ಕೂಡ್ಲಿಗಿ ಶಾಸಕ ಡಾ. ಎನ್.ಟಿ.ಶ್ರೀನಿವಾಸ್ ಇಡೀ ಕೂಡ್ಲಿಗಿ ಕ್ಷೇತ್ರವನ್ನು ಮುಖ್ಯಮಂತ್ರಿ, ಸಚಿವರು ತಿರುಗಿ ನೋಡುವಂತೆ ಮಾಡಿದ್ದಾರೆ.

ಕೂಡ್ಲಿಗಿ: ತಂದೆಯ ನೆನಪು, ಒಡನಾಡಿಗಳ ಪ್ರೀತಿ, ಅಭಿಮಾನಿಗಳ ಒಡನಾಟ ಹಾಗೂ ಗ್ರಾಮೀಣ ಕಲೆ-ಸಂಸ್ಕೃತಿಯ ಸೊಗಡಿನೊಂದಿಗೆ ಹುಣಸೆನಾಡು ಉತ್ಸವ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

ದಿ. ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಸ್ಮರಣಾರ್ಥ ಪಟ್ಟಣದ ಶಾಸಕರ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಉತ್ಸವವು ತಂದೆಯ ನೆನಪಿನೊಂದಿಗೆ ಜನಸೇವೆಯ ಸಂಕಲ್ಪ ಬೆಸೆಯುವ ಅರ್ಥಪೂರ್ಣ ವೇದಿಕೆಯಾಗಿ ಗಮನ ಸೆಳೆಯಿತು.

ನರಸಿಂಹಗಿರಿ ವಿದ್ಯಾಸಂಸ್ಥೆ, ವಾಲ್ಮೀಕಿ ವಿದ್ಯಾಸಂಸ್ಥೆ ಹಾಗೂ ಆಳ್ವಾಸ್ ನುಡಿಸಿರಿ ವಿರಾಸತ್ ವಿಜಯನಗರ ಘಟಕದ ಸಹಯೋಗದಲ್ಲಿ ನಡೆದ ಹುಣಸೆ ನಾಡು ಉತ್ಸವ, ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮೂಡಬಿದ್ರೆಯ ಆಳ್ವಾಸ್ ಸಂಸ್ಥೆಯ ಮೋಹನ್ ಆಳ್ವ ಮಾತನಾಡಿ, ಸಾಮರಸ್ಯದ ನೆಲದಲ್ಲಿ ಸಂಘರ್ಷ ಸಲ್ಲದು, ವಿವಿಧ ಜಾತಿ, ಧರ್ಮಗಳ ನೆಲೆಯಾದ ಭಾರತದಲ್ಲಿ ಸಹಬಾಳ್ವೆಯ ಮೂಲಕವೇ ಸುಂದರ ಜೀವನ ನಡೆಸಬೇಕಿದೆ ಎಂದರು.

ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಮುಂದಿನ ಬಾರಿಯೂ ಶಾಸಕರಾಗಬೇಕು, ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಮುಂದಿನ ದಿನಗಳಲ್ಲಿ ಸಚಿವರಾಗಿ ನೋಡಲು ಬಯಸುವೆ ಎಂದರು.

ಹಿರೇಮಠ ಸಂಸ್ಥಾನದ ಪ್ರಶಾಂತ ಸಾಗರ ಮಹಾಸ್ವಾಮಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಕೂಡ್ಲಿಗಿ ಶಾಸಕ ಡಾ. ಎನ್.ಟಿ.ಶ್ರೀನಿವಾಸ್ ಇಡೀ ಕೂಡ್ಲಿಗಿ ಕ್ಷೇತ್ರವನ್ನು ಮುಖ್ಯಮಂತ್ರಿ, ಸಚಿವರು ತಿರುಗಿ ನೋಡುವಂತೆ ಮಾಡಿದ್ದಾರೆ. ಇವರ ಅಭಿವೃದ್ಧಿ ಕಾರ್ಯಗಳು ಇವರಿಗೆ ಶ್ರೀರಕ್ಷೆಯಾಗಲಿವೆ, ಒನಕೆ ಓಬವ್ವ ಉತ್ಸವ ಮಾಡಿ ಸಕ್ಸಸ್ ಕಂಡ ಶಾಸಕರು ಈ ವರ್ಷ ತಮ್ಮ ಸ್ವಂತ ಹಣದಲ್ಲಿ ಅವರ ತಂದೆಯ ಸ್ಮರಣೋತ್ಸವ ಹಾಗೂ ಹುಣಸೆ ನಾಡು ಉತ್ಸವವನ್ನು 3 ದಿನ 3 ಕಡೆ ಆಯೋಜಿಸುವ ಮೂಲಕ ಕೂಡ್ಲಿಗಿ ಕ್ಷೇತ್ರದಲ್ಲಿ ಜನಾನುರಾಗಿ ಶಾಸಕರಾಗಿದ್ದಾರೆ. ದುಡಿಯುವ ಕೈಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಗುರುತಿಸಿ ಗೌರವಿಸುವ ಮೂಲಕ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆಯ ಆದರ್ಶ, ಸಂಸ್ಕಾರ ಹಾಗೂ ಮಾರ್ಗದರ್ಶನ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ತಂದೆಗೆ ತಕ್ಕ ಮಗನಾಗಿ ಉತ್ತಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶಾಸಕ ಡಾ. ಎನ್.ಟಿ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ತನ್ನ ತಂದೆಯ ಒಡನಾಡಿಗಳು ಹಾಗೂ ಅಭಿಮಾನಿಗಳ ಅಪಾರ ಉಪಸ್ಥಿತಿ ಕಂಡು ಭಾವುಕರಾದರು. ತಂದೆಯವರನ್ನು ಪ್ರೀತಿಸಿ, ಅಭಿಮಾನಿಸಿದ ಇಷ್ಟೊಂದು ಜನರನ್ನು ಒಂದೇ ವೇದಿಕೆಯಲ್ಲಿ ಕಂಡಾಗ ಹಳೆಯ ನೆನಪು ಮರುಕಳಿಸುತ್ತಿವೆ. ಏನು ಮಾತನಾಡಬೇಕು ಎಂಬುದೇ ತೋಚುತ್ತಿಲ್ಲ, ಮಾತುಗಳು ಬರುತ್ತಿಲ್ಲ ಎಂದು ತಂದೆಯೊಂದಿಗಿನ ಭಾವನಾತ್ಮಕ ನೆನಪು ಹಂಚಿಕೊಂಡರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಾ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿರುವ ಆಳ್ವಾಸ್ ನುಡಿಸಿರಿ ಅಧ್ಯಕ್ಷ ಡಾ. ಮೋಹನ್ ಆಳ್ವ ಉತ್ಸವಕ್ಕೆ ನೀಡಿದ ಸಹಕಾರ ಸ್ಮರಿಸಿ ವಿಶೇಷ ಧನ್ಯವಾದ ಸಲ್ಲಿಸಿದರು.

ಉತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು. ನೂರಾರು ಸನ್ಮಾನಿತರು ವೇದಿಕೆಗೆ ಒಂದೇ ಬಾರಿಗೆ ಹೋದಾಗ ಕೆಲಕಾಲ ಜನಜಾತ್ರೆಯೇ ನೆರೆಯಿತು. ಆಯೋಜಕರು ಜನತೆಯನ್ನು ನಿಯಂತ್ರಣ ಮಾಡಲು ಪರದಾಡಿದರು. ನಂತರ ನೀವಿದ್ದಲ್ಲೇ ಸನ್ಮಾನಿಸಲಾಗುವುದು ಎಂದು ಘೋಷಿಸಿದರು, ಪುನಃ ನಿಮ್ಮ ಊರಲ್ಲಿಯೇ ಸನ್ಮಾನಿಸಲಾಗುವುದು ಎಂದು ತಿಳಿಸಿದಾಗ ಸನ್ಮಾನ ಪಡೆಯಲು ಬಂದವರು ವೇದಿಕೆ ಬಿಟ್ಟು ಕೆಳಗಿಳಿದು ಬಂದು ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟರು.

ಜಾನಪದ ಕಲಾವಿದ ಬಾಳು ಬೆಳಗುಂದಿ ಅವರು ತಮ್ಮ ಜನಪದ ಹಾಡುಗಳ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿ ಗ್ರಾಮೀಣ ಕಲೆಯ ಸೊಗಡನ್ನು ಹರಡಿದರು. ದಿವ್ಯ ಆಲೂರು, ಕೆ.ಎಂ.ವೀರೇಶ್ ಕಾರ್ಯಕ್ರಮ ನಿರೂಪಿಸಿದರು.

ಉತ್ಸವದಲ್ಲಿ ಆಳ್ವಾಸ್ ನುಡಿಸಿರಿ ಅಧ್ಯಕ್ಷ ಡಾ.ಮೋಹನ್ ಆಳ್ವ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮಾಜಿ ಸಚಿವ ಎನ್.ಎಂ. ನಬಿ, ಶಾಸಕರ ತಾಯಿ ಎನ್.ಟಿ. ಓಬಮ್ಮ, ಸಹೋದರ ಎನ್.ಟಿ. ತಮ್ಮಣ್ಣ, ಜಿಪಂ ಮಾಜಿ ಸದಸ್ಯ ಎಸ್.ವೆಂಕಟೇಶ್, ಎನ್.ಪಿ. ಮಂಜುನಾಥ್, ಸಣ್ಣತಮ್ಮಣ್ಣ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಇ.ಓ.ನರಸಪ್ಪ, ತಹಸೀಲ್ದಾರ್ ನೇತ್ರಾವತಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ವೆಂಕಟೇಶ್, ಬಣವಿಕಲ್ಲು ಯರ್ರಿಸ್ವಾಮಿ, ಟಿ.ಜಿ. ಮಲ್ಲಿಕಾರ್ಜುನಗೌಡ, ಉದಯ ಎಸ್ ಜನ್ನು, ಗುಡೇಕೋಟೆ ರಾಘವೇಂದ್ರ ರಾವ್, ಪಿ.ಎಚ್.ದೊಡ್ಡ ರಾಮಣ್ಣ, ನಿವೃತ್ತ ಎಎಸ್ಪಿ ಎಂ.ಬಿ. ಅಯ್ಯನಹಳ್ಳಿ ಜಿ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ಕಾವಲ್ಲಿ ಶಿವಪ್ಪನಾಯಕ, ಎನ್.ಎಂ. ನೂರ್ ಅಹಮದ್, ಎಪಿಎಂಸಿ ಅಧ್ಯಕ್ಷ ಬೋಸಯ್ಯ, ಟಿ. ಉಮೇಶ್, ಮಾದಿಹಳ್ಳಿ ನಜೀರ್, ದೊಡ್ಡಪ್ಪ, ತಿಮ್ಮಪ್ಪ, ಅಜ್ಜನಗೌಡ, ಬಷೀರ್ ಅಹಮದ್, ಜಯರಾಂ ನಾಯಕ ಸೇರಿದಂತೆ ಹಲವು ಗಣ್ಯರು ಹಾಗೂ ಮುಖಂಡರು ಭಾಗವಹಿಸಿದ್ದರು.