ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಜ.9ರಂದು ನಡೆಯುವ ಹುಣಸಗಿ ತಾಲೂಕು ಪ್ರಥಮ‌ ಸಮ್ಮೇಳನಕ್ಕೆ ಕೊನೆ ಕ್ಷಣದ ಸಿದ್ಧತೆಗಳು ಭರದಿಂದ ಸಾಗಿವೆ.

ಬಸವರಾಜ ಎಂ. ಕಟ್ಟಿಮನಿ

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಜ.9ರಂದು ನಡೆಯುವ ಹುಣಸಗಿ ತಾಲೂಕು ಪ್ರಥಮ‌ ಸಮ್ಮೇಳನಕ್ಕೆ ಕೊನೆ ಕ್ಷಣದ ಸಿದ್ಧತೆಗಳು ಭರದಿಂದ ಸಾಗಿವೆ.

ಸಮ್ಮೇಳನಕ್ಕೆ ಮೆರುಗು ಬರಲು ಪಟ್ಟಣದ ಮುಖ್ಯರಸ್ತೆಗಳಲ್ಲಿ ಕನ್ನಡದ ಧ್ವಜ, ಬ್ಯಾನರ್ ಕಟ್ಟಿ ಪಟ್ಟಣವನ್ನು ಸುಂದರಗೊಳಿಸಲಾಗಿದ್ದು, ಕಳೆದೊಂದು ತಿಂಗಳಿಂದ ಸಮ್ಮೇಳನದ ಕುರಿತು ಎಲ್ಲೆಡೆ ಪ್ರಚಾರ ಮಾಡಲಾಗಿದ್ದು, ಪ್ರತಿಯೊಂದು ಹಳ್ಳಿಗಳಿಂದ ಉತ್ತಮ ಸ್ಪಂದನೆ ದೊರೆತಿದೆ. ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಕನ್ನಡ ಅಭಿಮಾನಿಗಳು ಸೇರುವ ನಿರೀಕ್ಷೆ ಹೊಂದಲಾಗಿದೆ.

ಶುಕ್ರವಾರ ಬೆಳಿಗ್ಗೆ ಸಮ್ಮೇಳನದ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ಹಾಗೂ ಪರಿಷತ್‌ ಧ್ವಜಾರೋಹಣದ ಬಳಿಕ, ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ವಿರೇಶ ಹಳ್ಳೂರ ಅವರನ್ನು ಅಲಂಕೃತ ವಾಹನದಲ್ಲಿ

ಮೆರವಣಿಗೆ ನಡೆಯಲಿದೆ. ಮಾಜಿ ಸಚಿವ ನರಸಿಂಹನಾಯಕ ರಾಜೂಗೌಡ ಅವರು ಚಾಲನೆ ನೀಡಲಿದ್ದಾರೆ.

ನಂತರ ಪಟ್ಟಣದ ವಾಲ್ಮೀಕಿ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಡಾ. ಬಾಬು ಜಗಜೀವನರಾಮ್ ವೃತ್ತದ ಮೂಲಕ ಬಸವೇಶ್ವರ ವೃತ್ತದ ಮಾರ್ಗವಾಗಿ ನೀಲಕಂಠೇಶ್ವರ ಮಹಾಮಂಟಪ, ದೇವರ ದಾಸಿಮಯ್ಯ ಮಹಾದ್ವಾರದ ಮೂಲಕ ಕೊಡೇಕಲ್‌ ಬಸವೇಶ್ವರ ಪ್ರಧಾನ ವೇದಿಕೆಗೆ ಮಹಿಳಾ ಡೊಳ್ಳು ಕುಣಿತ, ಕುದುರೆ ಕುಣಿತ, ಮೂರು ಹಲಗೆ ವಾದನ ಕಲಾತಂಡಗಳು, ಲೇಜಿಮು ಕುಣಿತ ಸೇರಿದಂತೆ ಇತರ ಕಲಾತಂಡಗಳು ಅಲ್ಲದೇ ಮಹಿಳೆಯ ಪೂರ್ಣಕುಂಭ ಹಾಗೂ ಶಾಲಾ ಮಕ್ಕಳ ಆಕರ್ಷಕ ಮೆರವಣಿಗೆಯೊಂದಿಗೆ ವೇದಿಕೆ ತಲುಪುತ್ತದೆ.

ವೇದಿಕೆ ಕಾರ್ಯಕ್ರಮದಲ್ಲಿ ಸುರಪುರದ ಬಲವಂತ ಬಹದ್ದೂರ್ ಬಹರಿ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಉಪಸ್ಥಿತರಿರುವ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಬಿಡುಗಡೆ ಮಾಡಲಿದ್ದಾರೆ. ಭುವನೇಶ್ವರಿಯ ಭಾವಚಿತ್ರಕ್ಕೆ ಸಂಸದ ಜಿ.ಕುಮಾರ ನಾಯಕ ಪುಷ್ಪಾರ್ಚನೆ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಹಂಪಿ ಕನ್ನಡ ವಿವಿಯ ಅಮರೇಶ ಯಾತಗಲ್‌ ಉದ್ಘಾಟಿಸಲಿದ್ದು, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಆಶಯ ನುಡಿಗಳನ್ನಾಡಲಿದ್ದಾರೆ.

ಸಮ್ಮೇಳನದ ಮುಖ್ಯ ಅತಿಥಿಗಳಾಗಿ ವಿಪ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಬಿ.ಇ.ಪಾಟೀಲ, ಚಂದ್ರಶೇಖರ ಪಾಟೀಲ, ಶಶೀಲ ನಮೋಶಿ, ಪಪಂ ಅಧ್ಯಕ್ಷ ತಿಪ್ಪಣ್ಣ ನಾಯಕ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಬೆಂಗಳೂರು ಡಿ.ಎಸ್‌.ಮ್ಯಾಕ್ಸ್‌ ನಿರ್ದೇಶಕ ಎಸ್‌.ಪಿ.ದಯಾನಂದ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ವಿಠ್ಠಲ ಯಾದವ, ಖ್ಯಾತ ಸಂಶೋಧಕ, ಪದ್ಮಶ್ರಿ ಕೆ.ಪದ್ದಯ್ಯ ಪಾಲ್ಗೊಳ್ಳಲಿದ್ದಾರೆ.

ಗೋಷ್ಠಿಗಳು: ಮಧ್ಯಾಹ್ನ ನಡೆಯುವ ಒಂದನೇ ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ವೀರೇಶ ಹಳ್ಳೂರ ಅವರ ಬದುಕು ಬರಹಗಳ ಕುರಿತು ನಾಗಪ್ಪ ಅಡಿಕ್ಯಾಳ ಮಾತನಾಡಲಿದ್ದಾರೆ. ಇನ್ನೂ ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಭೀಮಾಶಂಕರ ಜೋಶಿ ಅವರು ಹುಣಸಗಿ ತಾಲೂಕಿನ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಮಾತನಾಡಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಿದ್ಧರಾಮ ಹೊನಕಲ್ಲ ವಹಿಸಿದ್ದಾರೆ.

ಮಧ್ಯಾಹ್ನ 2ಕ್ಕೆ ನಡೆಯುವ ಎರಡನೇ ಗೋಷ್ಠಿಯಲ್ಲಿ ಖ್ಯಾತ ಕೃಷಿ ವಿಜ್ಞಾನಿ ಗುಂಡಪ್ಪ ಬರದೇವನಾಳ ಕೃಷಿ ಹಾಗೂ ನೀರಾವರಿ ಕುರಿತು ಹಾಗೂ ಅಮರಮ್ಮ ನಾವದಗಿ ಕನ್ನಡ ಸಾಹಿತ್ಯದಲ್ಲಿ ಮಹಿಳೆಯ ಸ್ಥಾನಮಾನ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಜ್ಯೋತಿಲತಾ ತಡಿಬಿಡಿ ಮಠ ವಹಿಸಲಿದ್ದಾರೆ. ಬಳಿಕ ನಾಡಿನ ಕವಿಗಳಿಂದ ಕವಿಗೋಷ್ಠಿ ನಡೆಯಲಿದೆ.

ಬಹಿರಂಗ ಅಧಿವೇಶನದ ಬಳಿಕ ಕಾರ್ಯಕ್ರಮದ ಸಮಾರೋಪ ನಡೆಯಲಿದೆ. ರಾಜಾ ಜಿತೇಂದ್ರನಾಯಕ ಜಹಗೀರದಾರ ಹಾಗೂ ರಾಜಾ ವೆಂಕಟಪ್ಪನಾಯಕ ಜಹಾಗೀರದಾರ ಅವರ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ರಾಜಾ ವೇಣುಗೋಪಾಲನಾಯಕ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ನರಸಿಂಹನಾಯಕ ರಾಜೂಗೌಡ ಪಾಲ್ಗೊಳ್ಳಲಿದ್ದಾರೆ. ಸುಭಾಶ್ಚಂದ್ರ ಕೌಲಗಿ ಸಮಾರೋಪ ಭಾಷಣ ಮಾಡಲಿದ್ದಾರೆ.

ಸಾಧಕರಿಗೆ ಸನ್ಮಾನ: ಸಾಧಕರಾದ ಸಂಗಪ್ಪ ಮಂಟೆ (ಸ್ವಾತಂತ್ರ್ಯ ಹೋರಾಟಗಾರರು), ಡಿ.ಜಿ.ಬಳೂರಗಿ (ಸಾಹಿತ್ಯ)‌, ಬಸವರಾಜ ಪಂಜಗಲ್ಲ (ರಂಗಭೂಮಿ), ನೀಲಕಂಠ ಬಿರಾದಾರ (ವಿಜ್ಞಾನ), ಗುಂಡಪ್ಪ ಬರದೇವನಾಳ (ಕೃಷಿ ವಿಜ್ಞಾನ), ಪರಶುರಾಮ ಭಾವಿನಮನಿ (ವೈದ್ಯಕೀಯ), ಮಲ್ಲಮ್ಮ ಬಾವಿ (ಜಾನಪದ), ನಂದಕುಮಾರ ಮಾಲಿಪಾಟೀಲ (ಸಾಮಾಜಿಕ) ಸಾಧಕರನ್ನು ಗೌರವಿಸಲಾಗುತ್ತದೆ.

10ಕ್ಕೂ ಹೆಚ್ಚು ಮಳಿಗೆಗಳ ನಿರ್ಮಾಣ: ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದ್ದು ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬರಲ್ಲೂ ಪುಸ್ತಕ ಓದುವ ಅಭಿರುಚಿ ಬೆಳೆಸಲು ಮುಂದಾಗಬೇಕೆಂಬ ಉದ್ದೇಶದಿಂದ 10 ಮಳಿಗೆಗಳನ್ನು ನಿರ್ಮಿಸಲಾಗಿದೆ.

----

ಹುಣಸಗಿ ಪಟ್ಟಣದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಬಂದವರಿಗೆ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಮಾದಲಿ, ಬದನೆಕಾಯಿ ಪಲ್ಯ, ಹಾಲು, ತುಪ್ಪ ಅನ್ನ ಸಾಂಬಾರ್‌ ಸೇರಿದಂತೆ ವಿವಿಧ ರೀತಿಯ ಸ್ವಾದಿಷ್ಟ ಭೋಜನದ ವ್ಯವಸ್ಥೆ ಮಾಡಲಾಗಿದೆ.

-ವೆಂಕಟಗಿರಿ ದೇಶಪಾಂಡೆ, ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು ‌

---

ಪ್ರಥಮ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಅವಿರತ ಶ್ರಮಿಸುತ್ತಿರುವ ಕಸಾಪ ಸರ್ವ ಸದಸ್ಯರು, ಪಟ್ಟಣದ ಹಿರಿಯರು ಹಾಗೂ ಕನ್ನಡ ಅಭಿಮಾನಿಗಳ ಸಾರಥ್ಯದಲ್ಲಿ ಸಕಲ ಸಿದ್ದತೆಗಳು ನಡೆದಿದ್ದು, ಸಮಾರಂಭಕ್ಕೆ ಬನ್ನಿ ಕನ್ನಡದ ತೇರು ಎಳೆಯೋಣ ಎಂದು ಎಲ್ಲರನ್ನು ಸ್ವಾಗತಿಸುತ್ತಿದ್ದೇವೆ.

ಗುರು ಹುಲಕಲ್, ಕಸಾಪ ಪ್ರಧಾನ ಕಾರ್ಯದರ್ಶಿ, ಹುಣಸಗಿ