ಸಾರಾಂಶ
ಬಸವರಾಜ ಎಂ. ಕಟ್ಟಿಮನಿ
ಕನ್ನಡಪ್ರಭ ವಾರ್ತೆ ಹುಣಸಗಿಪಟ್ಟಣ ಪಂಚಾಯಿತಿ ಚುನಾವಣೆ ಮುಗಿದು 8ತಿಂಗಳು ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲು ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಎಸ್‌ಸಿಗೆ ಮೀಸಲಾಗಿದ್ದರಿಂದ ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರು ಪೈಪೋಟಿ ನಡೆಸಿದ್ದಾರೆ.
ಪಟ್ಟಣ ಪಂಚಾಯಿತಿ 16ಜನ ಸದಸ್ಯರ ಪೈಕಿ 14ಜನ ಕಾಂಗ್ರೆಸ್ ಸದಸ್ಯರು, ಇಬ್ಬರು ಬಿಜೆಪಿ ಸದಸ್ಯರಿದ್ದಾರೆ. ಕಳೆದ ಡಿ.27ರಂದು ಚುನಾವಣೆ ನಡೆದಿತ್ತು. ಸದ್ಯ ಅಧ್ಯಕ್ಷ ಖುರ್ಚಿಗಾಗಿ ಪರಿಶಿಷ್ಟ ಜಾತಿಯ 1ನೇ ವಾರ್ಡಿನ ಸದಸ್ಯೆ ಭೀಮವ್ವ ತಿಪ್ಪಣ್ಣ ಕಡಿಮನಿ(ಮಾದಿಗ) ಹಾಗೂ 12 ವಾರ್ಡ್‌ನ ಮರಲಿಂಗಪ್ಪ ನಾಟೇಕಾರ(ಚಲುವಾದಿ) ಮತ್ತು 16ನೇ ವಾರ್ಡ್‌ನ ತಿಪ್ಪಣ್ಣ ರಾಠೋಡ (ಲಂಬಾಣಿ) ಇವರು ಪಕ್ಷದಲ್ಲಿನ ನಿಷ್ಠೆ ಹಾಗೂ ಸಕ್ರಿಯರಾಗಿ ಮಾಡಿದ ಕೆಲಸದ ಆಧಾರದ ಮೇಲೆ ಪ್ರಬಲ ಆಕಾಂಕ್ಷಿಗಳಾಗಿ ಪಕ್ಷದ ವರಿಷ್ಠರಲ್ಲಿ ಲಾಬಿ ನಡೆಸಿದ್ದಾರೆ.ನೂತನ ಪಟ್ಟಣ ಪಂಚಾಯಿತಿ ಆಗಿರುವುದರಿಂದ ಮೊದಲ ಅಧ್ಯಕ್ಷ ಗಾದಿಗೇರಲು ತೀವ್ರ ಪೈಪೋಟಿ ಏರ್ಪಟ್ಟಿದೆ. ಪಕ್ಷದ ವರಿಷ್ಠರು, ಸ್ಥಳೀಯ ಮುಖಂಡರು ಕೃಪಾಕಟಾಕ್ಷ ಯಾರಿಗೆ ಒಲಿಯಲಿದೆ ಎಂಬುದು ಇನ್ನೂ ನಿಚ್ಚಳವಾಗಬೇಕಿದೆ. ಮೂವರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಇಲ್ಲಿಯ ಜನ ಎದುರು ನೋಡುತ್ತಿದ್ದಾರೆ. ಅಲ್ಲದೆ ತಂಡೋಪ ತಂಡವಾಗಿ ಹೋಗಿ ಪ್ರಭಾವಿ ಮುಖಂಡರಲ್ಲಿ ಮನವಿ ಮಾಡುವ ಕಾರ್ಯವೂ ನಡೆಯುತ್ತಿದ್ದಾರೆ.
ಈ ಮೂರು ಸಮುದಾಯ ತಮ್ಮ ತಮ್ಮ ಸಮುದಾಯದ ಮುಖಂಡರೊಡನೆ ಶಾಸಕ ರಾಜಾ ವೇಣುಗೋಪಾಲ ನಾಯಕ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಎಂ. ರೇವಡಿ ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರಿಗೆ ತಮ್ಮ ತಮ್ಮ ಸಮುದಾಯದ ಸದಸ್ಯರಿಗೆ ಅಧ್ಯಕ್ಷ ಸ್ಥಾನ ನೀಡಲು ಲಾಬಿ ನಡೆಸಿದ್ದಾರೆ.ಮಹಿಳಾ ಸದಸ್ಯೆಗೆ ಅಧ್ಯಕ್ಷ ಸ್ಥಾನ ನೀಡಬೇಕು. ಅದಕ್ಕಾಗಿ ಕಾಂಗ್ರೆಸ್ ಪಕ್ಷ ನನಗೆ ಮನ್ನಣೆ ನೀಡಲಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯೆ ಭೀಮವ್ವ ಕಡಿಮನಿ ಭರವಸೆ ಹೊಂದಿದ್ದು ಒಂದೆಡೆಯಾದರೆ, ಹಲವಾರು ವರ್ಷಗಳಿಂದ ದಲಿತ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹಲವು ಜನಪರ ಕೆಲಸ ಹಾಗೂ ಹೋರಾಟಗಳು ಮಾಡಿದ್ದೇನೆ ಹಾಗೂ ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ನನಗೆ ಅಧ್ಯಕ್ಷ ಸ್ಥಾನ ಸಿಗುವ ಭರವಸೆ ಇದೆ ಎಂದು ಮರಲಿಂಗಪ್ಪ ನಾಟೇಕಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.