ಸಾರಾಂಶ
ಹುಬ್ಬಳ್ಳಿ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋವಿನ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಹಿಂದೂಗಳ ಭಾವನೆ ಕೆದಕುವ ಮೂಲಕ ರಾಜ್ಯದಲ್ಲಿ ಗಲಭೆ ಎಬ್ಬಿಸುವ ಹುನ್ನಾರವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು. ಜತೆಗೆ ಗಾಂಧಿ ಹತ್ಯೆಯಲ್ಲಿ ನೆಹರು ಪಾತ್ರವೂ ಇದೆ ಎಂದು ಆರೋಪಿಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿಯಾದಿಯಾಗಿ ಹಿಂದೂಗಳನ್ನು ಅಪಮಾನ ಮಾಡುವ ಕಾರ್ಯ ನಡೆಯುತ್ತಿದೆ. ಹಿಂದೂ ಹೋರಾಟಗಾರರನ್ನು ಜೈಲಿಗೆ ಕಳುಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ಯುವ ಕೆಲಸ ಮಾಡಿದ್ದಾರೆ. ಅಂಥವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮುಸ್ಲಿಮರಿಗೆ ಇಷ್ಟೊಂದು ಧೈರ್ಯ ಬರಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮುಖ್ಯ ಕಾರಣ. ಉತ್ತರ ಕನ್ನಡದಲ್ಲಿ ಗರ್ಭ ಧರಿಸಿದ್ದ ಹಸುವನ್ನೇ ಕೊಂದಿದ್ದಾರೆ. ಇದು ಯಾವ ದೇಶ. ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಗಲಭೆ ಎಬ್ಬಿಸುವ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದೆ ಎಂದರು.
ಗಾಂಧಿ ಕೊಲ್ಲಿಸಿದ್ದು ನೆಹರು?ಬಿಜೆಪಿಯವರು ಗೋಡ್ಸೆ ವಂಶಸ್ಥರು ಎಂಬ ಕಾಂಗ್ರೆಸ್‌ನ ಆರೋಪಕ್ಕೆ ಟಾಂಗ್ ನೀಡಿದ ಯತ್ನಾಳ, ಮಹಾತ್ಮ ಗಾಂಧೀಜಿಗೆ ಗೋಡ್ಸೆ ಹೊಡೆದಿದ್ದು ಒಂದೇ ಗೂಂಡು, ಇನ್ನೆರಡು ಗುಂಡುಗಳು ಎಲ್ಲಿಂದ ಬಂದವು? ಒಂದು ಗುಂಡು ಗೋಡ್ಸೆ ಹೊಡೆದಿದ್ದು ಎಂದು ಕೋರ್ಟಿನಲ್ಲಿ ವಾದ- ವಿವಾದ ಆಗಿದೆ. ಇನ್ನೆರಡು ಗುಂಡುಗಳನ್ನು ನೆಹರು ಹೊಡೆಸಿದರಾ? ಎಂದು ನಮಗೆ ಸಂಶಯವಿದೆ. ಗಾಂಧಿ ಅವರನ್ನು ಕೊಲ್ಲಿಸಿದ್ದು ನೆಹರು ಅವರೇ ಎಂದು ಗಂಭೀರವಾಗಿ ಆರೋಪಿಸಿದರು.