ಸಾರಾಂಶ
ಕುರುಗೋಡು: ತಾಲುಕಿನಲ್ಲಿ ಸೋಮವಾರ ತಡರಾತ್ರಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯಿತು.
ಮಧ್ಯರಾತ್ರಿಯಿಂದ ಪ್ರಾರಂಭಗೊಂಡ ಬಿರುಸಿನ ಮಳೆ ಬೆಳಗಿನಜಾವದವರೆಗೂ ಸುರಿಯಿತು. ಈ ವರ್ಷದಲ್ಲಿಯೇ ಸುರಿದ ಅತಿದೊಡ್ಡ ಮಳೆ ಇದಾಗಿದೆ.ತಾಲೂಕಿನ ಗೆಣಿಕೆಹಾಳು, ಸಿದ್ದಮ್ಮನಹಳ್ಳಿ, ಚಾನಾಳು ಗ್ರಾಮಗಳ ಬಳಿ ಹರಿಯುವ ಹಳ್ಳಗಳು ತುಂಬಿ ರಸ್ತೆಯ ಮೇಲೆ ಹರಿಯುತ್ತಿವೆ. ಪರಿಣಾಮ ಸೋಮವಾರ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನದವರೆಗೆ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ನೀರಿನ ಹರಿವಿನ ಪ್ರಮಾಣ ಕಡಿಮೆಯಾದ ನಂತರ ಸಂಚಾರ ಪುನರಾರಂಭಗೊಂಡಿತು. ಹಳ್ಳದ ಸುತ್ತಮುತ್ತಲಿನ ರೈತರು ನೂರಾರು ಎಕರೆಯಲ್ಲಿ ಬೆಳೆದಿರುವ ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ.
ಸಿರಿಗೇರಿ ಗ್ರಾಮದಲ್ಲಿ ಎರಡು ಮತ್ತು ತಾಲೂಕಿನ ಎಚ್.ವೀರಾಪುರದಲ್ಲಿ ಎರಡು ಮನೆ ಮತ್ತು ಒಂದು ಗುಡಿಸಲು, ಗುತ್ತಿಗನೂರು ಮತ್ತು ಪಟ್ಟಣಸೆರಗು ಗ್ರಾಮಗಳಲ್ಲಿ ತಲಾ ಒಂದು ಕಚ್ಚಾ ಮನೆಯ ಚಾವಣಿ ಬಿದ್ದುವೆ. ಪಟ್ಟಣದ ೨೨ ಮತ್ತು ೨೩ನೇ ವಾರ್ಡ್ನ ಕೆಲವು ಮನೆಗಳಿಗೆ ಮಳೆಯ ನೀರು ನುಗ್ಗಿ ದಿನಬಳಕೆ ವಸ್ತುಗಳು ನೀರುಪಾಲಾಗಿವೆ.ಪಟ್ಟಣದ ಬೆಟ್ಟದ ಸಾಲುಗಳಿಂದ ಭಾರಿ ಪ್ರಮಾಣದ ಮಳೆಯ ನೀರು ರಭಸದಿಂದ ನುಗ್ಗಿದ ಪರಿಣಾಮ ಬೆಟ್ಟಕ್ಕೆ ಹೊಂದಿಕೊಂಡು ನೂತನವಾಗಿ ನಿರ್ಮಿಸಿರುವ ಬಡಾವಣೆಯಲ್ಲಿ ಮಳೆಯ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡದ ಪರಿಣಾಮ ಈ ಅನಾಹುತಕ್ಕೆ ಕಾರಣ ಎಂದು ಸುತ್ತಮುತ್ತಲಿನ ನಿವಾಸಿಗಳು ಆರೋಪಿಸಿದರು.ಭಾಗದ ಚಾಲಣಿ ಕುಸಿದುಬಿದ್ದಿದೆ.
ಸಾರಿಗೆ ಸಂಸ್ಥೆಯ ಬಸ್ ಘಟಕದಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿ ಡೀಸೆಲ್ ಟ್ಯಾಂಕರ್ ನೀರಿನಲ್ಲಿ ನಿಂತಿದೆ.ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿರುವ ಜನವಸತಿ ಪ್ರದೇಶ ಮತ್ತು ಸಸಿ ನರ್ಸರಿಗಳಿಗೆ ನೀರು ನುಗ್ಗಿ ನಷ್ಟಸಂಭವಿಸಿದೆ.
ತಹಶೀಲ್ದಾರ್ ನರಸಪ್ಪ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಮಳೆ ಹಾನಿ ಸ್ಥಳಗಳಿಗೆ ಭೇಟಿನೀಡಿ ಪರಿಶೀಲಿಸಿದರು.೧೨.೨ ಸೇ.ಮೀ. ಮಳೆಯಾದ ಬಗ್ಗೆ ಇಲ್ಲಿನ ಮಳೆಮಾಪನ ಕೇಂದ್ರದಲ್ಲಿ ದಾಖಲಾಗಿದೆ.