ಕೇಂದ್ರ ಸರ್ಕಾರದಿಂದ ನೂರಾರು ಜನಪರ ಕಾರ್ಯ: ಶಿವಾನಂದ ಮ್ಯಾಗೇರಿ

| Published : Feb 10 2024, 01:49 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಮಗದೊಮ್ಮೆ ಪ್ರಧಾನಿಯಾಗಬೇಕು ಎಂದು ಜನ ಬಯಸುತ್ತಿದ್ದಾರೆ ಎಂದು ಬಿಜೆಪಿ ಶಿಗ್ಗಾಂವಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದ್ದಾರೆ. ಗೋಟಗೊಡಿಯಲ್ಲಿ ಬಿಜೆಪಿ ಗ್ರಾಮ ಚಲೋ ಅಭಿಯಾನದಲ್ಲಿ ಅವರು ಮಾತನಾಡಿದ್ದಾರೆ.

ಶಿಗ್ಗಾಂವಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೂರಾರು ಜನಪರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ ಎಂದು ಶಿಗ್ಗಾಂವಿ ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.

ತಾಲೂಕಿನ ಗೋಟಗೊಡಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಗ್ರಾಮ ಚಲೋ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮತ್ತೊಮ್ಮೆ ಮೋದಿ ಇನ್ನೊಮ್ಮೆ ಮೋದಿ, ಮುಗದೊಮ್ಮೆ ಮೋದಿ ಎಂಬ ಘೋಷವಾಕ್ಯದೊಂದಿಗೆ ಜನರ ಕೂಗು ದೇಶಾದ್ಯಂತ ಹೆಚ್ಚುತ್ತಿದೆ ಎಂದು ಅವರು ಹೇಳಿದರು.ಭ್ರಷ್ಟಾಚಾರ ರಹಿತ ಆಡಳಿತ ಮೋದಿ ಆಡಳಿತದ ವಿಶೇಷತೆ. ಅಂತ್ಯೋದಯ ಪರಿಕಲ್ಪನೆ, ಡಿಬಿಟಿ ಮುಖಾಂತರ ಸರ್ಕಾರದ ಸಹಾಯವನ್ನು ನೇರವಾಗಿ ಫಲಾನುಭವಿ ಮತ್ತು ಜನರಿಗೆ ಸಂದಾಯ ಮಾಡಿರುವುದು, ಆಯುಷ್ಮಾನ್ ಭಾರತ ಯೋಜನೆ ಮುಖಾಂತರ ಬಡವರ ಆರೋಗ್ಯ ರಕ್ಷಣೆ, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಸಹಾಯ, ಮಹಿಳೆಯರ ಗೌರವ ಮತ್ತು ಸಬಲೀಕರಣಕ್ಕಾಗಿ ನಾರಿಶಕ್ತಿ ಯೋಜನೆ, ಶುದ್ಧ ಕುಡಿಯುವ ನೀರಿಗಾಗಿ ಜಲಜೀವನ್ ಯೋಜನೆ, ಬಡವರಿಗೆ ಕಡಿಮೆ ದರದಲ್ಲಿ ಔಷಧ ತಲುಪಿಸಲು ಜನೌಷಧ ಕೇಂದ್ರ, ಬಡವರ ಆಶ್ರಯಕ್ಕಾಗಿ ಪ್ರಧಾನಮಂತ್ರಿಯ ಆವಾಸ್ ಯೋಜನೆ, ಮುಸ್ಲಿಂ ಹೆಣ್ಣು ಮಕ್ಕಳ ರಕ್ಷಣೆಗಾಗಿ ತ್ರಿವಳಿ ತಲಾಕ್ ನಿಷೇಧ ಹೀಗೆ ಹಲವು ಯೋಜನೆ ಅನುಷ್ಠಾನ ಮಾಡಲಾಗಿದೆ ಎಂದರು. ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆಗಾಗಿ ಉಜ್ವಲ ಗ್ಯಾಸ್ ಯೋಜನೆ, ಉದ್ಯಮಗಳಿಗೆ ಮುದ್ರಾ ಸಾಲ ಯೋಜನೆ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಪ್ರಧಾನಮಂತ್ರಿ ಬೆಳೆ ವಿಮೆ, ಅಟಲ್ ಪಿಂಚಣಿ ಯೋಜನೆ ಇಂತಹ ನೂರಾರು ಜನಪರ, ಸಮಾಜದ ಪರ, ಅಭಿವೃದ್ಧಿಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಅದಲ್ಲದೆ ದೇಶದ ಭದ್ರತೆ, ಕಾನೂನು ಸುವ್ಯವಸ್ಥೆಗೆ ಕಟ್ಟುನಿಟ್ಟಿನ ಕ್ರಮ, ಕಾಶ್ಮೀರ ಆರ್ಟಿಕಲ್ ೩೭೦ ರದ್ದತಿ, ಕಾಶಿ ಹಾಗೂ ಕೇದಾರ ಕ್ಷೇತ್ರಗಳ ಜೀರ್ಣೋದ್ಧಾರ, ಡಾ. ಬಿ.ಆರ್. ಅಂಬೇಡ್ಕರ್ ಸ್ಮರಣಾರ್ಥ ಪಂಚತೀರ್ಥಗಳ ಅಭಿವೃದ್ಧಿ, ರಾಷ್ಟ್ರೀಯ ಶಿಕ್ಷಣ ನೀತಿ, ವಂದೇ ಭಾರತ್ ಮಿಷನ್‌, ಆಪರೇಷನ್ ಗಂಗಾ, ಒಂದೇ ಭಾರತ ಎಕ್ಸ್‌ಪ್ರೆಸ್ ರೈಲು, ಶ್ರೀರಾಮ ಮಂದಿರ ಸ್ಥಾಪನೆ ಸೇರಿದಂತೆ ಹಲವು ಮೈಲಿಗಲ್ಲು ಸಾಧಿಸಲಾಗಿದೆ. ದೇಶದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ, ಉದ್ಯೋಗಿಕ, ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲಾಗಿದೆ. ಹೀಗಾಗಿ ಜನರು ಮೋದಿ ಮಗದೊಮ್ಮೆ ಪ್ರಧಾನಿಯಾಗಲಿ ಎಂದು ಬಯಸುತ್ತಿದ್ದಾರೆ ಎಂದರು.