ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಹೊನ್ನೂರು ವಡ್ಡರಹಟ್ಟಿ ತಾಂಡಕ್ಕೆ ಪ್ರತ್ಯೇಕ ಮತಗಟ್ಟೆ ಮಂಜೂರು ಮಾಡಬೇಕು. ಇಲ್ಲವಾದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡುವುದಾಗಿ ಸ್ಥಳೀಯ ಮತದಾರರು ಘೋಷಿಸಿದ್ದಾರೆ.ತಾಂಡ ನಿವಾಸಿಗಳ ಘೋಷಣೆ ಮಾಹಿತಿ ಅರಿತು ಶುಕ್ರವಾರ ಉಪ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅಭಿಷೇಕ್ ಹಾಗೂ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ತಹಸೀಲ್ದಾರ್, ಅಧಿಕಾರಿಗಳು ತಾಂಡಕ್ಕೆ ಭೇಟಿ ನೀಡಿ, ಸ್ಥಳೀಯಯೊಂದಿಗೆ ಸಭೆ ನಡೆಸಿ, ಚರ್ಚಿಸಿದರು.
ಗ್ರಾಪಂ ಸದಸ್ಯ ರವಿಕುಮಾರ್ ಮಾತನಾಡಿ, ಬೂತ್ ಸ್ಥಾಪಿಸಿರುವ ಹೊನ್ನಾಳಿ ವಡ್ಡರಹಟ್ಟಿಯು ತಾಂಡದಿಂದ 1.5 ಕಿ.ಮೀ. ದೂರದಲ್ಲಿ ಇದೆ. ಇದರಿಂದಾಗಿ ಮಹಿಳೆಯರು, ಅಂಗವಿಕಲರು, ಗರ್ಭಿಣಿಯರು ಮೈಲಿಗಟ್ಟಲೆ ದೂರ ಹೋಗಿ ಮತಹಾಕಲು ತೀವ್ರ ತೊಂದರೆಯಾಗಿದೆ ಎಂದರು.ಹಿರೇಗೊಣಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಗ್ರಾಮ ಬರುತ್ತಿದೆ, ತಾಂಡದಲ್ಲಿಯೇ ಸುಮಾರು 308 ಮತಗಳಿವೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಈ ತಾಂಡದ ಜನ ಪ್ರತ್ಯೇಕ ಬೂತ್ ಬೇಡಿಕೆಯಿಟ್ಟು ಮತದಾನ ಬಹಿಷ್ಕರಿಸುವುದಾಗಿ ಹೇಳಿದ್ದರು. ಅಂದು ಕೂಡ ಅಧಿಕಾರಿಗಳು ತಾಂಡಕ್ಕೆ ಭೇಟಿ ನೀಡಿ, ಮುಂದಿನ ಚುನಾವಣೆಗೆ ಪ್ರತ್ಯೇಕ ಬೂತ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಪ ಚುನಾವಣಾಧಿಕಾರಿ ಹಾಗೂ ಎಸಿ ಅಭಿಷೇಕ್ ಮಾತನಾಡಿ, ತಾಂಡ ನಿವಾಸಿಗಳ ಪ್ರತ್ಯೇಕ ಬೂತ್ ಬೇಡಿಕೆ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಇಂದೇ ಪ್ರಸ್ತಾವನೆ ಸಲ್ಲಿಸಿ, ಅನಂತರ ಅಲ್ಲಿಂದ ಭಾರತ ಚುನಾವಣಾ ಆಯೋಗಕ್ಕೆ ಕೂಡ ಪ್ರಸ್ತಾವನೆ ಸಲ್ಲಿಸುವ ಮೂಲಕ ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ. ಈಗ ಕಾಲ ಮಿಂಚಿಹೋಗಿದ್ದು, ಕೊನೆ ಪಕ್ಷ ಮುಂದಿನ ಚುನಾವಣೆಗಳ ಸಮಯಕ್ಕಾದರೂ ತಾಂಡಕ್ಕೆ ಪ್ರತ್ಯೇಕ ಬೂತ್ ವ್ಯವಸ್ಥೆ ಬಗ್ಗೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ. ಮತದಾನ ಪವಿತ್ರವಾದ ಹಕ್ಕು. ಇದರಿಂದ ತಾಂಡ ನಿವಾಸಿಗಳು ವಂಚಿತರಾಗಬೇಡಿ ಎಂದು ಮನವೊಲಿಸುವ ಪ್ರಯತ್ನ ಮಾಡಿದರು.ಅಧಿಕಾರಿಗಳು ಎಷ್ಟೇ ವಿನಂತಿಸಿದರೂ ತಾಂಡದ ಜನರು ನಿರ್ಧಾರ ಬದಲಿಸಲಿಲ್ಲ. ಮತದಾನ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಹೊನ್ನಾಳಿ ತಹಸೀಲ್ದಾರ್ ಪುರಂದರ ಹೆಗಡೆ, ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ, ಉಪತಹಸೀಲ್ದಾರ್ ಚಂದ್ರು, ಬೆಸ್ಕಾಂ ಅಧಿಕಾರಿ ಜಯಪ್ಪ, ವಿ.ಎ. ಬಸವರಾಜ್, ಪಿಡಿಒ ಅರುಣಕುಮಾರ್ ಹೊನ್ನೂರು ವಡ್ಡರಹಟ್ಟಿ ತಾಂಡದ ಯುವ ಮುಖಂಡರಾದ ಪ್ರಶಾಂತ, ರಮೇಶ್, ಹನುಮ ನಾಯ್ಕ, ಹಾಲೇಶ್ ನಾಯ್ಕ ಸೇರಿದಂತೆ ತಾಂಡ ನಿವಾಸಿಗಳು ಇದ್ದರು.- - - -12ಎಚ್.ಎಲ್.ಐ.:
ಹೊನ್ನಾಳಿ ತಾಲೂಕಿನ ಹೊನ್ನೂರು ವಡ್ಡರಹಟ್ಟಿ ತಾಂಡ ನಿವಾಸಿಗಳು ಮತದಾನ ಬಹಿಷ್ಕರಿಸಂತೆ ಉಪಚುನಾವಣಾಧಿಕಾರಿ, ಎಸಿ ಅಭಿಷೇಕ್ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ತಾಂಡಕ್ಕೆ ಭೇಟಿ ನೀಡಿ, ಜನರ ಮನವೊಲಿಸಲು ಪ್ರಯತ್ನಿಸಿದರು.