ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ: ಚುಕ್ಕಿ ನಂಜುಂಡಸ್ವಾಮಿ

| Published : Feb 14 2025, 12:30 AM IST

ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ: ಚುಕ್ಕಿ ನಂಜುಂಡಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ೮೯ನೆಯ ಜನ್ಮದಿನ ಅಂಗವಾಗಿ ರೈತ ಮುಖಂಡರು ಹೊಂಡರಬಾಳುವಿನ ಅಮೃತ ಭೂಮಿಯಲ್ಲಿರುವ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ೮೯ನೆಯ ಜನ್ಮದಿನ ಅಂಗವಾಗಿ ಗುರುವಾರ ಜಿಲ್ಲಾ ಕೇಂದ್ರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬಡವರ ರಕ್ತ ಹೀರುತ್ತಿರುವ ಮೈಕ್ರೋಫೈನಾನ್ಸ್ ಕಂಪನಿಗಳಿಗೆ ನೋಟಿಸ್ ಅಂಟಿಸುವ ಮೂಲಕ ಎಚ್ಚರಿಕೆ ದಿನವನ್ನಾಗಿ ಆಚರಣೆ ಮಾಡಲಾಯಿತು.ಮೊದಲಿಗೆ ಹೊಂಡರಬಾಳುವಿನ ಅಮೃತ ಭೂಮಿಯಲ್ಲಿರುವ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ, ನಂತರ ನಗರದ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕಿಗೆ ದಾಳಿ ಇಟ್ಟರು. ಅಲ್ಲಿ ಆರ್‌ಬಿಬಿ ನೀತಿ ನಿಯಮಗಳನ್ನು ಅನುಸರಿಸದ ಕಾರಣ ಫೈನಾನ್ಸ್ ವಿರುದ್ಧ ಧಿಕ್ಕಾರಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ನಬಾರ್ಡ್‌ನಿಂದ ಬರಬೇಕಾದ ಸಾಲದಲ್ಲಿ ಶೇ.೫೦ ರಷ್ಟು ಕಡಿತ ಮಾಡಿ, ಮೈಕ್ರೋ ಫೈನಾನ್ಸ್‌ಗಳ ಮೂಲಕ ಸಾಲ ಮಾಡಿಸಿ, ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಅಭಿವೃದ್ಧಿ ಹೆಸರಿನಲ್ಲಿ ರೈತರ ಜಮೀನುಗಳನ್ನು ವಶಪಡಸಿಕೊಂಡು, ಅವರಿಗೆ ವ್ಯವಸಾಯಕ್ಕೆ ಭೂಮಿ ಇಲ್ಲದಂತೆ ಮಾಡುವುದು, ರೈತರು ಈ ಬಗ್ಗೆ ಜಾಗೃತರಾಗಬೇಕಿದೆ ಎಂದರು. ಆರ್‌ಬಿಐ ನೀತಿ ನಿಯಮ ಅನುಸರಿಸದ ಹಾಗೂ ರಾಜ್ಯ ಸರ್ಕಾರ ಜಾರಿ ಮಾಡಿರುವ ಸುಗ್ರಿವಾಜ್ಞೆ ಮೀರುವ ಯಾವುದೇ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ತೆಗೆದುಕೊಂಡಿದ್ದರೆ ಮರುಪಾವತಿ ಮಾಡದೇ ಕಾನೂನು ಪ್ರಕಾರ ಇರುವ ಫೈನಾನ್ಸ್‌ಗಳಿಗೆ ಸಾಲ ಮರುಪಾವತಿಸಿ ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ ಆರ್‌ಬಿಬಿ ನೀತಿ ನಿಯಮಗಳನ್ನು ಅನುಸರಿಸಿ ಸಾಲ ನೀಡಿದ್ದರೆ ನಮ್ಮದೇನು ಅಭ್ಯಂತರವಿಲ್ಲ, ಸಾಲ ವಸೂಲಿ ಹೆಸರಿನಲ್ಲಿ ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಕಿರುಕುಳ ನೀಡಿದರೆ ಗ್ರಾಮಗಳಿಗೆ ತೆರಳಿ ನೋಟಿಸ್ ನೀಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಶೇ.೧೬ಕ್ಕಿಂತ ಹೆಚ್ಚು ಬಡ್ಡಿ ಪಡೆಯುವ ಹಾಗಿಲ್ಲ. ಆದರೆ, ಶೇ.೨೦ಕ್ಕಿಂತ ಹೆಚ್ಚು ಬಡ್ಡಿ ವಿಧಿಸಿ ವಸೂಲಿ ಮಾಡಲಾಗುತ್ತಿದೆ. ಆರ್‌ಬಿಐ ಮಾರ್ಗಸೂಚಿಗಳನ್ವಯ ಕಾನೂನಿನಡಿ ಫೈನಾನ್ಸ್ ವ್ಯವಹಾರ ಮಾಡಬೇಕು. ಆದರೆ, ಅದನ್ನು ಉಲ್ಲಂಘಿಸಿ ಶೇ.೨೪, ಶೇ.೩೩ ಬಡ್ಡಿ ವಿಧಿಸಿ ವಸೂಲಿ ಮಾಡುತ್ತಿರುವುದು ಖಂಡನೀಯ ಎಂದರು. ಆರ್‌ಬಿಐ ಮಾರ್ಗಸೂಚಿಗಳನ್ನು ನೀಡದಿದ್ದರೆ ಪ್ರಕರಣ ದಾಖಲಿಸಬೇಕಾಗುತ್ತದೆ. ಅಲ್ಲದೇ ಕನ್ನಡದಲ್ಲಿ ವ್ಯವಹಾರ ಮಾಡದೇ ಇಂಗ್ಲೀಷ್‌ನಲ್ಲಿ ಎಲ್ಲ ಪತ್ರ ವ್ಯವಹಾರ ಮಾಡಲಾಗುತ್ತಿದ್ದು ರೈತರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕನ್ನಡದಲ್ಲಿ ಪತ್ರವ್ಯವಹಾರ ಮಾಡಬೇಕು ಎಂದು ಎಚ್ಚರಿಸಿದರು. ಮುಖಂಡರಾದ, ಅಂಬಳೆ ಶಿವಕುಮಾರ್, ಬೆಟ್ಟದಪುರ ಬಸವಣ್ಣ, ಪುಟ್ಟಮಾದೇಗೌಡ, ಚಂಗಡಿ ಕರಿಯಪ್ಪ, ವೀರಭದ್ರಸ್ವಾಮಿ, ಸರಗೂರು ಚಂದ್ರು, ಪಾಪಣ್ಣ ಇತರರು ಭಾಗವಹಿಸಿದ್ದರು.