ಹಳೆಹುಬ್ಬಳ್ಳಿಯಲ್ಲಿ ಶೀಘ್ರ ನೂರು ಹಾಸಿಗೆ ಆಸ್ಪತ್ರೆ ಲೋಕಾರ್ಪಣೆ: ಶಾಸಕ ಅಬ್ಬಯ್ಯ

| Published : Nov 09 2025, 02:45 AM IST

ಹಳೆಹುಬ್ಬಳ್ಳಿಯಲ್ಲಿ ಶೀಘ್ರ ನೂರು ಹಾಸಿಗೆ ಆಸ್ಪತ್ರೆ ಲೋಕಾರ್ಪಣೆ: ಶಾಸಕ ಅಬ್ಬಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹಳೆ ಹುಬ್ಬಳ್ಳಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ, ಶೀಘ್ರದಲ್ಲೇ ತಾಲೂಕು ಆಸ್ಪತ್ರೆಯನ್ನಾಗಿ ಸರ್ಕಾರದಿಂದ ಘೋಷಣೆ ಮಾಡಲಾಗುತ್ತದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಹುಬ್ಬಳ್ಳಿ: ಆರೋಗ್ಯ ಕ್ಷೇತ್ರದ ಮಹತ್ತರ ಯೊಜನೆಗಳಲ್ಲಿ ಒಂದಾದ, ಹಳೆ ಹುಬ್ಬಳ್ಳಿ ನೂರು ಹಾಸಿಗೆ ಆಸ್ಪತ್ರೆಯನ್ನು ₹14 ಕೋಟಿಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಂತಿಮ ಹಂತದ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲೆ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಅವರು ಹಳೇಹುಬ್ಬಳ್ಳಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ₹2 ಕೋಟಿ ಅನುದಾನದಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕಳೆದ 12 ವರ್ಷದಲ್ಲಿ ಪೂರ್ವ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಲೇ ಇವೆ. ಹಳೆ ಹುಬ್ಬಳ್ಳಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ, ಶೀಘ್ರದಲ್ಲೇ ತಾಲೂಕು ಆಸ್ಪತ್ರೆಯನ್ನಾಗಿ ಸರ್ಕಾರದಿಂದ ಘೋಷಣೆ ಮಾಡಲಾಗುತ್ತದೆ. ಈ ಹಿನ್ನೆಲೆ ಈ ಭಾಗದ ಜನರಿಗೆ ಉನ್ನತ ವೈದ್ಯಕೀಯ ಚಿಕಿತ್ಸೆ ದೊರೆಯಲಿದೆ ಎಂದರು.

ಸೋನಿಯಾಗಾಂಧಿ ನಗರ, ಎಸ್.ಎಂ. ಕೃಷ್ಣ ನಗರ, ದೊಡ್ಡಕೇರಿ ಓಣಿ ಸೇರಿದಂತೆ 5ಕ್ಕೂ ಹೆಚ್ಚು ಪ್ರದೇಶದಲ್ಲಿ ನಮ್ಮ ಕ್ಲಿನಿಕ್ ಆರೋಗ್ಯ ಕೇಂದ್ರ ಸ್ಥಾಪಿಸಲಾದೆ. ಇವು ಆರೋಗ್ಯ ಸಂಜೀವಿನಿಯಾಗಿ ಪ್ರತಿದಿನ ಉಚಿತವಾಗಿ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿವೆ. ಅದೇ ರೀತಿ ಹೆಚ್ಚಿನ ಆರೋಗ್ಯ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.