ಸಾರಾಂಶ
ಮಯೂರ್ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರುಅದು 1999ನೇ ಇಸವಿ. ಬೆಂಗಳೂರಿನ ಚಿಕ್ಕಪೇಟೆ ವ್ಯಾಪಾರಸ್ಥರು ತಮ್ಮ ಕಾರ್ಮಿಕರ ಓಡಾಟಕ್ಕಾಗಿ ರಾಜಸ್ಥಾನಕ್ಕೆ ರೈಲು ಸಂಪರ್ಕ ಬೇಕೆಂದು ರೈಲ್ವೆ ನಿಲ್ದಾಣದೆದುರು ಪ್ರತಿಭಟಿಸಿದ್ದರು. ಆಗ ಸಂಭವಿಸಿದ ದಾಂಧಲೆಯಲ್ಲಿ ಲಾಠಿಚಾರ್ಜ್ ಕೂಡ ಆಗಿತ್ತು, ಬಂದೋಬಸ್ತ್ ಪೊಲೀಸರ ಮೇಲೆ ಕಲ್ಲೆಸೆತವೂ ನಡೆದಿತ್ತು. ಆಗ ಪೊಲೀಸರ ಬೆಂಬಲಕ್ಕೆ ನಿಂತು ಕರ್ನಾಟಕ ರಕ್ಷಣಾ ವೇದಿಕೆ ಹೋರಾಡಿತ್ತು.
ಹೀಗೆ 26 ವರ್ಷದ ಹಿಂದಿನ ಉತ್ತರ ಭಾರತೀಯರ ಈ ಹೋರಾಟದ ಘಟನೆ ನೆನಪಿಸಿಕೊಂಡಿದ್ದು ಕನ್ನಡಪರ ಹೋರಾಟಗಾರ ಗೋಮೂರ್ತಿ ಯಾದವ್. ಇದಾಗಿ 26 ವರ್ಷ ಕಳೆದಿದ್ದು, ಪರಿಸ್ಥಿತಿ ಬದಲಾಗಿದೆ. ಈಗ ರಾಜಸ್ಥಾನ ಮಾತ್ರವಲ್ಲ, ಬಿಹಾರ, ಉತ್ತರಪ್ರದೇಶ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದ ಕಾರ್ಮಿಕರೂ ನಗರಕ್ಕೆ ಸಲೀಸಾಗಿ ಬಂದು ಹೋಗಲು ರೈಲ್ವೆ ಸಂಪರ್ಕವಿದೆ. ಉತ್ತರದ ರೈಲುಗಳು ಕಾರ್ಮಿಕರಿಂದ ಕಿಕ್ಕಿರಿದು ತುಂಬಿ ಬರುತ್ತಿವೆ.ಆ ಮೂಲಕ ಉತ್ತರ ಭಾರತದ ವ್ಯಾಪಾರಿಗಳು, ಕಾರ್ಮಿಕರಿಗೆ ಕರ್ನಾಟಕದ ಮೂಲೆ ಮೂಲೆಯಲ್ಲಿ ವ್ಯಾಪಾರ ನಡೆಸಲು, ಕೂಲಿ ಮಾಡಲು ಅನುವುಮಾಡಿಕೊಟ್ಟಿದೆ. ಈ ಸಂಪರ್ಕವೀಗ ಕನ್ನಡಿಗರ ಉದ್ಯೋಗ ಕಸಿಯುವ ಪರೋಕ್ಷ ರಹದಾರಿಯಾಗಿದೆ.
ಬೈಯಪ್ಪನಹಳ್ಳಿ ಎಸ್‌ಎಂವಿಟಿ ನಿಲ್ದಾಣದಿಂದಲೇ ವಾರಕ್ಕೊಮ್ಮೆ ಸಂಚರಿಸುವ 13 ರೈಲುಗಳು, 3 ವಿಶೇಷ ರೈಲುಗಳು, 3 ಪ್ರತಿದಿನ ಸಂಚರಿಸುವ ರೈಲುಗಳಿವೆ. ರಾಜ್ಯಕ್ಕೆ ಅತೀ ಹೆಚ್ಚಾಗಿ ಬರುವ ಪಶ್ಚಿಮ ಬಂಗಾಳದ ಕಾರ್ಮಿಕರಿಗಾಗಿ ಮಾಲ್ಡಾ-ಎಸ್‌ಎಂವಿಟಿ ನಡುವೆ ಆರಾಮದಾಯಕ ಅಮೃತ್ ಭಾರತ್ ರೈಲು ಓಡಾಡುತ್ತಿದೆ. ವಾರಕ್ಕೊಮ್ಮೆ ಓಡಾಡುವ ಈ ರೈಲು ಶೇ.100ಕ್ಕಿಂತ ಜಾಸ್ತಿ ಭರ್ತಿಯಾಗುತ್ತದೆ. ರಾಜಸ್ಥಾನದ ಜೈಪುರಕ್ಕೆ 2, ಜೋಧಪುರಕ್ಕೆ 6 ನೇರ ರೈಲುಗಳಿವೆ. ಅಜ್ಮೀರಕ್ಕೂ ವಾರಕ್ಕೆ 5 ರೈಲುಗಳ ಸಂಪರ್ಕ ಸಾಧ್ಯವಾಗಿದೆ.ಸಂಗಮಿತ್ರ ಎಕ್ಸ್‌ಪ್ರೆಸ್ ಬಿಹಾರಿ ಕಾರ್ಮಿಕರು ಕರ್ನಾಟಕಕ್ಕೆ ಬರಲು ಬಳಸುವ ನೆಚ್ಚಿನ ರೈಲು. ಇದರ ಜತೆಗೆ ಮುಝಫರ್‌ಪುರ್ ಎಕ್ಸ್‌ಪ್ರೆಸ್, ಜಾರ್ಖಂಡ್‌ಗೆ ಹೋಗುವ ಹಟಿಯಾ-ಎಸ್‌ಎಂವಿಟಿ ಎಕ್ಸ್‌ಪ್ರೆಸ್ ರೈಲುಗಳ ಮುಂಗಡ ಬುಕ್ಕಿಂಗ್ ವಾರಕ್ಕೆ ಮೊದಲೇ ಪೂರ್ಣಗೊಂಡಿರುತ್ತದೆ.
ಇನ್ನು, ಪ್ರತಿದಿನ ಬಂಗಾಳದ ಹೌರಾದಿಂದ ಬೆಂಗಳೂರಿಗೆ ಹೊರಡುವ ಎಕ್ಸ್‌ಪ್ರೆಸ್ ರೈಲು ಕೂಡ ಅಲ್ಲಿನ ಕಾರ್ಮಿಕರನ್ನು ಯಥೇಚ್ಛವಾಗಿ ಹೊತ್ತು ತರುತ್ತಿದೆ. ಹೌರಾದಿಂದ ವಾರಕ್ಕೆ ಐದು ಬಾರಿ ಬರುವ ಎಸಿ ದುರಂತೋ ಎಕ್ಸ್‌ಪ್ರೆಸ್ ರೈಲು, ಅದೇ ರೀತಿ ಮೈಸೂರು ಬಿಹಾರ ನಡುವಿನ ದಾನ್‌ಪುರ ಎಕ್ಸ್‌ಪ್ರೆಸ್, ಹುಬ್ಬಳ್ಳಿ ಮುಝಫರ್‌ಪುರ್ ಎಕ್ಸ್‌ಪ್ರೆಸ್ ರೈಲುಗಳು ಸೇರಿ ದೆಹಲಿ ಹಾಗೂ ಚಂಡೀಗಢ ಸಂಪರ್ಕಿಸುವ ಎರಡು ಸಂಪರ್ಕ ಕ್ರಾಂತಿ ರೈಲುಗಳು, ಉತ್ತರ ಪ್ರದೇಶದ ಗೋರಖ್‌ಪುರ ಎಕ್ಸ್‌ಪ್ರೆಸ್, ದೆಹಲಿ ಸಂಪರ್ಕಿಸುವ ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಕೂಡ ಕಾಲಿಡಲು ಆಗದಷ್ಟು ಪ್ರಯಾಣಿಕರಿಂದ ತುಂಬಿರುತ್ತವೆ.ಅಲ್ಲಿನ ನಿರುದ್ಯೋಗ, ಅನಕ್ಷರಸ್ಥತೆ, ಬಡತನ ಪರಿಣಾಮ ಕೆಲಸ ಅರಸಿ ಬರುವವರಿಗೆ ಈ ರೈಲು ಮಾರ್ಗಗಳು ಕರ್ನಾಟಕದ ದಾರಿ ತೋರುತ್ತಿವೆ. ಆದರೆ, ರಾಜ್ಯದೊಳಗಿನ ಹಲವೆಡೆ ರೈಲು ಸಂಪರ್ಕದ ಬೇಡಿಕೆ ಇನ್ನೂ ಕಡತದಲ್ಲೇ ಉಳಿದಿವೆ. ಹೀಗಾಗಿ ಅಭಿವೃದ್ಧಿ, ಉದ್ಯೋಗಸೃಷ್ಟಿಗೆ ಕಾರಣ ಆಗಬೇಕಾದ ರೈಲು ಮಾರ್ಗ ನಿರ್ಮಾಣ, ಸಂಪರ್ಕ ಇನ್ನೂ ಸರಿಯಾಗಿ ಸಾಧ್ಯವಾಗಿಲ್ಲ.
87 ಕಿ.ಮೀ. ಕೆಂಗೇರಿ-ಚಾಮರಾಜನಗರ, 130 ಕಿ.ಮೀ. ಉದ್ದದ ಮೈಸೂರು-ಕುಶಾಲನಗರ ಯೋಜನೆಗಳು ಲಾಭದಾಯಕವಲ್ಲ ಎಂಬ ಕಾರಣ ನೀಡಿ ರೈಲ್ವೆ ಇಲಾಖೆ ಬದಿಗಿರಿಸಿದೆ. ಬಹುನಿರೀಕ್ಷಿತ ಗಿಣಗೇರಾ ಹಾಗೂ ರಾಯಚೂರು ರೈಲ್ವೆ ಮಾರ್ಗದ ಕಾಮಗಾರಿ ಬರೋಬ್ಬರಿ 26 ವರ್ಷಗಳಿಂದ ನಡೆಯುತ್ತಲೇ ಇದೆ. ಬಾಗಲಕೋಟೆ-ಗಂಗಾವತಿ-ದರೋಜಿ ಯೋಜನೆಗೆ ರೈಲ್ವೆ ಸಚಿವಾಲಯ ಅಡ್ಡಗಾಲು ಹಾಕಿದೆ. ಮುಖ್ಯವಾಗಿ ಕಲ್ಯಾಣ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ನಡುವೆ ಸಂಪರ್ಕ ಕಲ್ಪಿಸುವ ಅಗತ್ಯವಿರುವ ಮೈಸೂರು-ಬೀದರ್ ನಡುವಿನ ನೇರ ರೈಲು ಸೇವೆ ಇನ್ನೂ ಪ್ರಸ್ತಾವನೆಯಲ್ಲೇ ಇದೆ. ಜತೆಗೆ ಬೆಂಗಳೂರಿನಿಂದ ರಾಜ್ಯದ ಹಲವೆಡೆ ನೇರ ರೈಲು ಪ್ರಸ್ತಾಪವಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.ಆದರೆ ಇವೆಲ್ಲ ರೈಲು ಯೋಜನೆಗಳು ಕುಂಟುತ್ತಲೇ ಸಾಗಿವೆ. ಹೊಸ ರೈಲುಗಳ ಬೇಡಿಕೆಗಳು ದಶಕಗಳಿಂದ ಇವೆ. ರಾಜ್ಯದ ಒಳಗಿನ ಕಾರ್ಮಿಕರು ಸುಲಭವಾಗಿ ಉದ್ಯೋಗಕ್ಕಾಗಿ ಓಡಾಡಲು ಸಾಧ್ಯವಾಗಬೇಕು ಎಂಬ ಒತ್ತಾಯವಿದೆ.--------ಕೋಟ್
ಜನಸಂದಣಿ ಹೆಚ್ಚಿದ್ದರೆ ಉತ್ತರ ಭಾರತಕ್ಕೆ ರೈಲು, ಫ್ಲೈಟುಗಳ ಸಂಪರ್ಕವನ್ನು ರೈಲ್ವೆ ಇಲಾಖೆ ಕಲ್ಪಿಸುವುದು ಸಹಜ. ಆದರೆ, ರಾಜ್ಯದ ಬೇಡಿಕೆ ಅನುಸಾರ ರೈಲುಗಳಿಗೂ ಆದ್ಯತೆ ಕೊಟ್ಟು ಆರಂಭಿಸಬೇಕು.-ಕೆ.ಎನ್.ಕೃಷ್ಣಪ್ರಸಾದ್,ರೈಲ್ವೆ ಸಾರಿಗೆ ತಜ್ಞ;Resize=(128,128))
;Resize=(128,128))
;Resize=(128,128))
;Resize=(128,128))