ಮನುಷ್ಯರೇ ಸಾಯ್ಲಿಕತ್ತೀವಿ, ಪ್ರಾಣಿ ಪಕ್ಷಿಗಳು ಬದುಕ್ತಾವೇನ್‌!?

| Published : Apr 18 2025, 12:43 AM IST

ಮನುಷ್ಯರೇ ಸಾಯ್ಲಿಕತ್ತೀವಿ, ಪ್ರಾಣಿ ಪಕ್ಷಿಗಳು ಬದುಕ್ತಾವೇನ್‌!?
Share this Article
  • FB
  • TW
  • Linkdin
  • Email

ಸಾರಾಂಶ

"ಮೊದಲಿನ್ಹಾಂಗ ಹಕ್ಕಿಗಳ ಹಾರೋದು, ನವಿಲುಗಳು ಕುಣಿಯೋದು, ಜಿಂಕೆಗಳು ಜಿಗಿಯೋದು ಭಾಳ್‌ ಅಂದ್ರ ಭಾಳ್‌ ಕಮ್ಮೀಯಾಗೇದ್ರಿ.. ಈ ಹಿಂದೆ ಜಿಂಕಿ ಹಿಂಡುಗಳು ಬಂದ್ ಒಂದ್‌ ದಿವಸ್ದಾಗ ನಾಲ್ಕು ಎಕರೆ ಹೊಲದಾಗ ಬೆಳೆದಿದ್ದ ಬೆಳೀ ತಿಂದ್ ಹೋಗ್ತಿದ್ವು... ಈಗ ನೋಡಿದರೆ, ಒಂದು ಎಕರೆ ಬೆಳೀ ತಿನ್ನೋದನ್ನೂ ನಾವು ಕಾಣಾವಲ್ವಿ..! " ಕೆಮಿಕಲ್‌ ಕಂಪನಿಗಳು ಬಿಡೋ ಹೊಲಸಿಗೆ ಸಂಬಂಧಿಸಿದಂತೆ ಸಂಗ್ವಾರ ಗ್ರಾಮದ ಬಾಲಪ್ಪ ಹಾಗೂ ಮರೆಪ್ಪರ ಮಾತುಗಳಿವು.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

"ಮೊದಲಿನ್ಹಾಂಗ ಹಕ್ಕಿಗಳ ಹಾರೋದು, ನವಿಲುಗಳು ಕುಣಿಯೋದು, ಜಿಂಕೆಗಳು ಜಿಗಿಯೋದು ಭಾಳ್‌ ಅಂದ್ರ ಭಾಳ್‌ ಕಮ್ಮೀಯಾಗೇದ್ರಿ.. ಈ ಹಿಂದೆ ಜಿಂಕಿ ಹಿಂಡುಗಳು ಬಂದ್ ಒಂದ್‌ ದಿವಸ್ದಾಗ ನಾಲ್ಕು ಎಕರೆ ಹೊಲದಾಗ ಬೆಳೆದಿದ್ದ ಬೆಳೀ ತಿಂದ್ ಹೋಗ್ತಿದ್ವು... ಈಗ ನೋಡಿದರೆ, ಒಂದು ಎಕರೆ ಬೆಳೀ ತಿನ್ನೋದನ್ನೂ ನಾವು ಕಾಣಾವಲ್ವಿ..! " ಕೆಮಿಕಲ್‌ ಕಂಪನಿಗಳು ಬಿಡೋ ಹೊಲಸಿಗೆ ಸಂಬಂಧಿಸಿದಂತೆ ಸಂಗ್ವಾರ ಗ್ರಾಮದ ಬಾಲಪ್ಪ ಹಾಗೂ ಮರೆಪ್ಪರ ಮಾತುಗಳಿವು.

ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ವಿಷಗಾಳಿಯ ಆಪತ್ತು ಕೇವಲ ಮನುಷ್ಯರಿಗೆ ಮಾತ್ರವಲ್ಲದೆ, ಪ್ರಾಣಿ-ಪಕ್ಷಿ ಸಂಕುಲಗಳ ಸಂಖ್ಯೆಯ ಕ್ಷೀಣಿಸುತ್ತಿರುವುದಕ್ಕೂ ಕಾರಣವಾಗುತ್ತಿದೆ. ಸೈದಾಪುರ ಸಮೀಪದ ಕೊಂಡಾಪುರ, ಸಂಗ್ವಾರ ಭಾಗದಲ್ಲಿ ಜಿಂಕೆಗಳ ಜಿಗಿದಾಟ, ನವಿಲುಗಳ ಕುಣಿತ, ಪಕ್ಷಿಗಳ ಕಲರವ ಬಹುತೇಕ ಶೂನ್ಯಕ್ಕೆ ಜಾರುತ್ತಿರುವಂತಿದೆ.ಸಂಗ್ವಾರ, ಕಡೇಚೂರು ಕೈಗಾರಿಕಾ ಪ್ರದೇಶದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಈ ಗ್ರಾಮದ ಜಮೀನುಗಳನ್ನು ಕೈಗಾರಿಕೆ ಪ್ರದೇಶಕ್ಕೆ ಸ್ವಾಧೀನವಾಗಿಲ್ಲ ಅನ್ನೋ ಮಾತು ಬಿಟ್ಟರೆ, ವಿಷಗಾಳಿಯ ಆತಂಕ, ಕೆಮಿಕಲ್‌ ತ್ಯಾಜ್ಯದ ದುರ್ನಾತದಿಂದಾಗಿ ಇತ್ತೀಚಿನ ಕೆಲವು ವರ್ಷಗಳಿಂದ ಉಸಿರಾಟದ ತೊಂದರೆ, ಕೆಮ್ಮು-ಕಫ ಮುಂತಾದ ಕಾಯಿಲೆಗಳು ಸದ್ದಿಲ್ಲದೆ ಆವರಿಸಿಕೊಳ್ಳುತ್ತಿರುವುದು ಅನುಭವಕ್ಕೆ ಬರುತ್ತಿದೆ. ಜೊತೆಗೆ, ವನ್ಯಜೀವಿಗಳು, ಪ್ರಾಣಿ-ಪಕ್ಷಿಗಳ ಕಣ್ಮರೆಯೂ ಇಲ್ಲಿನವರಿಗೆ ಅಚ್ಚರಿ ಮೂಡಿಸುತ್ತಿದೆ. " ಈ ನವಿಲು, ಜಿಂಕೆಗಳ ಹಿಂಡು ನಮ್ಮೂರ ಕಡೆ ಭಾರಿ ಬರ್ತಿದ್ವು.. ಯಾಕೋ ಏನೋ ಬರ್‌ ಬರುತ್ತ ಈಗೆಲ್ಲಾ ಅವು ಕಮ್ಮೀಯಾಗ್ಲಿಕತ್ತಾವ. ಈ ವಾಸನೆ, ಈ ಹವಾದಾಗ ಅವು ಬದುಕ್ಯಾವೋ ಅಥವಾ ಬ್ಯಾರೇ ಕಡೆ ಹೋಗ್ಯಾವೋ ಗೊತ್ತಿಲ್ಲ. ಆದ್ರ, ಅಂಥಾ ಪ್ರಾಣಿಗಳ ಸಂಖ್ಯೆ ಈ ಮೂರ್ನಾಲ್ಕು ವರ್ಷದಾಗಂತೂ ಭಾಳ್‌ ಕಮ್ಮಿ ಆಗೇದ.. " ಕೆಮಿಕಲ್‌ ಕಂಪನಿಗಳು ಬಿಡೋ ಹೊಲಸೆಲ್ಲಾ ಹಳ್ಳದ ಮೂಲಕ ಕೆರೆ-ನದಿ ಸೇರಿ, ಮತ್‌ ಅಲ್ಲಿ ಬಂದು ನೀರ್‌ ಕುಡಿದು ಪ್ರಾಣಿಗಳೂ ಸಾಯ್ಲಿಕತ್ತಾವ.. " ಎಂದು ಸಂಗ್ವಾರ ಗ್ರಾಮದ ಬಾಲಪ್ಪ ಹಾಗೂ ಮರೆಪ್ಪ ಆತಂಕ ವ್ಯಕ್ತಪಡಿಸಿದರು.ಕೆಮಿಕಲ್‌ ಕಂಪನಿಗಳು ನೇರವಾಗಿ ಹಳ್ಳಕ್ಕೆ ಬಿಡಲಾಗುತ್ತಿರುವ ತ್ಯಾಜ್ಯ ಹಳ್ಳ, ನದಿ ಮೂಲಕ ಅಲ್ಲಿನ ಜೀವ-ಜಲಕ್ಕೂ ಕುತ್ತು ತರುತ್ತಿದೆ. ಮನುಕುಲಕ್ಕೆ ಮಾರಕವಾಗುವಂತಹ ಚಟುವಟಿಕೆಗಳು ಅಲ್ಲಿ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪಗಳಿಗೆ ಪುಷ್ಟಿ ನೀಡುವಂತೆ ಅನೇಕ ಬಾರಿ ಹಳ್ಳ-ಕೊಳ್ಳದ ನೀರು ಕುಡಿದು ಪ್ರಾಣಿಗಳು ನದಿಗೆ ಕೆಮಿಕಲ್‌ ತ್ಯಾಜ್ಯ ಸೇರಿ ಲಕ್ಷಾಂತರ ಮೀನುಗಳು ಮೃತಪಟ್ಟಿರುವ ಸಂದರ್ಭಗಳ ಬಗ್ಗೆ ವಿವರಿಸಿದ ಅಲ್ಲಿನ ಶರಣಪ್ಪ, ಮನುಷ್ಯರೇ ಬದುಕವಲ್ರು, ಇನ್‌ ಪ್ರಾಣಿ, ಪಕ್ಷಿಗಳು ಜೀವಂತ ಇರ್ತಾವೇನು.? ಎಂದು "ಕನ್ನಡಪ್ರಭ "ದೆದುರು ಹೇಳುವಾಗ ಅಲ್ಲಿ ನೀರವ ಮೌನ ಆವರಿಸಿತ್ತು. "ಹೌದು, ಈ ಭಾಗದಲ್ಲಿ ಸಾಕಷ್ಟು ಜಿಂಕೆ-ನವಿಲುಗಳು, ಕಾಡುಹಂದಿ ಹಿಂಡುಗಳು ಓಡಾಡ್ತಿದ್ದವು. ಈಗಲೂ ಕಾಣಿಸಿಕೊಳ್ಳುತ್ತವೆ. ಆದರೆ, ಮೊದಲಿಗಿಂತ ತೀರಾ ಕಡಿಮೆ.. ಬಹುಶ: ಇಲ್ಲಿನ ಕಲುಷಿತ ವಾತಾವರಣ- ಹಳ್ಳಕೊಳ್ಳಗಳಿಂದ ಅವುಗಳ ಸಂಖ್ಯೆ ಕ್ಷೀಣಿಸುತ್ತಿರಬಹುದು.. " ಎಂದು ಆತಂಕ ವ್ಯಕ್ತಪಡಿಸಿದ ಅರಣ್ಯ ಇಲಾಖೆಯ ಕಾವಲು ಸಿಬ್ಬಂದಿಯೊಬ್ಬರು, ನಮಗೇ ಬದುಕಲು ಆಗ್ತಿಲ್ಲ, ಪಾಪ, ಪ್ರಾಣಿಗಳೇನು ಮಾಡ್ತಾವು ಎಂದು ಮಾತಿಗೆ ಅಂತ್ಯ ಹಾಡಿದರು.ಕೃಷಿ ಭೂಮಿಗಳನ್ನು ಆಪೋಷನ ತೆಗೆದುಕೊಂಡು, ಕೈಗಾರಿಕೆಗಳ ಸ್ಥಾಪನೆ ಮೂಲಕ ಅಭಿವೃದ್ಧಿ ಚಿಂತನೆಯಲ್ಲಿ ಸಾಗಿರುವ ಸರ್ಕಾರಗಳು, ಮನುಷ್ಯ, ಪಕ್ಷಿ, ಪ್ರಾಣಿ ಸಂಕುಲಕ್ಕೆ ಮಾರಕವಾಗುತ್ತಿರುವ ಇಂತಹ ಬೆಳವಣಿಗೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಹೋದರೆ, ಮುಂದೊಂದು ದಿನ ಕೈಗಾರಿಕೆಗಳ ಹೊಗೆಗಳ ಜೊತೆಗೆ ಮನುಷ್ಯ-ಪ್ರಾಣಿಗಳ ಸುಡುತ್ತಿರುವ ಹೊಗೆಯೂ ಕಾರ್ಮೋಡಗಳ ರೂಪದಲ್ಲಿ ಕಾಡಬಹುದು.