ಶ್ರೀಮಸಣಮ್ಮ ದೇವಿಗೆ ನೂರಾರು ಪ್ರಾಣಿಗಳು ಬಲಿ..!

| Published : Oct 03 2024, 01:18 AM IST

ಸಾರಾಂಶ

ಮಂಗಳವಾರ ರಾತ್ರಿ ವಿಜೃಂಭಣೆಯಿಂದ ತೆಂಗಿನ ಹೊಂಬಾಳೆ ಉತ್ಸವ ಜರುಗಿತು. ಗ್ರಾಮದ ಕೆರೆಯ ಬಳಿ ದೇವಿಯ ಪೂಜೆ ನೆರವೇರಿಸಿ, ಪೂಜಾರಿ ತಲೆಯ ಮೇಲೆ ತೆಂಗಿನ ಹೊಂಬಾಳೆಯ ಕರಗವನ್ನು ಹೊತ್ತು ತರಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗದ ಮೆರವಣಿಗೆ ನಡೆಸಿ, ಮಧ್ಯರಾತ್ರಿ ೧೨ಕ್ಕೆ ಪೂರ್ಣಗೊಳಿಸಲಾಯಿತು. ಆನಂತರ ಹಳೇ ಗುಡಿಯಲ್ಲಿ ಪೂಜೆ ನೆರವೇರಿಸಿ ಮತ್ತೊಂದು ಕರಗ ಉತ್ಸವ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಸಾತನೂರು ಗ್ರಾಮದ ಗ್ರಾಮದೇವತೆ ಶ್ರೀಮಸಣಮ್ಮ ದೇವಿ. ಈ ದೇವಿಗೆ ಮೇಕೆ ಮಾಂಸ ಬಲು ಪ್ರಿಯ. ಆದ ಕಾರಣ ಗ್ರಾಮಸ್ಥರೂ ಮಾಂಸವನ್ನೇ ದೇವಿಗೆ ನೈವೇದ್ಯವಾಗಿ ಇಡುತ್ತಾ, ಅದನ್ನೇ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವುದನ್ನು ಸಂಪ್ರದಾಯಬದ್ಧವಾಗಿ ರೂಢಿಸಿಕೊಂಡು ಬಂದಿದ್ದಾರೆ.

ಅದೇ ಮಾದರಿಯಲ್ಲಿ ಈ ವರ್ಷವೂ ಸಾತನೂರು ಗ್ರಾಮದ ಜನರು ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸಾತನೂರಿನಲ್ಲಿ ಮಂಗಳವಾರ ರಾತ್ರಿ ಶ್ರೀಮಸಣಮ್ಮ ದೇವಿ ಕರಗ ಮಹೋತ್ಸವ ಹಾಗೂ ಶನಿವಾರ ಪಿತೃಪಕ್ಷ ಹಬ್ಬವು ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಹಳೇಗುಡಿ ಹಾಗೂ ಹೊಸಗುಡಿ ದೇವಸ್ಥಾನಗಳಲ್ಲಿ ಶ್ರೀ ಮಸಣಮ್ಮನ ಹಬ್ಬವನ್ನು ಆಚರಿಸಲಾಯಿತು. ಮಂಗಳವಾರ ರಾತ್ರಿ ನಡೆದ ದೇವಿಯ ಕರಗ ಉತ್ಸವದ ವೇಳೆ ನೂರಾರು ಪ್ರಾಣಿಗಳನ್ನು ಬಲಿಕೊಟ್ಟು ಸಡಗರ-ಸಂಭ್ರಮದಿಂದ ಹಬ್ಬ ಆಚರಿಸಿದರು. ಬುಧವಾರ ಬೆಳಗ್ಗೆ ಶ್ರೀಮಸಣಮ್ಮ ದೇವಾಲಯದ ಆವರಣದಲ್ಲೇ ಅಡುಗೆ ಮಾಡಿ ಸಹಸ್ರಾರು ಭಕ್ತರಿಗೆ ಪ್ರಸಾದ ರೂಪದಲ್ಲಿ ಬೇಯಿಸಿದ ಮಾಂಸ ಮತ್ತು ಅನ್ನವನ್ನು ವಿತರಿಸಲಾಯಿತು.

ಮೊದಲಿಗೆ ಹೊಸ ಗುಡಿಯಿಂದ ದೇವಿಯ ಉತ್ಸವ ಆರಂಭವಾಗಿ ರಾತ್ರಿ ೯ ಗಂಟೆಯಿಂದ ಮಧ್ಯರಾತ್ರಿ ೧೨ ಗಂಟೆಯವರೆಗೆ ಹೊಸ ಗುಡಿಯ ಭಾಗದಲ್ಲಿ ಉತ್ಸವ ನಡೆಯಿತು. ಆನಂತರ ಮುಂಜಾನೆಯವರೆಗೂ ಹಳೇಗುಡಿಯ ಬೀದಿಗಳಲ್ಲಿ ದೇವಿಯ ಮೆರವಣಿಗೆ ನಡೆಯಿತು. ಮಂಗಳವಾರ ರಾತ್ರಿ ೯ಕ್ಕೆ ಗ್ರಾಮದ ಹೊರವಲಯದ ಕೆರೆ ಬಳಿ ಜಮಾಯಿಸಿದ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಮಸಣಮ್ಮ ದೇವಿಯ ಕರಗ ಉತ್ಸವಕ್ಕೆ ಚಾಲನೆ ನೀಡಲಾಯಿತು.

ತೆಂಗಿನ ಹೊಂಬಾಳೆ ಕರಗ:

ಮಂಗಳವಾರ ರಾತ್ರಿ ವಿಜೃಂಭಣೆಯಿಂದ ತೆಂಗಿನ ಹೊಂಬಾಳೆ ಉತ್ಸವ ಜರುಗಿತು. ಗ್ರಾಮದ ಕೆರೆಯ ಬಳಿ ದೇವಿಯ ಪೂಜೆ ನೆರವೇರಿಸಿ, ಪೂಜಾರಿ ತಲೆಯ ಮೇಲೆ ತೆಂಗಿನ ಹೊಂಬಾಳೆಯ ಕರಗವನ್ನು ಹೊತ್ತು ತರಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗದ ಮೆರವಣಿಗೆ ನಡೆಸಿ, ಮಧ್ಯರಾತ್ರಿ ೧೨ಕ್ಕೆ ಪೂರ್ಣಗೊಳಿಸಲಾಯಿತು. ಆನಂತರ ಹಳೇ ಗುಡಿಯಲ್ಲಿ ಪೂಜೆ ನೆರವೇರಿಸಿ ಮತ್ತೊಂದು ಕರಗ ಉತ್ಸವ ನಡೆಸಲಾಯಿತು.

ಹೊಸ ಗುಡಿ ಮತ್ತು ಹಳೇ ಗುಡಿಯಲ್ಲಿ ಕರಗ ಉತ್ಸವ ಸಾಗುವ ವೇಳೆ ಬೀದಿ ಬೀದಿಯಲ್ಲೂ ಪ್ರತಿ ಮನೆಯವರು ನೂರಾರು ಮೇಕೆಗಳನ್ನು ದೇವರಿಗೆ ಬಲಿಕೊಟ್ಟು ಧನ್ಯತಾಭಾವ ಮೆರೆದರು. ಉತ್ಸವ ವೇಳೆ ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಬುಧವಾರ ಬೆಳಗ್ಗೆ ೮ರಿಂದ ಮಧ್ಯಾಹ್ನದವರೆಗೆ ಕೆರೆ ಬಳಿ ಬಾಯಿಬೀಗ ಮತ್ತು ದೇವರ ಉತ್ಸವ ನಡೆಯಿತು. ಎರಡೂ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಾಂಸವೇ ನೈವೇದ್ಯ, ಅದೇ ಪ್ರಸಾದ:

ಕರಗ ತರುವ ವೇಳೆ ದೇವಿಗೆ ಬಲಿ ನೀಡುವ ಕುರಿ-ಮೇಕೆಗಳ ಮಾಂಸದಿಂದ ಆಹಾರ ತಯಾರಿಸಿ ಭಕ್ತರಿಗೆ ಪ್ರಸಾದ ಹಂಚುವುದು ಇಲ್ಲಿನ ಮತ್ತೊಂದು ವಿಶೇಷ ಸಂಪ್ರದಾಯ. ದೇವರಿಗೆ ಹರಕೆ ಹೊತ್ತ ಭಕ್ತರು ಪ್ರತಿ ವರ್ಷ ಕುರಿ-ಮೇಕೆಗಳನ್ನು ಒಪ್ಪಿಸಿದರು. ಮಹಾಲಯ ಅಮಾವಾಸ್ಯೆ ಹಬ್ಬದ ವೇಳೆ ಅವುಗಳನ್ನು ಬಲಿ ನೀಡಿ, ಆ ಮಾಂಸವನ್ನು ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ಶ್ರೀಮಸಣಮ್ಮ ದೇವಿಯ ಹಳೆಯ ಮತ್ತು ಹೊಸ ದೇವಸ್ಥಾನದ ಬೀದಿಗಳನ್ನು ಹೂವಿನ ಹಾರದ ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಹೂವಿನ ತೋರಣಗಳ ಮಧ್ಯಭಾಗದಲ್ಲಿ ದ್ರಾಕ್ಷಿ, ಸೇಬು, ಮೂಸಂಬಿ, ಕ್ಯಾರೆಟ್, ಬದನೆಕಾಯಿ, ದಾಳಿಂಬೆ ಹಣ್ಣುಗಳನ್ನು ಕಟ್ಟಿ ಅಲಂಕಾರ ಮಾಡಲಾಗಿತ್ತು. ಎಲ್ಲರ ಮನೆಗಳಲ್ಲೂ ಸಡಗರ-ಸಂಭ್ರಮ ಮನೆ ಮಾಡಿತ್ತು. ಪ್ರತಿ ಮನೆಯ ಬಾಡೂಟದ ಘಮಲು ಹರಡಿತ್ತು. ಬಂಧುಗಳು, ಸ್ನೇಹಿತರು, ಹಿತೈಷಿಗಳನ್ನು ಊಟಕ್ಕೆ ಆಹ್ವಾನಿಸಿ ಹಬ್ಬ ಆಚರಿಸಿದರು.