ಹಾನಗಲ್ಲ: ಭವಿಷ್ಯದ ಪೀಳಿಗೆಗೆ ಮೌಲ್ಯಾದರ್ಶ ಮಾನವೀಯತೆ ಸಂಗತಿಗಳನ್ನು ಬಿತ್ತಿ ಬೆಳೆಯುವಲ್ಲಿ ಗುರುವಿನ ಪವಿತ್ರ ಪಾತ್ರವಿದ್ದು, ಇದು ಎಲ್ಲ ಕಾಲದ ಶಿಕ್ಷಕರಲ್ಲಿ ಇರಬೇಕಾದ ಪ್ರಮುಖ ಸಂಗತಿ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.ಭಾನುವಾರ ಪಟ್ಟಣದ ಕುಮಾರೇಶ್ವರ ಮಠದ ಸದಾಶಿವ ಮಂಗಲ ಭವನದಲ್ಲಿ ಶ್ರೀ ಕುಮಾರೇಶ್ವರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಮುಖ್ಯ ಶಿಕ್ಷಕ ಸಿ.ಎಸ್. ವಸ್ತ್ರದ ಅವರಿಗೆ ವಯೋನಿವೃತ್ತಿ ಗುರುವಂದನೆ ಹಾಗೂ ಈ ಪ್ರೌಢಶಾಲೆಯಲ್ಲಿ ಇದುವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಎಲ್ಲ ಗುರುಗಳಿಗೆ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಶಿರೋಳದ ಗುರುಸಿದ್ದೇಶ್ವರ ಶಿವಾಚಾರ್ಯರು ಸಮ್ಮುಖವಹಿಸಿ ಮಾತನಾಡಿ, ನಾವು ಬೆಳೆದ ಪರಿಸರ ನಮ್ಮ ಮೇಲೆ ಅಗಾಧವಾದ ಪ್ರಭಾವ ಬೀರುತ್ತದೆ. ಸಾಧು-ಸಂತರು ನಡೆದಾಡಿದ ನೆಲಕ್ಕೆ ಪುಣ್ಯದ ಶಕ್ತಿಯಿರುತ್ತದೆ. ಅಂಥ ಮಹಾತ್ಮ ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳವರ ತಪೋಭೂಮಿಯಲ್ಲಿ ಶಿಕ್ಷಣದ ಕೈಂಕರ್ಯದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದ ಎಲ್ಲರೂ ಪುಣ್ಯಾತ್ಮರು. ಇಲ್ಲಿ ಜ್ಞಾನಾರ್ಜನೆ ಮಾಡಿದವರು ಬದುಕಿನಲ್ಲಿ ಯಶಸ್ಸು ಪಡೆದು ಸತ್ಕಾರ್ಯದ ಮೂಲಕ ಸಮಾಜಕ್ಕೆ ಮಾದರಿಯಾಗಬಲ್ಲರು. ಈ ದಿನ ನೂರಾರು ಸಂಖ್ಯೆಯ ಶಿಷ್ಯರು ಮೂವತ್ತಾರಕ್ಕೂ ಅಧಿಕ ಗುರುಗಳನ್ನು ಗೌರವಿಸಿದ ಸಂತೃಪ್ತದಿನ. ಇದರಲ್ಲಿ ಗುರು-ಶಿಷ್ಯರಿಬ್ಬರ ಸಾರ್ಥಕತೆಯಿದೆ ಎಂದರು.

ಅಧ್ಯಕ್ಷತೆವಹಿಸಿ, ನಿವೃತ್ತಿಗಾಗಿ ಶಿಷ್ಯರ ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕ ಸಿ.ಎಸ್. ವಸ್ತ್ರದ, ನಮ್ಮ ಮನಸ್ಸು ಬುದ್ಧಿ ವಿವೇಕಗಳು ಒಳ್ಳೆಯದರತ್ತ ವಾಲಬೇಕು. ನಮಗಿರುವ ಸಮಯಾವಕಾಶವನ್ನು ವೃತ್ತಿಗೌರವ ಕಾಪಾಡಲು ವಿನಿಯೋಗಿಸಬೇಕು. ಒಬ್ಬ ಶಿಕ್ಷಕನಿಗೆ ತನ್ನ ಶಿಷ್ಯರಿಗೆ ಒಳ್ಳೆಯ ಬದುಕು ಕಟ್ಟಿಕೊಳ್ಳುವ ಸರಿಯಾದ ಮಾರ್ಗದರ್ಶನದಲ್ಲಿಯೇ ಸಾರ್ಥಕತೆಯಿರುತ್ತದೆ. ಹಾನಗಲ್ಲ ವಿರಕ್ತಮಠದ ಪರಿಸರವೆಂದರೆ ಅಧ್ಯಾತ್ಮ, ಶಿಕ್ಷಣ ಸಂಸ್ಕಾರಗಳು ಮುಪ್ಪರಿಗೊಂಡ ಪವಿತ್ರ ನೆಲ. ಇಂಥ ನೆಲದ ಕುಮಾರೇಶ್ವರ ಪ್ರೌಢಶಾಲೆಯಲ್ಲಿ ಬೋಧಿಸಿದ ಶಿಕ್ಷಕರು ಬೋಧನೆ ಪಡೆದ ವಿದ್ಯಾರ್ಥಿಗಳು ನಿಜಕ್ಕು ಪುಣ್ಯವಂತರು. ಗುರುವಿಗೆ ಶಿಷ್ಯ, ಶಿಷ್ಯನಿಗೆ ಗುರು ಸದಾ ಸ್ಮರಣೆಯಲ್ಲಿರುವಂತೆ ಜ್ಞಾನ ದಾನ, ಜ್ಞಾನಾಕಾಂಕ್ಷೆ ಬೇಕು ಎಂದರು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ವ್ಯವಸ್ಥಾಪಕ ಎ.ಬಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಮಾರುತಿ ಶಿಡ್ಲಾಪೂರ, ರವಿ ಬೆಂಚಳ್ಳಿ, ಶಿಶಿರೇಖಾ ಪಟ್ಟಣಶೆಟ್ಟಿ, ಎಸ್.ವೈ.ದೊಡ್ಡಮನಿ, ಎಸ್. ನಾಗರಾಜ್, ಬಿ.ಡಿ.ಮಾಳಗಿ ಮಾತನಾಡಿದರು. ಗುರುವಂದನೆ: ಶ್ರೀ ಕುಮಾರೇಶ್ವರ ಪ್ರೌಢಶಾಲೆಯಲ್ಲಿ ಈವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಎ.ಬಿ. ಪಾಟೀಲ, ಎಂ.ಬಿ. ನಾಯಕ್, ಎನ್.ಜಿ. ಕುಲಕರ್ಣಿ, ಬಿ.ಡಿ. ಮಾಳಗಿ, ಆರ್.ಎನ್. ಸಾವಕ್ಕನವರ, ವಿಜಯ ಚಿಕ್ಕೇರಿ, ಶಿವಾನಂದ ಗಿರಿಯಣ್ಣನವರ, ಅಕ್ಕಮಹಾದೇವಿ ಕುರವತ್ತಿ. ಎಸ್. ನಾಗರಾಜ್, ಎಸ್.ಎಸ್. ದೊಡ್ಡ,ಮನಿ, ಎಚ್.ಎಸ್. ಲಮಾಣಿ, ಎಸ್.ವೈ. ದೊಡ್ಡಮನಿ, ಎಸ್.ಸಿ. ವಿರಕ್ತಮಠ, ಎಚ್.ವಿ. ಶಿವಕುಮಾರಸ್ವಾಮಿ, ಸುನಿತಾ ಉಪ್ಪಿನ, ಐ.ಪಿ. ಕುಂಕೂರ, ರಾಜಶೇಖರ ಹಿರೇಮಠ, ಸಿ.ಆರ್. ವಡ್ಡರ, ರವಿ ಬೆಂಚಳ್ಳಿ, ಪ್ರಕಾಶ ಕೋತಂಬರಿ, ಸದಾನಂದ ಕಂಬಾಳಿಮಠ, ಅರವಿಂದ ಹೆಗಡೆ, ಶಶಿರೇಖಾ ಪಟ್ಟಣಶೆಟ್ಟಿ, ಅರ್ಚನಾ ಕಬ್ಬೂರ, ಎಸ್. ವಿನುತಾ, ಶಿವಲೀಲಾ ಮಂಚಾಲಿ, ಅಕ್ಷತಾ ಉಪ್ಪಿನ, ಮಲ್ಲಿಕಾರ್ಜುನ ತಳ್ಳಳ್ಳಿ, ಸಿದ್ದಲಿಂಗೇಶ್ವರ ಹಲಸೂರ, ಎಸ್.ಬಿ. ಶಿವಕುಮಾರ, ಮಾಲತೇಶ ಏಸಕ್ಕನವರ, ಪ್ರಭು ಹೂಗಾರ ಅವರುಗಳನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವ ವಂದನೆ ಸಲ್ಲಿಸಿದರು. ಡಾ. ಪುರುಶೋತ್ತಮ ನಾಯಕ ಪ್ರಾಸ್ತಾವಿಕ ಮಾತನಾಡಿದರು. ವೀಣಾ ಬ್ಯಾತನಾಳ ಸ್ವಾಗತಿಸಿದರು. ರವಿ ಜಡೆಗೊಂಡರ ಹಾಗೂ ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.