ರಾಜ್ಯ ಸರ್ಕಾರದ ಹಸಿವು ಮುಕ್ತ ಕರ್ನಾಟಕ ಉತ್ತಮ ನಡೆ

| N/A | Published : May 18 2025, 11:51 PM IST / Updated: May 19 2025, 12:55 PM IST

ಸಾರಾಂಶ

ರಾಜ್ಯ ಸರ್ಕಾರದ ಹಸಿವು ಮುಕ್ತ ಕರ್ನಾಟಕ ಉತ್ತಮ ನಡೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಹೇಳಿದರು.

  ಚಿತ್ರದುರ್ಗ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯು ಬಡವರ ಯೋಜನೆಯಾಗಿದ್ದು ಯಾರೊಬ್ಬರೂ ಹಸಿವಿನಿಂದ ಬಳಲಬಾರದು, ಪ್ರತಿಯೊಂದು ಬಡ ಕುಟಂಬಗಳೂ ನೆಮ್ಮದಿಯ ಜೀವನ ನಡೆಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಹಸಿವು ಮುಕ್ತ ಕರ್ನಾಟಕ ಉತ್ತಮ ನಡೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಹೇಳಿದರು.

ನಗರದ ಗಾರೇಹಟ್ಟಿಯ ಚೋಳೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಸಾಂಕೇತಿಕವಾಗಿ 10 ಕೆಜಿ ಅಕ್ಕಿ ವಿತರಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾರ್ವಜನಿಕರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಕೆಲಸ ಆಗಿದ್ದು, ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಜನರು ಕಚೇರಿಗಳಿಗೆ ಅಲೆದಾಡುವಂತಿಲ್ಲ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಪಾವತಿಯಾಗುತ್ತಿದೆ. ಇದೂ ಸಹ ಜನಪರ ಚಿಂತನೆಯಾಗಿದೆ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬದ ಪ್ರತಿ ಸದಸ್ಯರಿಗೂ ಪ್ರತಿ ತಿಂಗಳು ತಲಾ 05 ಕೆ.ಜಿ.ಅಕ್ಕಿ ನೀಡುತ್ತಿದ್ದು, ಹೆಚ್ಚುವರಿ 05 ಕೆಜಿ ಅಕ್ಕಿಯ ಬದಲಿಗೆ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 170 ರು. ಗಳಂತೆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಮಾರ್ಚ್ 2025ರ ಫೆಬ್ರವರಿಯಲ್ಲಿ ಸಂಪೂರ್ಣವಾಗಿ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.ಬಡ ಜನರ ಏಳಿಗೆ ಹಾಗೂ ಹಿತ ರಕ್ಷಣೆಗಾಗಿ ಸರ್ಕಾರ ಜನಪರ ಯೋಜನೆ, ಸೌಲಭ್ಯಗಳನ್ನು ನೀಡುತ್ತಿದ್ದು, ಜನರು ಇದರ ಸದುಪಯೋಗ ಪಡೆಯಬೇಕು. ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆಯ ಆಹಾರಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಬೇಡಿ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯು ಹಸಿವಿನಿಂದ ನರಳಬಾರದು ಮೂರು ಹೊತ್ತಿನ ಊಟವನ್ನು ಸಂತೃಪ್ತಿಯಿಂದ ಮಾಡಬೇಕು ಎನ್ನುವ ಅನುಪಮ ಕಾಳಜಿಯಿಂದ ಹುಟ್ಟಿಕೊಂಡ ಅನ್ನಭಾಗ್ಯ ಯೋಜನೆಯು ನಿಜವಾದ ಅರ್ಹ ಫಲಾನುಭವಿಗಳಿಗೆ ಸಿಗಬೇಕು ಎಂದರು.

ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಮಾತನಾಡಿ, ಹಸಿವು ಮುಕ್ತ ಕರ್ನಾಟಕ ಮಾಡುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ ಪ್ರತಿಯೊಬ್ಬರಿಗೂ ತಲಾ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆ ದುರುಪಯೋಗವಾದರೆ ಪಡಿತರ ಚೀಟಿ ರದ್ಧತಿಗೆ ಕ್ರಮವಹಿಸಲಾವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಆಹಾರ ನಿರೀಕ್ಷಕ ಎಸ್.ಆರ್.ಗಿರಿಧರ್, ನ್ಯಾಯಬೆಲೆ ಅಂಗಡಿ ಅಧ್ಯಕ್ಷ ಎಂ.ಭೀಮಣ್ಣ, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಸೇರಿದಂತೆ ನ್ಯಾಯಬೆಲೆ ಅಂಗಡಿ ಮಾಲೀಕರು ಇದ್ದರು.

Read more Articles on