ಕನ್ನಡಪ್ರಭ ವಾರ್ತೆ ಹುಣಸೂರು ಪ್ರಗತಿ ಕಾಲೋನಿ ಅಭಿವೃದ್ಧಿ ಯೋಜನೆಯಡಿ ಅನುದಾನ ನೀಡಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ವಿಧಾನಸಭೆ ಅಧಿವೇಶನದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಬುಧವಾರ ಅಧಿವೇಶನದಲ್ಲಿ ಹರೀಶ್ ಗೌಡ ಚುಕ್ಕಿ ಪ್ರಶ್ನೆಯಡಿ ಅನುದಾನದ ನೀಡುವಲ್ಲಿ ಇಲಾಖೆ ಹೇಗೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎನ್ನುವುದನ್ನು ಎಳೆಎಳೆಯಾಗಿ ಸಭೆಯ ಮುಂದಿಟ್ಟರು. ಈ ವೇಳೆ ಮಾತನಾಡಿದ ಅವರು 2023-24ರಲ್ಲಿ ಪ್ರಗತಿ ಕಾಲೋನಿಯ ಯೋಜನೆಯಡಿ ತಾಲೂಕಿಗೆ ನಯಾಪೈಸೆಯನ್ನು ಇಲಾಖೆ ನೀಡಿಲ್ಲ. 2024-25ರಲ್ಲಿ ಒಂದು ಕೋಟಿ ರು. ಗಳ ಅನುದಾನ ನೀಡಿದ್ದು, ಅದರಲ್ಲಿ 33 ಲಕ್ಷ ರು. ಗಳು ಮಾತ್ರ ಬಿಡುಗಡೆಯಾಗಿದೆ. ಮೈಸೂರು ಜಿಲ್ಲೆಯ ಇನ್ನಿತರ ತಾಲೂಕುಗಳಿಗೆ ಎಷ್ಟೆಷ್ಟು ಅನುದಾನ ನೀಡಲಾಗಿದೆ ಎನ್ನುವ ತಮ್ಮ ಪ್ರಶ್ನೆಗೆ ಸಚಿವರು ಉತ್ತರ ನೀಡಿಲ್ಲ, ಆದರೆ ಕಳೆದ ವಿಧಾನಸಭೆ ಅಧಿವೇಶನದಲ್ಲಿ (2025ರ ಆ.20) ನಾನು ಕೇಳಿದ್ದ ಚುಕ್ಕಿ ಇಲ್ಲದ ಪ್ರಶ್ನೆಗೆ ಉತ್ತರ ನೀಡಿದ್ದು, ಅದರಂತೆ ಜಿಲ್ಲೆಗೆ ಪ್ರಗತಿ ಕಾಲೋನಿ ಯೋಜನೆಯಡಿ ಒಟ್ಟು 70 ಕೋಟಿ ರು. ಗಳ ಅನುದಾನ ನೀಡಲಾಗಿದೆ. ಈ ಪೈಕಿ ವರುಣ ವಿಧಾನಸಭೆ ಕ್ಷೇತ್ರಕ್ಕೆ 14.25 ಕೋಟಿ ರು., ಪಿರಿಯಾಪಟ್ಟಣಕ್ಕೆ 9.65 ಕೋಟಿ ರು., ಕೆ.ಆರ್. ನಗರಕ್ಕೆ 7 ಕೋಟಿ ರು., ಎಚ್.ಡಿ. ಕೋಟೆ 8.45 ಕೋಟಿ ರು. ಗಳು, ನಂಜನಗೂಡು 7 ಕೋಟಿ, ಚಾಮುಂಡೇಶ್ವರಿ 3.50 ಕೋಟಿ ರು., ಟಿ. ನರಸೀಪುರ 8.85 ಕೋಟಿ ರು. ಗಳು, ಚಾಮರಾಜ ಕ್ಷೇತ್ರ 5 ಕೋಟಿ, ನರಸಿಂಹರಾಜ ಕ್ಷೇತ್ರ 4 ಕೋಟಿ ರು. ಗಳ ಅನುದಾನನೀಡಲಾಗಿದೆ.ಆದರೆ ಹುಣಸೂರು ಕ್ಷೇತ್ರಕ್ಕೆ ಕೇವಲ ಒಂದು ಕೋಟಿ ರು.ಗಳು ಹಾಗೂ ಕೃಷ್ಣರಾಜ ಕ್ಷೇತ್ರಕ್ಕೆ ಒಂದು ಕೋಟಿ ರು.ಗಳ ಅನುದಾನ ನೀಡಲಾಗಿದೆ. ಯಾವ ಮಾನದಂಡದಡಿ ಅನುದಾನ ವಿತರಿಸಿದ್ದೀರಿ ಎನ್ನುವುದರ ಕುರಿತು ಸಚಿವರು ಮಾಹಿತಿ ನೀಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಹಳ್ಳಿಗೆ 15 ಸಾವಿರ ನೀಡಬೇಕಿದೆ ಹುಣಸೂರು ತಾಲೂಕಿನಲ್ಲಿ ಶೇ. 70ರಷ್ಟು ಪ.ಜಾತಿ, ಪ.ಪಂಗಡ, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರು ಇರುವ ತಾಲೂಕು ಆಗಿದೆ. ಸರ್ಕಾರ ಇದೀಗ ನೀಡಿರುವ ಅನುದಾನ ಒಟ್ಟು ಜನಸಂಖ್ಯೆಯ ಶೇ. 20ರಷ್ಟಿರುವ ಪ. ಜಾತಿ, ಶೇ. 15ರಷ್ಟಿರುವ ಪರಿಶಿಷ್ಟ ಪಂಗಡದ ಜನರ ಕಾಲೋನಿಗಳಿಗೆ ಹಂಚಲು ಸಾಧ್ಯವೇ? 200ಕ್ಕೂ ಹೆಚ್ಚು ಹಳ್ಳಿಗಳನ್ನುಹೊಂದಿರುವ ತಾಲೂಕಿಗೆ ಒಂದು ಕೋಟಿ ರು. ಹಂಚಿದರೆ 1 ರಿಂದ 2 ಮೀಟರ್ ಚರಂಡಿ ನಿರ್ಮಿಸಬಹುದಷ್ಟೆ. ರಾಜ್ಯ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಿದಂತೆ ತೋರುತ್ತಿದೆ. ಪ. ಪಂಗಡಕ್ಕಂತೂ ಅನುದಾನವೇ ಇಲ್ಲ.ಜಿಲ್ಲೆಗೆ 70 ಕೋಟಿ ಹಂಚಿಕೆ ಮಾಡಿದ್ದು, ಹುಣಸೂರಿಗೆ ಕೇವಲ ಒಂದು ಕೋಟಿ ರು. ಹಂಚಿಕೆ ಆಗಿದೆ, ಅಂದರೆ ಏನರ್ಥ ಎಂದು ಪ್ರಶ್ನಿಸಿದರು.ಸದಸ್ಯ ಕೃಷ್ಣಪ್ಪ ಮಧ್ಯೆ ಪ್ರವೇಶಿಸಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿ ಬಂದಿರುವ ಅವರು ಈ ರೀತಿಯ ತಾರತಮ್ಯ ನೀತಿ ಅನುಸರಿಸುತ್ತಾರೆಯೇ ಎಂದರೆ ಏನಿದು ಎಂದು ಬೇಸರಿಸಿದರು.ತಾರತಮ್ಯ ನೀತಿ ಅನುಸರಿಸಿಲ್ಲ: ಶಾಸಕ ಹರೀಶ್ ಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪ್ರಗತಿ ಕಾಲೋನಿ ಯೋಜನೆಯಡಿ ಹುಣಸೂರಿಗೆ ಒಂದು ಕೋಟಿ ನೀಡಲಾಗಿದ್ದು, ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ 270 ಲಕ್ಷ ರು.ಗಳ (9 ಕಾಮಗಾರಿಗಳು) ಅನುದಾನ ನೀಡಲಾಗಿದೆ. ಈ ಪೈಕಿ 7 ಕಾಮಗಾರಿಗಳು ಪ್ರಗತಿಯಲ್ಲಿದ್ದು, 2 ಕಾಮಗಾರಿ ಆರಂಭಿಸಿಬೇಕಿದೆ. ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಈ ಹಿಂದೆ ತಾವು ಲೋಕೋಪಯೋಗಿ ಸಚಿವರಾಗಿದ್ದ ವೇಳೆಯೇ ನೂರಾರು ಕೋಟಿ ರು. ಗಳ ಅನುದಾನದಡಿ ತಾಲೂಕಿನಾದ್ಯಂತ ಪ. ಜಾತಿ. ಜನಾಂಗಗಳ ಕಾಲೋನಿಯನ್ನು ಕಾಂಕ್ರೀಟೀಕರಣ ಮಾಡಲಾಗಿದೆ. ತಾರತಮ್ಯ ಮಾಡುವ ಉದ್ದೇಶವೂ ಇಲ್ಲ, ಮಾಡುವುದೂ ಇಲ್ಲ ಎಂದರು.
ಸಮಾಜ ಕಲ್ಯಾಣ ಇಲಾಖೆ ತಾರತಮ್ಯ
Hunsur, MLA G.D. Harish Gowda is upset
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.