರಸ್ವಾಮಿಗಳ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ಸುಮಂಗಲೆಯರು ಕುಂಭ ಹೊತ್ತು ಸಾಗುವ ವೇಳೆ ಶಿವನೇ ಬಸವ, ಬಸವಾ ಶಿವನೇ ಎಂದು ಉಚ್ಚರಿಸುತ್ತ ಸಾಗಿದರು. ತಮ್ಮ ಮನೆ ಎದುರಿಗೆ ಶ್ರೀಗಳು ಬರುತ್ತಿದ್ದಂತೆ ಪುಷ್ಪಗಳನ್ನು ಅರ್ಪಿಸಿ ಭಕ್ತಿ ಸಮರ್ಪಿಸಿದರು.ಸಂಜೆ ಹುಕ್ಕೇರಿಮಠದ ಮುಖ್ಯ ವೇದಿಕೆಯಲ್ಲಿ ಭಕ್ತರು ಶಿವಬಸವ ಸ್ವಾಮಿಗಳು ಅವರಿಗೆ ತುಲಾಭಾರ ನೆರವೇರಿಸಿದರು. ಹಿರೇಮುಗದೂರ, ಕಾಟೇನಹಳ್ಳಿ, ಕಳ್ಳಿಹಾಳ ಹಾಗೂ ಕುರುಬಗೊಂಡದ ಭಕ್ತರು ತಮ್ಮ ಭಕ್ತಿ ಸೇವೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಶೇಗುಣಸಿಯ ಡಾ.ಮಹಾಂತಪ್ರಭು ಮಹಾಸ್ವಾಮಿಗಳ ಪ್ರವಚನ, ಹನುಮಂತಪ್ಪ ಕೊಟ್ನಿಕಲ್ ತಬಲಾ ಹಾಗೂ ಹನುಮಂತಪ್ಪ ಕಾಮನಹಳ್ಳಿ ಅವರ ವಯೋಲಿನ್ ಸಾಥ್ ಜೊತೆಗೆ ಅಮರೇಶ ಗವಾಯಿಗಳ ಸಂಗೀತ ಕಾರ್ಯಕ್ರಮ ನೆರವೇರಿತು.ಅಭಿನವ ಸಿದ್ಧಾರೂಢ ಸ್ವಾಮೀಜಿ, ಡಾ.ಮಹಾಂತಪ್ರಭು ಸ್ವಾಮೀಜಿ, ಅಭಿನವ ಮೃತ್ಯುಂಜಯ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಗುರು ಮಹೇಶ್ವರ ಶಿವಾಚಾರ್ಯರು, ಘನಲಿಂಗ ದೇವರು, ವೀರಬಸವ ದೇವರು ಪಾದಯಾತ್ರೆಯಲ್ಲಿ ಸಾಗಿದರು.