ಸಾರಾಂಶ
ಪುತ್ತೂರು: ಯುವತಿ ಯುವಕನಿಂದಾಗಿ ವಿವಾಹ ಪೂರ್ವದಲ್ಲಿ ಗರ್ಭ ಧರಿಸಿದ ವಿಷಯದಲ್ಲಿ ಜಾತಿ, ಆಚಾರ, ವಿಚಾರಕ್ಕಿಂತಲೂ ಮಾನವೀಯತೆ ಮುಖ್ಯ ಎಂದು ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಅವರು ಬುಧವಾರ, ಅಕ್ರಮ ಗರ್ಭಧಾರಣೆಗೆ ಒಳಗಾಗಿ ಗಂಡು ಮಗುವಿಗೆ ಜನ್ಮವಿತ್ತ ಸಂತ್ರಸ್ತೆ ವಿದ್ಯಾರ್ಥಿನಿಯ ಪುತ್ತೂರಿನ ಮನೆಗೆ ಭೇಟಿ ನೀಡಿ ಕುಟುಂಬದೊಂದಿಗೆ ಮಾತುಕತೆ ನಡೆಸಿದರು.ಸಂತ್ರಸ್ತ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡುವ ಮೊದಲು ಬೊಳುವಾರು ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳನ್ನು ಕೈ ಬಿಟ್ಟ ಉದಾಹರಣೆ ಭಾರತದ ಇತಿಹಾಸದಲ್ಲಿಯೇ ಇಲ್ಲ. ಹಾಗಾಗಿ ವಿಶ್ವಕರ್ಮ ಸಮಾಜದ ಬಂಧುವಿನ ಪರವಾಗಿ ಯಾವುದೇ ಹಂತಕ್ಕೂ ಹೋದರೂ ಕೂಡ ಇಡಿ ವಿಶ್ವಕರ್ಮ ಸಮಾಜ ಸಂತ್ರಸ್ತೆಯ ಮತ್ತು ಕುಟುಂಬದ ಬೆನ್ನ ಹಿಂದೆ ನಿಲ್ಲಬೇಕು ಎಂದರು.
ಈಗ ಕಾನೂನು ವ್ಯಾಪ್ತಿಯಲ್ಲಿ ಈ ವಿಷಯ ಸೇರಿದೆ. ಹಾಗಾಗಿ ನಾವು ಕಾನೂನು ಮೂಲಕ ಹೋರಾಟ ಮಾಡಬೇಕು. ಕಾನೂನು ಮೂಲಕವೆ ನಮಗೆ ನ್ಯಾಯ ಸಿಗಬೇಕು. ಕೋರ್ಟು ನಮ್ಮನ್ನು ಕೈ ಬಿಡುವುದಿಲ್ಲ ಎಂದರು.ನೊಂದವರಿಗೆ ಕಾನೂನು ಪ್ರಕಾರ ಏನೆಲ್ಲ ನೆರವು ಬೇಕೋ ಅದಕ್ಕೆ ನಾನು ನಿಮ್ಮ ಜೊತೆ ಇದ್ದೆನೆ. ನೀವು ಎಲ್ಲಿ ಕರೆದರೂ ಬರುತ್ತೇನೆ. ನೀವು ಹಾಕಿಕೊಳ್ಳುವ ಎಲ್ಲಾ ಯೋಜನೆಯಲ್ಲಿ ನಾನು ನಿಮ್ಮ ಜೊತೆ ಇದ್ದೇನೆ ಎಂದರು.ವಿಶ್ವಕರ್ಮ ಸಮುದಾಯ ಸಂಘದ ವಿವಿಧ ಸಂಘಟನೆಗಳ ಪರವಾಗಿ ವಿಶ್ವಕರ್ಮ ಮಹಾಸಭಾದ ರಾಜ್ಯ ಅಧ್ಯಕ್ಷ ಕೆ ಪಿ ನಂಜುಂಡಿ ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು.ವಿಶ್ವಕರ್ಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಮೈಸೂರು ವಿಶ್ವಕರ್ಮ ಜಿಲ್ಲಾ ಸಂಘದ ಅಧ್ಯಕ್ಷ ರಿಷಿ ಆಚಾರ್ಯ, ಪುತ್ತೂರು ಮಾಜಿ ಪುರಸಭೆ ಸದಸ್ಯ ಸುರೇಂದ್ರ ಆಚಾರ್ಯ, ಕರ್ನಾಟಕ ರಾಜ್ಯ ಸಂಘದ ಅಧ್ಯಕ್ಷ ಮದ್ದೂರು ಬಸವರಾಜ್, ಮಂಡ್ಯದ ಸೇವಂತ್ ಆಚಾರ್ಯ, ದಕ್ಷಿಣ ಕನ್ನಡ ವಿಶ್ವಕರ್ಮ ಹಿತರಕ್ಷಣಾ ಸಂಘದ ಸುರೆಂದ್ರ ಆಚಾರ್ಯ, ಯುವ ಸಮಾಜ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಇಂದಿರಾ ಪಿ ಆಚಾರ್ಯ, ಶ್ರಿ ಗುರುದೇವಾ ಪರಿಷತ್ ಅದ್ಯಕ್ಷ ಪುರುಷೋತ್ತಮ ಆಚಾರ್ಯ, ಯುವ ಮಿಲನ ಕಾರ್ಯದರ್ಶಿ ದಿವಾಕರ ಆಚಾರ್ಯ, ಬೀರಮಲೆ ವಿಶ್ವಕರ್ಮ ಸಂಘದ ಅಧ್ಯಕ್ಷ ಗಂಗಾಧರ ಆಚಾರ್ಯ, ಬೀರಮಲೆ ಯುವಕ ಸಂಘದ ಅಧ್ಯಕ್ಷ ಜ್ಞಾನೇಶ್ , ಉಪ್ಪಿನಂಗಡಿ ಸಹಿತ ಹಲವು ಉಪ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಶ್ವಬ್ರಾಹ್ಮಣ ಸೇವಾ ಸಮಾಜದ ಅಧ್ಯಕ್ಷ ಶ್ರೀಧರ್ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು.