ಕನ್ನಡಪ್ರಭ ವಾರ್ತೆ ಹಿರಿಯೂರು
ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ಸಂಘದ ನೇತೃತ್ವ ಜಿಲ್ಲೆಯ ರೈತರು ಮಾ.2ರಿಂದ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂಭಾಗ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.ನಗರದ ರೈತ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ತಾಲೂಕು ರೈತ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಬಯಲುಸೀಮೆಗೆ ನೀರು ಹರಿಸುವ ವಿಚಾರವಾಗಿ ಸರ್ಕಾರದ ಧೋರಣೆಯನ್ನು ಖಂಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಫೆ.4ರಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ ಫೆ.10ರಂದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಂದ್ ಆಚರಿಸಲಾಯಿತು. ಆನಂತರ ಚಿತ್ರದುರ್ಗಕ್ಕೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಸಮಾವೇಶ ನಡೆಸಿ ಸಚಿವರು ಶಾಸಕರು ಜಿಲ್ಲಾಧಿಕಾರಿಗಳಿಗೆ ಹಲವು ಮನವಿ ಮಾಡಿದ್ದೆವು ಎಂದು ಹೇಳಿದರು.ಕೇಂದ್ರ ಸರ್ಕಾರ ಘೋಷಿಸಿರುವ 5300 ಕೋಟಿ ರು. ಹಣ ಕೂಡಲೇ ಬಿಡುಗಡೆಗೊಳಿಸಬೇಕು. ರಾಜ್ಯ ಸರ್ಕಾರ ಬರುವ ಜೆಜಿ ಹಳ್ಳಿ ಹೋಬಳಿಯ ಗಾಯತ್ರಿ ಜಲಾಶಯ ಸೇರಿ 16 ಕೆರೆಗಳಿಗೆ ನೀರು ತುಂಬಿಸಲು ಬಜೆಟ್ ಅಧಿವೇಶನದಲ್ಲಿ ಕನಿಷ್ಠ 400 ಕೋಟಿ ರು. ಮೀಸಲು ಇಡಬೇಕು.ಜಿಲ್ಲೆಯ ಎಲ್ಲಾ ಮಣ್ಣಿನ ಕೆರೆಗಳಿಗೂ ನೀರು ತುಂಬಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. 7 ದಿನದೊಳಗಾಗಿ ರೈತರೊಂದಿಗೆ ಸರ್ಕಾರ ಸಭೆ ಕರೆದು ಭರವಸೆ ನೀಡಬೇಕು ಎಂದು ಮನವಿ ಮಾಡಲಾಗಿದ್ದರೂ ಸಹ ಇದುವರೆಗೂ ಯಾವುದೇ ಸಭೆ ನಡೆಸದೆ ಭರವಸೆ ನೀಡಿಲ್ಲ ಎಂದರು.
ತಾಲೂಕು ಅಧ್ಯಕ್ಷ ಬಳಗಟ್ಟೆ ಸಿ ವೆಂಕಟೇಶ್,ಆಲೂರು ಸಿದ್ದರಾಮಣ್ಣ, ರಂಗಸ್ವಾಮಿ, ಅರಳಿಕೆರೆ ತಿಪ್ಪೇಸ್ವಾಮಿ, ಸಣ್ಣ ತಿಮ್ಮಣ್ಣ, ಬಳಗಟ್ಟೆ ತಿಮ್ಮಯ್ಯ, ಮಂಜ ನಾಯಕ, ವೀರಣ್ಣಗೌಡ, ವಿರೂಪಾಕ್ಷ, ರಾಮಣ್ಣ,ಮೀಸೆ ಗೌಡಪ್ಪ, ಬಾಲಕೃಷ್ಣ, ಮಂಜುನಾಥ, ಶಿವಣ್ಣ, ಮೃತ್ಯುಂಜಯಪ್ಪ, ಜಯಣ್ಣ, ಶಿವಣ್ಣ, ನಾರಾಯಣಪ್ಪ, ಎಂಆರ್ ಈರಣ್ಣ, ಕೆ ಟಿ ರುದ್ರಮನಿ, ಕನ್ಯಪ್ಪ, ಬಾಲಕೃಷ್ಣ, ಸಣ್ಣೀರಪ್ಪ, ನಿಂಗಪ್ಪ, ರಾಮಕೃಷ್ಣ, ಅಶ್ವತಪ್ಪ, ನಾಗರಾಜಪ್ಪ, ಚಂದ್ರಪ್ಪ, ವೆಂಕಟೇಶ್ ಮುಂತಾದವರು ಹಾಜರಿದ್ದರು.